ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗಂಗಾ ಸ್ನಾನ, ತುಂಗಾ ಪಾನಂ ಎಂಬ ನಾಡ್ನುಡಿ ಇದೆ. ಆದರೆ, ಅದಕ್ಕೆ ವಿರುದ್ಧವಾದ ಪರಿಸ್ಥಿತಿ ಈಗ ತುಂಗಾನದಿಯಲ್ಲಿ ಕಂಡುಬರುತ್ತದೆ. ತುಂಗಾನದಿ ನೀರು ಹಾಗೆ ಕುಡಿದರೇ ರೋಗರುಜಿನಿಗಳು ಬರೋದು ಗ್ಯಾರಂಟಿ ಎಂಬ ಸ್ಥಿತಿ ಶಿವಮೊಗ್ಗ ನಗರದಲ್ಲಿ ಇದೆ. ತುಂಗೆ ಪಾವಿತ್ರತೆ ಉಳಿಸುವ ಕೆಲಸ ಪಾಲಿಕೆಯಿಂದ ಆಗಬೇಕು ಎಂದು ಸರ್ವಪಕ್ಷದ ಪಾಲಿಕೆ ಸದಸ್ಯರು ಒತ್ತಾಯಿಸಿದರು.ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ತುಂಗಾನದಿಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಸದಸ್ಯ ಎಚ್.ಸಿ. ಯೋಗೀಶ್ ಮಾತನಾಡಿ, ನಗರದಲ್ಲಿ ಪ್ರತಿ ಮನೆಗೂ ಯುಜಿಡಿಯನ್ನು ಕಡ್ಡಾಯಗೊಳಿಸಿಲ್ಲ. ಇದೇ ಕಾರಣಕ್ಕೆ ಇಂದು ತುಂಗಾನದಿ ಕಲುಷಿತವಾಗುತ್ತಿದೆ. ಚರಂಡಿ ನೀರು ನದಿ ಸೇರುತ್ತಿರುವುದು ತಡೆಯಬೇಕಾದರೆ ಪ್ರತಿ ಮನೆಗೂ ಪರವಾನಿಗೆ ಕಡ್ಡಾಯಗೊಳಿಸಬೇಕು. ಯುಜಿಡಿ ಸಂಪರ್ಕ ಇಲ್ಲದ ಮನೆಗಳಿಗೆ ಪರವಾನಿಗೆ ನೀಡಬಾರದು ಎಂದು ಒತ್ತಾಯಿಸಿದರು.ಬಿ.ಎ.ರಮೇಶ್ ಹೆಗ್ಡೆ ಮಾತನಾಡಿ, ಕಲುಷಿತ ಆಗುತ್ತಿರುವ ತುಂಗೆಯ ಪಾವಿತ್ರತೆ ಕಾಪಾಡುವ ಕೆಲಸ ಪಾಲಿಕೆಯಿಂದಲೇ ಆಗಬೇಕು. ಪಾಲಿಕೆಯಲ್ಲಿ ಯುಜಿಡಿಗೆ ವಿಶೇಷ ಅನುದಾನ ಮೀಸಲಿಟ್ಟು, ಯಾವ ಮನೆಗಳಿಗೆ ಯುಜಿಡಿ ಸಂಪರ್ಕ ಇಲ್ಲವೋ, ಅಂತವರಿಗೆ ಪಾಲಿಕೆಯಿಂದಲೇ ಉಚಿತವಾಗಿ ಯುಜಿಡಿ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಕೊಳಚೆ ನೀರು ನದಿಗೆ ಹರಿಸದಂತೆ ಮಾಡಿ:ನಗರದ ಕೊಳಚೆ ನೀರು, ಯುಜಿಡಿ ನೀರು ಸೇರಿದಂತೆ ಕಸವೆಲ್ಲ. ನೇರವಾಗಿ ನದಿಗೆ ಸೇರುತ್ತಿದೆ. ಯುಜಿಡಿ ಕಾಮಗಾರಿ ಆರಂಭವಾಗಿ 10 ವರ್ಷಗಳೇ ಕಳೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಯುಜಿಡಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ, ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕಕ್ಕೆ ಯುಜಿಡಿ ನೀರು ಹರಿಯುವಂತೆ ಮಾಡಬೇಕಿದೆ. ಇದು ಪೂರ್ಣಗೊಂಡರೆ, ಕೊಳಚೆ ನೀರು ನದಿಗೆ ಸೇರುವುದಿಲ್ಲ. ಈಗಾಗಲೇ ಕೊಳಚೆ ನೀರು ನದಿಗೆ ಸೇರುವುದಿಲ್ಲ. ಕೊಳಚೆ ನೀರು ನದಿಗೆ ಸೇರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಆದರೂ ಪ್ರಯೋಜನ ಮಾತ್ರ ಆಗಿಲ್ಲ ಎಂದು ಅನೇಕ ಸದಸ್ಯರು ದೂರಿದರು.
ಇ.ವಿಶ್ವಾಸ್ ಮಾತನಾಡಿ, ನಗರದಲ್ಲಿ ಕೆಲ ಬಡಾವಣೆಯ ಕೊಳಚೆ ನೀರು ಚರಂಡಿ ಮೂಲಕ ಕೆರೆಗಳಿಗೆ ಸೇರುತ್ತಿದೆ. ಇದನ್ನು ಸಹ ತಡೆಯಬೇಕು. ಇಲ್ಲವಾದರೆ ಮುಂದೆ ಕೆರೆಗಳ ನೀರು ಸಹ ಸಂಪೂರ್ಣವಾಗಿ ಕಲುಷಿತವಾಗಲಿದೆ ಎಂದು ಮನವಿ ಮಾಡಿದರು.ಪಾಲಿಕೆ ಸದಸ್ಯ ಸತ್ಯನಾರಾಯಣ ಮಾತನಾಡಿ, ಮಲವಗೊಪ್ಪ ವಾರ್ಡ್‌ನಲ್ಲಿ ಯುಜಿಡಿ ವ್ಯವಸ್ಥೆಯೇ ಇಲ್ಲ. ಹೀಗಾಗಿ, ವಾರ್ಡ್‌ನ ಕೊಳಚೆ ನೀರೆಲ್ಲ ಚರಂಡಿ ಮೂಲಕ ಕೆರೆ ಸೇರುತ್ತಿದೆ ಎಂದು ತಿಳಿಸಿದರು.
ನಾಗರಾಜ್ ಕಂಕಾರಿ ಮಾತನಾಡಿ, ಕೆಲವಡೆ ಮ್ಯಾನ್ ಹೋಲ್‌ಗಳ ನಡುವೆ ಪೈಪ್ ಇಲ್ಲ. ಇದರಿಂದ ಸಣ್ಣ ಮಳೆ ಬಂದರೂ ನೀರು ಹುಕ್ಕಿ ರಸ್ತೆಗೆ ಬರುತ್ತಿದೆ. ಇಂತಹ ಸಮಸ್ಯೆಯನ್ನು ಗುರತಿಸಿ ಸರಿ ಮಾಡಬೇಕು. ಇನ್ನೂ ಹಲವಡೆ ಮ್ಯಾನ್‌ಹೋಲ್ ಕೊಳಚೆ ನೀರು ರಾಜಕಾಲುವೆಗಳಿಗೆ ಸೇರುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.ಯುಜಿಡಿ ಸಂಪರ್ಕ ಕಡ್ಡಾಯ:
ನಗರದಲ್ಲಿ ಹಲವು ಮನೆಗಳಿಗೆ ಯುಜಿಡಿ ಸಂಪರ್ಕ ಇಲ್ಲದಿರುವುದರಿಂದ ಕೊಳಚೆ ನೀರು ಚರಂಡಿ ಮೂಲಕ ನದಿಗೆ ಸೇರುತ್ತಿದೆ. ಈ ಸಂಬಂಧ ಖಾಸಗಿ ಏಜೆಸ್ಸಿಗಳ ಮೂಲಕ ಪ್ರತಿ ಮನೆಯಲ್ಲಿ ಯುಜಿಡಿ ಸಂಪರ್ಕ ನೀಡಲಾಗಿದೆಯೇ, ಇಲ್ಲವೇ ಎಂದು ಸಮೀಕ್ಷೆ ಮಾಡಿಸಿ ನಂತರ ಕಡ್ಡಾಯವಾಗಿ ಎಲ್ಲರೂ ಯುಜಿಡಿ ಸಂಪರ್ಕ ಪಡೆಯಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.ಕೊಳಚೆ ನೀರು ನಿರ್ವಹಣಾ ಮಂಡಳಿ ಎಂಜಿನಿಯರ್ ಮಿಥುನ್ ಮಾತನಾಡಿ, ಪ್ರಮುಖವಾಗಿ ಸೀಗೆಹಟ್ಟಿ, ಆಟೋಕಾಂಪ್ಲೆಕ್ಸ್, ಗುರುಪುರ, ಕೋಟೆ ರಸ್ತೆ, ಗುಂಡಪ್ಪ ಶೆಡ್‌ಗಳಲ್ಲಿ ವೆಟ್‌ವೆಲ್‌ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಆಟೋ ಕಾಂಪ್ಲೆಕ್ಸ್, ಸೀಗೆಹಟ್ಟಿ, ಕೋಟೆ ರಸ್ತೆಯ ವೆಟ್‌ವೆಲ್‌ಗಳ ನಿರ್ವಹಣೆಗೆ ತಲಾ 3ರಂತೆ ಮೂರು ಪಾಳಿ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಲು ಸಿಬ್ಬಂದಿಗಳ ಅಗತ್ಯವಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ್ ನಾಯಕ್, ಸದಸ್ಯರಾದ ಶಂಕರ್ ಗನ್ನಿ, ಧೀರರಾಜ್ ಹೊನ್ನವಿಲೆ, ಜ್ಞಾನೇಶ್ವರ, ವಿಶ್ವನಾಥ್ ಮೊದಲಾವರಿದ್ದರು.- - - ಕೋಟ್‌ಗಳುಹಲವು ವರ್ಷಗಳಿಂದ ಸಾಕಷ್ಟು ಸಂಘ ಸಂಸ್ಥೆಗಳು ಶುದ್ಧ ತುಂಗೆಗಾಗಿ ಹೋರಾಟ ಮಾಡುತ್ತ ಬಂದಿದ್ದರು ಪರಿಣಾಮ ಸೊನ್ನೆ
- ಯಮುನಾ ರಂಗೇಗೌಡ, ಪಾಲಿಕೆ ಸದಸ್ಯೆನೀರಿನ ಗುಣಮಟ್ಟ ಪರೀಕ್ಷೆಗೆ ಲ್ಯಾಬ್ ನಿರ್ಮಾಣ ಮಾಡಲು ಪಾಲಿಕೆಯಲ್ಲಿ ಹಣ ಇಟ್ಟಿದ್ದೇವೆ. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ
- ಮೆಹಕ್ ಷರೀಫ್, ವಿಪಕ್ಷ ನಾಯಕಿಸ್ಮಾರ್ಟ್ ಸಿಟಿ ಹಳೆ ಸೇತುವೆಯಿಂದ ಹೊಸ ಸೇತುವೆಯವರೆಗೆ ಕೋಟ್ಯಂತರ ರು. ವೆಚ್ಚದಲ್ಲಿ ಪ್ರಾಜೆಕ್ಟ್ ತಯಾರಿಸಿ ಅಭಿವೃದಿಗೊಳಿಸಲಾಗಿದೆ. ಆದರೂ ತುಂಗೆಯ ಒಡಲಿಗೆ ಮಲೀನ ನೀರು ಸೇರುತ್ತಲೆ ಇದೆ. ಇವತ್ತಿಗೂ ಹಲವೆಡೆ ಫಿಟ್ ವ್ಯವಸ್ಥೆ ಇದೆ. ಮಳೆ ನೀರು ಮತ್ತು ಟಾಯ್ಲೆಟ್ ನೀರು ಎಲ್ಲವೂ ಮಳೆಗಾಲದಲ್ಲಿ ಮೇಲೆ ಉಕ್ಕಿ ಹರಿದು ಚಾನಲ್ ಪಾಲಾಗುತ್ತಿದೆ. ಆಟೋ ಕಾಂಪ್ಲೆಕ್ಸ್‌ನ ಎಲ್ಲ ತ್ಯಾಜ್ಯ ನೀರು ಚಾನಲ್‌ಗೆ ಸೇರುತ್ತಿದೆ
- ನಾಗರಾಜ್ ಕಂಕಾರಿ, ಪಾಲಿಕೆ ಸದಸ್ಯ- - - ಬಾಕ್ಸ್
3 ತಿಂಗಳೊಳಗೆ ಸಂಪೂರ್ಣ ವರದಿ: ಆಯುಕ್ತತುಂಗೆಯ ಮಲೀನಕ್ಕೆ ಕಾರಣವಾದ ನಿರ್ದಿಷ್ಟ ಅಂಶಗಳನ್ನು ಪತ್ತೆ ಹಚ್ಚಲು ತಜ್ಞರಿಂದ ನೀರಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ 3 ತಿಂಗಳಿನಲ್ಲಿ ಸಂಪೂರ್ಣ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ತಿಳಿಸಿದರು.ತುಂಗಾ ನದಿಯಲ್ಲಿ ಅಲ್ಯೂಮಿನಿಯಂ ಅಂಶ ನೀರಿನಲ್ಲಿ ಇದೆ ಎಂದು ಗಮನಕ್ಕೆ ಬಂದಾಗ, ಎಲ್ಲಾ ವಿಭಾಗಗಳೊಂದಿಗೆ ಚರ್ಚೆ ಮಾಡಿ, ಎಲ್ಲಿಂದ ಬಂತು, ಹೇಗೆ ಬಂತು, ಕಲುಷಿತ ನೀರಿಗೆ ಈ ಅಂಶ ಸೇರ್ಪಡೆಯಾದ ಬಗ್ಗೆ ಅಧ್ಯಯನಕ್ಕೆ ಪ್ರಾರಂಭ ಮಾಡಿದ್ದೇವೆ. 9 ಕಡೆ ನೀರಿನ ಸ್ಯಾಪಲ್ ಸಂಗ್ರಹಿಸಿ ಕೊನೆಗೆ ಗಾಜನೂರು ಡ್ಯಾಮ್ ನಿಂದಲೂ ಸಂಗ್ರಹಿಸಿದಾಗ ಎಲ್ಲಾ ಕಡೆಯೂ ಅಲ್ಯೂಮಿನಿಯಂ ಅಂಶ ಇರುವುದು ಖಾತರಿಯಾಗಿದೆ ಎಂದು ತಿಳಿಸಿದರು. ಈಗ ನೀರಿನ ಮೂಲದಲ್ಲಿ ಶೃಂಗೇರಿಯವರೆಗೆ ಮತ್ತು ಭದ್ರಾನದಿ ಮೂಲದಲ್ಲೂ ದೊಡ್ಡ ಮಟ್ಟದಲ್ಲಿ ತಜ್ಞರಿಂದ ಮೂಲವನ್ನು ಪರೀಕ್ಷಿಸಲು ಕ್ರಮಕೈಗೊಳ್ಳಲಾಗಿದೆ. ಪರಿಣಿತರು ನೀರಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ 3 ತಿಂಗಳಿನಲ್ಲಿ ಸಂಪೂರ್ಣ ವರದಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ₹20 ಲಕ್ಷ ವೆಚ್ಚವಾಗಲಿದೆ. ಪಾಲಿಕೆ ಅದನ್ನು ಬರಿಸಲಿದೆ ಎಂದು ಮಾಹಿತಿ ನೀಡಿದರು.
ಇನ್ನೂ ಶೇ.30 ರಷ್ಟು ಜನ ಯುಜಿಡಿ ಸಂಪರ್ಕಹೊಂದಿಲ್ಲ. ಒಳಚರಂಡಿ ವಿಭಾಗ 5 ಹಂತದಲ್ಲಿ ಮಲೀನ ನೀರನ್ನು ಬೇರ್ಪಡಿಸಿ, ಶುದ್ಧಿಕರಣಗೊಳಿಸಿ ಬಳಿಕ ತುಂಗೆಗೆ ಬಿಡುವ ಕಾರ್ಯ ಮಾಡಬೇಕು. ಈ ಬಗ್ಗೆ ಅನೇಕ ಚರ್ಚೆಗಳಾಗಿದೆ. ಸೂಕ್ತ ಯೋಜನೆ ನಿರ್ಮಿಸಿ ಸಮಸ್ಯೆ ಬಗೆಹರಿಸಲು 15 ದಿನಗಳ ಗಡವುನ್ನು ಈಗಾಗಲೇ ಡಿ.ಸಿ.ಯವರು ನೀಡಿದ್ದಾರೆ. ಆದರೆ, ಅದು ಕಾರ್ಯರೂಪಕ್ಕೆ ಬರಲು ತಿಂಗಳುಗಳೇ ಹಿಡಿಯುತ್ತದೆ ಎಂದು ವಿವರಿಸಿದರು.- - - ಬಾಕ್ಸ್-2 ಶಾಸಕ ಎಸ್.ಎನ್.ಚನ್ನಬಸಪ್ಪ ಗರಂ
ನಗರದ ತುಂಗಾನದಿ ಸೇತುವೆ ಮೇಲೆ ಹೋಗುವವರು ಬೈಕ್, ಕಾರುಗಳನ್ನು ನಿಲ್ಲಿಸಿ ಕಸವನ್ನು ನದಿಗೆ ಎಸೆದು ಹೋಗುತ್ತಿರುವುದು ಸಾಮಾನ್ಯವಾಗಿದೆ. ಜನರಿಗೆ ಇದರ ಬಗ್ಗೆ ಅರಿವು ಇಲ್ಲವಾಗಿದೆ. ಅವರಿಗೆ ಅರಿವು ಮೂಡಿಸುವ ಸಲುವಾಗಿ ಯೋಜನೆ ರೂಪಿಸಿದರೂ ಶಾಸಕರು, ಮೇಯರ್ ಅವರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಬೃಹಸ್ಪತಿ ಅಧಿಕಾರಿಗಳು ಇದ್ದಾರೆ ಎಂದ ಶಾಸಕ ಚನ್ನಬಸಪ್ಪ ಸಭೆಯಲ್ಲಿ ಕಿಡಿಕಾರಿದರು.ಇಲ್ಲಿ ಕಸ ಹಾಕಬಾರದು ಎಂದು ಒಂದು ಬೋರ್ಡ್ ಹಾಕಲು ಅಧಿಕಾರಿಗಳಿಗೆ ಆಗಲ್ಲ. ಇದಕ್ಕೋಸ್ಕರ ಸಭೆ ಕರೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಯಾರಿಗೆ ಅವಮಾನ ಇದು. 5 ವರ್ಷದಲ್ಲಿ ಸೇತುವೆ ಬಳಿ ಕಸ ಹಾಕದಂತೆ ಬೋರ್ಡ್ ಹಾಕಲು ಆಗಲ್ಲ ಎಂದರೆ ಅದೇನು ಬ್ರಹ್ಮವಿದ್ಯೆಯೇ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ ಚನ್ನಬಸಪ್ಪ, ನೀವು ಮೇಯರ್ ಮಾತನ್ನೂ ಕೇಳಲ್ಲ, ಸದಸ್ಯರ ಮಾತನ್ನೂ ಕೇಳಲ್ಲ. ಇನ್ಯಾರ ಮಾತು ಕೇಳುತ್ತೀರಿ, ಕುಡಿಯುವ ನೀರಿಗೆ ಏನೇನೂ ಸೇರುತ್ತಿದೆ ಗೊತ್ಯಿದೆಯೇ, ನಿಮ್ಮ ನಿರ್ಲಕ್ಷ್ಯದಿಂದಾಗಿ ಮಾಂಸದ ತ್ಯಾಜ್ಯ ನದಿಗೆ ಸೇರುತ್ತಿದೆ. ಇದಕ್ಕೆ ಯಾರು ಜವಾಬ್ದಾರಿ, ಅಧಿಕಾರಿಗಳಿಗೆ ಜವಬ್ದಾರಿ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಕೇಳಿದರೆ ಯುಜಿಡಿ ಇಲ್ಲ, ಯುಜಿಡಿ ಇಲ್ಲ ಎನ್ನುತ್ತೀರಿ, ನಮ್ಮ ತಾತ, ಮುತ್ತಾತನ ಕಾಲದಲ್ಲಿ ಯುಜಿಡಿ ಇತ್ತಾ? ಇವತ್ತು ಬದಲಾದ ಕಾಲಘಟ್ಟದಲ್ಲಿ ತುಂಗೆ ಉಳಿಸಿ ಎಂದು ವಿವಿಧ ಸಂಘಟನೆಗಳು ಬೀದಿಗಳಿದು ಹೋರಾಟ ಮಾಡುವ ಸನ್ನಿವೇಶ ಬಂದಿರುವುದು ದುರಂತ. ಇದಕ್ಕೆಲ್ಲ ನಿಮ್ಮ ನಿರ್ಲಕ್ಷ್ಯವೇ ಕಾರಣ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.- - - -27ಎಸ್‌ಎಂಜಿಕೆಪಿ01: ಶಿವಮೊಗ್ಗದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.-27ಎಸ್‌ಎಂಜಿಕೆಪಿ01: ಶಿವಮೊಗ್ಗದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.