ಮ್ಯಾರಥಾನ್‌ ಜನಸ್ಪಂದನ!

| Published : Nov 28 2023, 12:30 AM IST

ಸಾರಾಂಶ

ಬೆಂಗಳೂರಲ್ಲಿ ಇಡೀ ದಿನ ಸಿಎಂ ಜನತಾದರ್ಶನ. 3500ಕ್ಕೂ ಹೆಚ್ಚು ಅಹವಾಲು ಸ್ವೀಕಾರ. ರಾಜ್ಯದೆಲ್ಲೆಡೆಯ ಅಧಿಕಾರಿಗಳನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಂಪರ್ಕಿಸಿ ಅರ್ಜಿ ಇತ್ಯರ್ಥ. ಖಾತೆ, ಪಹಣಿಗೆ ಜನ ನನ್ನಲ್ಲಿಗೆ ಬರಬೇಕಾ?: ಅಧಿಕಾರಿಗಳಿಗೆ ತರಾಟೆ. ಮುಂದೆ ಇದೇ ರೀತಿ ಹೆಚ್ಚು ಅರ್ಜಿ ಬಂದರೆ ಕಠಿಣ ಕ್ರಮದ ಎಚ್ಚರಿಕೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಜನಸ್ಪಂದನ ಕಾರ್ಯಕ್ರಮದಲ್ಲಿ ಬಹುತೇಕರು ಖಾತೆ, ಪಹಣಿ, ಪೋಡಿ ಮತ್ತಿತರ ಜಿಲ್ಲಾ ಮಟ್ಟದಲ್ಲೇ ಪರಿಹಾರ ಆಗಬಹುದಾದ ಸಮಸ್ಯೆಗಳೊಂದಿಗೆ ಬಂದಿದ್ದಾರೆ. ಮೂರು ತಿಂಗಳಲ್ಲಿ ಮತ್ತೊಮ್ಮೆ ಜನಸ್ಪಂದನ ನಡೆಸುತ್ತೇನೆ. ಆ ವೇಳೆ ಅರ್ಜಿಗಳು ಹೆಚ್ಚು ಬಂದರೆ ತಳಮಟ್ಟದ ಅಧಿಕಾರಿಗಳನ್ನೇ ಹೊಣೆ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗಿರುವ 3,812 ಅರ್ಜಿಗಳನ್ನು ಹದಿನೈದು ದಿನಗಳ ಒಳಗಾಗಿ ವಿಲೇವಾರಿ ಮಾಡಿ ವರದಿ ಸಲ್ಲಿಸಬೇಕು. ಕಾನೂನು ಪ್ರಕಾರ ಇದ್ದರೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಯಾವ ಕಾನೂನು ಸಮಸ್ಯೆಯಿಂದ ಪರಿಹಾರ ಒದಗಿಸಲು ಆಗಿಲ್ಲ ಎಂಬುದನ್ನು ಕಡ್ಡಾಯವಾಗಿ ಅಹವಾಲು ಸಲ್ಲಿಸಿದವರಿಗೆ ಹಿಂಬರಹ ನೀಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ ಅವರು ಬಳಿಕ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಜನರು ಖಾತೆ, ಪಹಣಿ, ಪೋಡಿಗಾಗಿ ಮುಖ್ಯಮಂತ್ರಿಗಳ ಬಳಿಗೆ ಬರಬೇಕಾ? ಇದು ತಳಮಟ್ಟದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಜನರ ಕೆಲಸದ ವಿಳಂಬವೂ ಭ್ರಷ್ಟಾಚಾರದ ಮತ್ತೊಂದು ರೂಪ. ಇನ್ನು ಮುಂದೆ ಇಂತಹ ವಿಳಂಬಗಳು ಆಗದಂತೆ ಹಿರಿಯ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಬೇಕು. ಕನಿಷ್ಠ ಮೂರು ತಿಂಗಳಿಗೊಮ್ಮೆ ಜನತಾ ಸ್ಪಂದನ ನಡೆಸುತ್ತೇನೆ. ಆಗ ಇಷ್ಟು ಅರ್ಜಿಗಳು ಬಂದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಏನೋ ಮುಖ್ಯಮಂತ್ರಿಗಳು ಹೇಳಿದರು ಎಂದು ಲಘುವಾಗಿ ಪರಿಗಣಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಕಚೇರಿಗಳಿಗೆ ಅನಿರೀಕ್ಷಿತ ಭೇಟಿ- ಸಿಎಂ:ಖಾತೆ, ಸರ್ವೆ, ಪಹಣಿ, ಪೋಡಿ ಮಾಡಿಕೊಡಿ ಎಂದು ಜನರು ಮುಖ್ಯಮಂತ್ರಿಗಳ ಬಳಿ ಬರಬೇಕಾ? ಅಲ್ಲೇ ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಎಸಿಗಳು ಬಗೆಹರಿಸಬಹುದು. ಹೀಗಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ವಿಡಿಯೋ ಸಂವಾದದ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಲು ಸೂಚಿಸಿದ್ದೇನೆ. ಜತೆಗೆ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಸ್ಟೆಲ್‌, ಆಸ್ಪತ್ರೆ, ಪೊಲೀಸ್‌ ಠಾಣೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ನಾನೇ ಖುದ್ದಾಗಿ ಕೆಲ ಕಚೇರಿಗಳಿಗೆ ಭೇಟಿ ನೀಡುತ್ತೇನೆ. ಆ ವೇಳೆ ನಿರ್ಲಕ್ಷ್ಯ ಮಾಡಿದವರು ಎಷ್ಟೇ ಎತ್ತರದಲ್ಲಿರುವ ಅಧಿಕಾರಿಯಾದರೂ ಕಠಿಣ ಕ್ರಮ ಕೈಗೊಳತ್ತೇನೆ ಎಂದು ಎಚ್ಚರಿಸಿದರು.ಎಲ್ಲಾ ವಿಕಲಚೇತನರಿಗೂ ದ್ವಿಚಕ್ರ ವಾಹನ: ಬಹುತೇಕ ಅರ್ಜಿಗಳು ಕಂದಾಯ, ಪೊಲೀಸ್‌ ಹಾಗೂ ಗೃಹಲಕ್ಷ್ಮೀ, ಬಿಬಿಎಂಪಿ, ಪಿಂಚಣಿ ಮತ್ತಿತರ ಸಮಸ್ಯೆಗಳನ್ನು ಒಳಗೊಂಡಿವೆ. ಮನೆ ಕೊಡಿ, ಕೆಲಸ ಕೊಡಿ ಎಂದು ಕೆಲವು ಅರ್ಜಿ ಬಂದರೆ ವಿಕಲಚೇತನರು ದ್ವಿಚಕ್ರ ವಾಹನಕ್ಕಾಗಿ ಹೆಚ್ಚು ಅರ್ಜಿ ತಂದಿದ್ದಾರೆ. ನಮ್ಮ ಸರ್ಕಾರದಿಂದ 4 ಸಾವಿರ ದ್ವಿಚಕ್ರ ವಾಹನ ನೀಡಲು ನಿರ್ಧರಿಸಿದ್ದು, ಅರ್ಜಿ ಸಲ್ಲಿಸಿರುವ ಎಲ್ಲಾ ವಿಕಲಚೇತನರಿಗೂ ಕೂಡಲೇ ದ್ವಿಚಕ್ರವಾಹನ ನೀಡುತ್ತೇವೆ ಎಂದು ಭರವಸೆ ನೀಡಿದರು.ಜಿಲ್ಲಾಧಿಕಾರಿಗಳ ವಿರುದ್ಧ ಗರಂ:

ಇದು ಜನತಾದರ್ಶನ ಅಲ್ಲ ಬದಲಿಗೆ ಜನತಾ ಸ್ಪಂದನ. ಎರಡು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತಾದರೂ ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದೆ. ಹೀಗಾಗಿ ಜಿಲ್ಲಾ ಮಟ್ಟದಲ್ಲೇ ಜನತಾ ಸ್ಪಂದನ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದ್ದು, ಉಳಿದ ಜಿಲ್ಲೆಗಳಿಂದ ವರದಿಯೇ ಬಂದಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲೇ ಸಮಸ್ಯೆಗಳು ಬಗೆಹರಿಸಿದರೆ ಜನರು ಖರ್ಚು ಇಟ್ಟುಕೊಂಡು ಇಷ್ಟು ದೂರ ಬರಬೇಕಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

3 ತಿಂಗಳಿಗೊಮ್ಮೆ ಜನಸ್ಪಂದನ: ಸಿಎಂ2ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳ ಬಳಿಕ ಮೊದಲ ಬಾರಿ ಪೂರ್ಣ ಪ್ರಮಾಣದ ಜನತಾದರ್ಶನ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನುಮುಂದೆ 3 ತಿಂಗಳಿಗೊಮ್ಮೆ ಜನಸ್ಪಂದನ ನಡೆಸುವುದಾಗಿ ತಿಳಿಸಿದ್ದಾರೆ. ಸೋಮವಾರ ನಡೆದ ಜನಸ್ಪಂದನಕ್ಕೆ ರಾಜ್ಯದ ಮೂಲೆಮೂಲೆಯಿಂದ ಜನ ಬಂದಿದ್ದನ್ನು ಗಮನಿಸಿದ ಅವರು, ಇನ್ನುಮುಂದೆ ಕನಿಷ್ಠ 3 ತಿಂಗಳಿಗೊಮ್ಮೆಯಾದರೂ ಈ ಕಾರ್ಯಕ್ರಮ ನಡೆಸುತ್ತೇನೆ ಎಂದು ಹೇಳಿದ್ದಾರೆ.