ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬರಗಾಲ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ನಾವು ಮಿಕ್ಕ ರಾಜ್ಯಕ್ಕಿಂತ ಹೆಚ್ಚು ತೆರಿಗೆ ನೀಡುತ್ತಿದ್ದೇವೆ. ಆದರೂ ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಹಿಂದೆಮುಂದೆ ನೋಡುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಆರೋಪಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸದ್ಯ ಕುಡಿಯುವ ನೀರಿಗೆ ಹಾಗೂ ಮೇವಿಗೆ ಕೊರತೆಯಿಲ್ಲ. ಸುಮಾರು ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ. ₹17 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ಕೇಳಿದ್ದೇವೆ. ಆದರೆ, ಕೇಂದ್ರ ಸರ್ಕಾರಕ್ಕೆ ಸಮಸ್ಯೆ ಕೇಳುವ ಸೌಜನ್ಯವೂ ಇಲ್ಲ ಎಂದರು.ಬರ ನಿರ್ವಹಣೆಗೆ ಜಿಲ್ಲಾಧಿಕಾರಿ ಖಾತೆಗೆ ಹಣ ಹಾಕಲಾಗಿದೆ. ಏಳು ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಸದ್ಯಕ್ಕೆ ವಿದ್ಯುತ್ ಸಮಸ್ಯೆಯಿಲ್ಲ. ಲೋಡ್ ಶೆಡ್ಡಿಂಗ್ ಎಲ್ಲೂ ಮಾಡಿಲ್ಲ. ಅನವಶ್ಯಕ ಲೋಡ ಶೆಡ್ಡಿಂಗ್ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯುತ್ ಇಲ್ಲದೆ ಮಕ್ಕಳಿಗೆ ಓದಲು ಸಮಸ್ಯೆಯಾದರೆ ನಾನು ಬಿಡುವುದಿಲ್ಲ ಎಂದು ಹೇಳಿದರು.
ಅಡಕೆ ಸುಲಿಯುವ ಯಂತ್ರಗಳಿಗೆ ಪ್ರತ್ಯೇಕ ಮೀಟರ್ ಅಳವಡಿಕೆ ವಿಚಾರವಾಗಿ ಸಣ್ಣ ರೈತರಿಗೆ ಉಚಿತ ವಿದ್ಯುತ್ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೇನೆ. ಈ ಹಿಂದಿನ ಸರ್ಕಾರದವರೇ ಮಾಡಿರುವುದು ಇದು. ಆರಗ ಜ್ಞಾನೇಂದ್ರ ಅವರು ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಮನಸಿಗೆ ಬಂದ ಹಾಗೆ ಮಾತನಾಡುವುದು ಬಿಜೆಪಿ ಅವರ ರೋಗ. ಅಮಿತ್ ಶಾ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಹೇಳಿದ್ದ ಒಂದೇ ಒಂದು ಅಂಶವನ್ನಾದರೂ ಅನುಷ್ಠಾನ ಮಾಡಿದ್ದಾರಾ? ಇವತ್ತು ಆರಗ ಜ್ಞಾನೇಂದ್ರ ಅವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದರು.ಕರ್ನಾಟಕ ರಾಜ್ಯದ ಖಜಾನೆಯಲ್ಲಿ ದುಡ್ಡಿಲ್ಲ ಎಂದಿದ್ದರು. ಆದರೆ, ಗೃಹಜ್ಯೋತಿ 5.31 ಲಕ್ಷ ಮಂದಿ ಗೃಹ ಬಳಕೆದಾರರಿದ್ದಾರೆ. ₹53 ಕೋಟಿ ಹಣವನ್ನು ನಾವು ಗೃಹಜ್ಯೋತಿಗೆ ಶಿವಮೊಗ್ಗದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ಗೃಹಲಕ್ಷ್ಮಿಗೆ ಹಣ ಇಲ್ಲ ಅಂತೇನಿಲ್ಲ. ಕೆಲವರಿಗೆ ಟೆಕ್ನಿಕಲ್ ಸಮಸ್ಯೆಯಿಂದ ಹಣ ಹೋಗಿಲ್ಲ. ಶೇ.95 ಅರ್ಹತೆ ಇದ್ದವರಿಗೆ ಗೃಹ ಲಕ್ಷ್ಮೀ ಹಣ ನೀಡಿದ್ದೇವೆ. ಅದೇ ರೀತಿ ದೈಹಿಕ ಶಿಕ್ಷಕರ ಕೂರತೆಯಿದೆ. ದೈಹಿಕ ಶಿಕ್ಷಕರ ಅವಶ್ಯಕತೆಯಿದೆ. ಮುಂದಿನ ಬಜೆಟ್ ವೇಳೆಗೆ ದೈಹಿಕ ಶಿಕ್ಷಕರ ನೇಮಕಾತಿ ನಡೆಯುತ್ತದೆ ಎಂದರು.
ಸೈನಿಕರನ್ನು ಯಾರು ರಾಜಕೀಯಕ್ಕೆ ಬಳಸಬಾರದು. ರೈತನ ಬಗ್ಗೆ, ಸೈನಿಕನ ಬಗ್ಗೆ ಯಾವತ್ತೂ ಹಗುರವಾಗಿ ಮಾತನಾಡಬಾರದು. ಇದು ತಪ್ಪಾಗುತ್ತದೆ. ನಾವು ಇಲ್ಲಿದ್ದೇವೆಂದರೆ ಸೈನಿಕರು ಮುಖ್ಯ. ಹಾಗಾಗಿ, ಅವರ ಬಗ್ಗೆ ಅಧಿಕಾರದಲ್ಲಿ ಇರುವವರು ಹಗುರವಾಗಿ ನೋಡಬಾರದು ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್, ಮುಖಂಡರಾದ ಜಿ.ಡಿ. ಮಂಜುನಾಥ್, ವಿಶ್ವನಾಥ ಕಾಶಿ, ರಮೇಶ್ ಶಂಕರಘಟ್ಟ ಮತ್ತಿತರರು ಇದ್ದರು.
- - -ಟಾಪ್ ಕೋಟ್ ಬಿಜೆಪಿಯವರು ಬರಗಾಲದ ಸಮಿಕ್ಷೆ ಮಾಡಿದ್ದಾರೆ. ಸಮಿಕ್ಷೆ ಮಾಡಿ ಯಾರಿಗೆ ಕೊಡುತ್ತಾರೆ. ಪರಿಹಾರ ಹಣ ತರುವ ತಾಕತ್ತು, ಧಮ್ ಇವರಿಗಿದೆಯಾ? ಆರು ತಿಂಗಳಾದರೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಪಂಚರಾಜ್ಯ ಚುನಾವಣೆಯಲ್ಲಿ ಎಡ್ರೆಸ್ ಇಲ್ಲದೇ ಹೋಗುತ್ತಾರೆ. ಬಿಜೆಪಿಯವರು ಎಂದೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಹಣ ಮತ್ತು ಅವ್ಯವಹಾರದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ
- ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ- - -
-ಫೋಟೋ: ಮಧು ಬಂಗಾರಪ್ಪ, ಸಚಿವ