ಸಾರಾಂಶ
ಅಕ್ಷರ ದಾಸೋಹ ತಯಾರಕರ ಒಕ್ಕೂಟದ ತಾಲೂಕಿನ ಬಿಸಿಯೂಟ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ಕೊಪ್ಪಳ:
ಅಕ್ಷರ ದಾಸೋಹ ತಯಾರಕರ ಒಕ್ಕೂಟದ ತಾಲೂಕಿನ ಬಿಸಿಯೂಟ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು. ನೂರಾರು ಬಿಸಿಊಟ ನೌಕರರು ಸರ್ಕಾರದ ಮಹಿಳಾ ವಿರೋಧಿ ಧೋರಣೆ ಖಂಡಿಸಿ ಘೋಷಣೆ ಕೂಗಿದರು.ತೀರ ಕಡಿಮೆ ಕೂಲಿಗೆ ಮಹಿಳೆಯರನ್ನು ದುಡಿಸಿಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಗಳನ್ನು ವಿರೋಧಿಸುತ್ತೇವೆ. ತಮ್ಮ ಬಹಳ ವರ್ಷಗಳ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು.
6ನೇ ಗ್ಯಾರಂಟಿ ಯೋಜನೆ ಜಾರಿ ಮಾಡಬೇಕು. ಅಂದರೆ ಈಗಿರುವ ವೇತನವನ್ನು ₹6,000 ಗೆ ಹೆಚ್ಚಿಸಬೇಕು. ಕನಿಷ್ಠ ವೇತನ ಜಾರಿಯಾಗಬೇಕು. ಪಿಂಚಣಿ ಯೋಜನೆ ಜಾರಿಯಾಗಬೇಕು, ಕರ್ತವ್ಯನಿರತ ನೌಕರರು ತೀರಿಕೊಂಡಾಗ ಅವರಿಗೆ ತಕ್ಷಣ ಪರಿಹಾರ ನೀಡಬೇಕು. ಗಾಯಗೊಂಡಲ್ಲಿ ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ನಿವೃತ್ತಿಯಾಗುವ ನೌಕರರಿಗಾಗಿ ಸರ್ಕಾರವು ಜಾರಿ ಮಾಡಿರುವ ಇಡುಗಂಟು ₹40,000 ವನ್ನು ₹ 2 ಲಕ್ಷಕ್ಕೆ ಹೆಚ್ಚಿಸಬೇಕು. ಶಾಲೆಯ ಜಂಟಿಖಾತೆಯ ವಿಚಾರವಾಗಿ ಸರ್ಕಾರ ಹೊಸದಾಗಿ ಹೊರಡಿಸಿರುವ ಆದೇಶ ರದ್ದುಪಡಿಸಿ, ಮೊದಲಿನಂತೆ ಬಿಸಿಊಟ ಮುಖ್ಯ ಅಡಿಗೆಯವರು ಹಾಗೂ ಶಾಲಾ ಮುಖ್ಯ ಉಪಾಧ್ಯಾಯರ ಹೆಸರಲ್ಲಿ ಖಾತೆ ಮುಂದುವರಿಸಬೇಕು. ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ವೇತನ ಪಾವತಿಸಬೇಕು. ಬಿಸಿ ಊಟ ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತಂತೆ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರಮುಖರಾದ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಗಾಳೆಪ್ಪ ಮುಂಗೋಲಿ, ಮಕ್ಬೂಬ್ ರಾಯಚೂರ, ಸಂಜಯದಾಸ ಕೌಜಗೇರಿ, ಶೇಖಪ್ಪ ಬೆಟಿಗೇರಿ, ಪುಷ್ಪ ಮೇಸ್ತ್ರಿ, ಸುಮಂಗಲ ಕೊತಬಾಳ, ಸುಮಾ ಲಾಚನಕೇರಿ, ಕುಸುಮ ಶಿವಪುರ, ಶರಣಮ್ಮ ಹೊಸ ಬಂಡಿಹರ್ಲಾಪುರ, ಲಲಿತಾ ಬೂದುಗುಂಪಿ , ಪದ್ಮ ಹುಲಿಗಿ, ನೇತ್ರಾವತಿ ಹಾಸಗಲ್ಲ ಮುಂತಾದವರಿದ್ದರು.