ಝಳ ಏರಿಕೆ: ತರಕಾರಿ, ಮಾಂಸ ಬೆಲೆ ಗಗನಕ್ಕೆ

| Published : Apr 04 2024, 02:02 AM IST / Updated: Apr 04 2024, 06:24 AM IST

ಸಾರಾಂಶ

ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚುತ್ತಿರುವಂತೆ ತರಕಾರಿ, ಮಾಂಸದ ದರವೂ ಗಗನ ಮುಖಿಯಾಗಿದೆ. ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿದೆ.

 ಬೆಂಗಳೂರು :  ಬಿಸಿಲಿನ ತಾಪ ಏರುತ್ತಿದ್ದಂತೆ ನಗರದಲ್ಲಿ ತರಕಾರಿ ಜೊತೆಗೆ ಚಿಕನ್‌, ಮೀನು, ಮಾಂಸಾಹಾರಗಳ ಬೆಲೆಯೂ ಹೆಚ್ಚಳ ಕಾಣುತ್ತಿರುವುದು ಗ್ರಾಹಕರಲ್ಲಿ ಚಿಂತೆ ಮೂಡಿಸಿದೆ.

ಇಲ್ಲಿನ ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆಗಳಿಗೆ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಸಗಟು ತರಕಾರಿ ಪೂರೈಕೆ ಆಗುತ್ತಿಲ್ಲ. ಇದರಿಂದ ಇಡೀ ನಗರದ ಮಾರುಕಟ್ಟೆಗಳಲ್ಲಿ ದರ ಹೆಚ್ಚಳವಾಗಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಬಿಸಿಲಿನ ಕಾರಣಕ್ಕೆ ಇಳುವರಿ ಕುಂಠಿತ ಆಗಿರುವುದು, ಕೈಗೆ ಬಂದ ಬೆಳೆಯೂ ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಮಾರುಕಟ್ಟೆಗೆ ತರಕಾರಿ ಬರುವುದು ಕಡಿಮೆಯಾಗಿದೆ. ಹೀಗಾಗಿ ಕಳೆದೊಂದು ವಾರದಿಂದ ಬೆಲೆ ಏರಿಕೆ ಕಾಣುತ್ತಿದ್ದು, ಮುಂದಿನ ಒಂದೂವರೆ ಎರಡು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಹೊಸಕೋಟೆ ಮತ್ತಿತರ ಸ್ಥಳಗಳಿಂದ ತರಕಾರಿಗಳು ಬರುತ್ತಿವೆಯಾದರೂ, ಅಗತ್ಯದಷ್ಟು ಸಾಲುತ್ತಿಲ್ಲ. ಬೀನ್ಸ್, ಬದನೆಕಾಯಿ, ಸೊಪ್ಪು, ಮೆಣಸಿನಕಾಯಿ ಬೆಲೆ ದುಪ್ಪಟ್ಟಾಗಿದೆ. ಬೇಸಿಗೆಯಲ್ಲಿ ಹೆಚ್ಚು ಬಳಕೆಯಾಗುವ ಸೌತೆಕಾಯಿ, ಕ್ಯಾರೆಟ್, ನಿಂಬೆಹಣ್ಣು ದರವೂ ಹೆಚ್ಚಿದೆ. ಜೊತೆಗೆ ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ. ಕಳೆದ ವಾರದಿಂದ ಎಲ್ಲ ತರಕಾರಿಗಳ ಬೆಲೆ ₹10- ₹20 ವರೆಗೆ ಹೆಚ್ಚಳ ಕಂಡಿದೆ ಎನ್ನುತ್ತಾರೆ ವರ್ತಕರು.

ಮಾಂಸಾಹಾರ ದರವೂ ಹೆಚ್ಚಳ:

ತರಕಾರಿ ಮಾತ್ರವಲ್ಲ, ಮಾಂಸಹಾರ ಪ್ರಿಯರಿಗೂ ಬೆಲೆಯೇರಿಕೆಯ ಬಿಸಿ ತಟ್ಟುತ್ತಿದೆ. ಮತ್ಸ್ಯಕ್ಷಾಮದ ಕಾರಣ ಇಲ್ಲಿನ ಶಿವಾಜಿನಗರ ಮೀನು ಮಾರುಕಟ್ಟೆಗೆ ಕರಾವಳಿ ಭಾಗದಿಂದ ಅಗತ್ಯದಷ್ಟು ಮೀನು ಪೂರೈಕೆ ಆಗುತ್ತಿಲ್ಲ. ಜತೆಗೆ, ಕೋಳಿ ಬೆಲೆಯೂ ಹೆಚ್ಚಳಕ್ಕೆ ಕಾರಣವಾಗಿದೆ. ವಿಥೌಟ್‌ ಸ್ಕಿನ್‌ ಬಾಯ್ಲರ್‌ ಕೋಳಿ ಕೇಜಿಗೆ ₹280, ವಿತ್‌ ಸ್ಕಿನ್‌ ₹260, ಸಜೀವ ಬಾಯ್ಲರ್‌ ಕೋಳಿ ಕೇಜಿಗೆ ₹160- ₹190 ಇದೆ. ಜೊತೆಗೆ ಪ್ರತಿ ವಾರ ₹5- ₹6 ಏರಿಕೆಯಾಗಬಹುದು ಎಂದು ಮಾರಾಟಗಾರರು ತಿಳಿಸಿದರು.

---

ತರಕಾರಿ ಈಗಿನ ದರಹಿಂದಿನ ದರ

ಬೀನ್ಸ್ ₹70₹40

ಮೂಲಂಗಿ₹35₹25

ನವಿಲುಕೋಸು₹30₹25

ಬೆಂಡೆಕಾಯಿ₹40₹30

ಬೆಳ್ಳುಳ್ಳಿ₹135₹300

ಅಲೂಗಡ್ಡೆ₹40₹25

ಹೀರೆಕಾಯಿ₹40₹35

ಟೊಮೆಟೋ₹25₹20

ಮೆಣಸಿನಕಾಯಿ₹60₹45

ಕೊತ್ತಂಬರಿ₹30₹20

ಕ್ಯಾಪ್ಸಿಕಂ₹45₹20

ನುಗ್ಗಿಕಾಯಿ₹80₹60

ಬದನೆಕಾಯಿ₹35 ₹25

ಕ್ಯಾರೆಟ್ ₹40  ₹35

ಹಾಗಲಕಾಯಿ ₹40 ₹30

ಈರುಳ್ಳಿ₹25 ₹20

ಬಿಟ್ರೋಟ್₹35 ₹30