ಹೋಟೆಲ್‌ ಬೋರ್ಡಲ್ಲಿ ಕನ್ನಡಿಗರಿಗೆ ಅ‍ವಮಾನ

| N/A | Published : May 18 2025, 01:10 AM IST / Updated: May 18 2025, 05:50 AM IST

ಸಾರಾಂಶ

ರಾಜಧಾನಿಯಲ್ಲಿ ಮತ್ತೆ ಕನ್ನಡಿಗರನ್ನು ಅಪಮಾನಿಸುವ ಘಟನೆ ನಡೆದಿದೆ. ಖಾಸಗಿ ಹೋಟೆಲ್‌ವೊಂದರ ಎಲ್‌ಇಡಿ ಡಿಜಿಟಲ್‌ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತ ಅಶ್ಲೀಲ ಪದ ಪ್ರದರ್ಶನವಾಗಿರುವುದು ಬೆಳಕಿಗೆ ಬಂದಿದೆ. 

  ಬೆಂಗಳೂರು : ರಾಜಧಾನಿಯಲ್ಲಿ ಮತ್ತೆ ಕನ್ನಡಿಗರನ್ನು ಅಪಮಾನಿಸುವ ಘಟನೆ ನಡೆದಿದೆ. ಖಾಸಗಿ ಹೋಟೆಲ್‌ವೊಂದರ ಎಲ್‌ಇಡಿ ಡಿಜಿಟಲ್‌ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತ ಅಶ್ಲೀಲ ಪದ ಪ್ರದರ್ಶನವಾಗಿರುವುದು ಬೆಳಕಿಗೆ ಬಂದಿದೆ. ಈ ರೀತಿ ಪದೇ ಪದೆ ಕನ್ನಡಿಗರನ್ನು ಅವಹೇಳನ ಮಾಡುತ್ತಿರುವುದಕ್ಕೆ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.

ತಾವರೆಕೆರೆ ಮುಖ್ಯರಸ್ತೆಯ ಭುವನಪ್ಪ ಲೇಔಟ್‌ನ ‘ಹೋಟೆಲ್‌ ಜಿಎಸ್‌ ಸೂಟ್ಸ್‌’ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಮಡಿವಾಳ ಪೊಲೀಸ್‌ ಠಾಣೆ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪಿಎಸ್‌ಐ ರಮೇಶ್‌ ಹೂಗಾರ್‌ ಅವರು ಹೋಟೆಲ್‌ ಮಾಲೀಕ ಜಮ್‌ಶದ್‌ ಮತ್ತು ಸರ್ಫರಾಜ್‌ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಹೋಟೆಲ್‌ ಸಿಬ್ಬಂದಿ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಎಲ್‌ಇಡಿ ಡಿಜಿಟೆಲ್‌ ಬೋರ್ಡ್‌ ಮಾಡಿಕೊಟ್ಟ ವ್ಯಕ್ತಿಗೂ ನೋಟಿಸ್‌ ಜಾರಿಗೊಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಕೋರಮಂಗಲದ ಕಂಪನಿಯೊಂದಕ್ಕೆ ಮೂರು ವರ್ಷದ ಹಿಂದೆ ಈ ಎಲ್‌ಇಡಿ ಡಿಜಿಟೆಲ್‌ ಬೋರ್ಡ್‌ ಮಾಡಿಕೊಡಲು ಗುತ್ತಿಗೆ ನೀಡಲಾಗಿತ್ತು. ಇದರ ನಿರ್ವಹಣೆ ಹೊಣೆಯನ್ನೂ ಆ ಕಂಪನಿಗೆ ವಹಿಸಲಾಗಿತ್ತು. ಮೇ 8ರ ಬಳಿಕ ಈ ಬೋರ್ಡ್‌ನಲ್ಲಿ ಬೇರೆ ಬೇರೆ ಪದಗಳು ಸ್ಕ್ರಾಲ್‌ ಆಗುತ್ತಿದ್ದು, ಈ ಸಂಬಂಧ ಹೋಟೆಲ್‌ನವರು ಕಂಪನಿಗೆ ದೂರು ನೀಡಿದ್ದರು ಎಂಬುದು ತಿಳಿದು ಬಂದಿದೆ. ಸದ್ಯ ಹೋಟೆಲ್‌ ಮಾಲೀಕರು ವಿದೇಶದಲ್ಲಿದ್ದಾರೆ. ಮಾಲೀಕರು ಸೇರಿ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳಿಗೂ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮಾಡುವುದಾಗಿ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಹೇಳಿದ್ದಾರೆ.

ದೂರಿನಲ್ಲಿ ಏನಿದೆ?:

ಮದ್ದೇರಿ ಚೇತನ್ ಗೌಡ ಎಂಬವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮೇ 16ರಂದು ರಾತ್ರಿ ಜಿಎಸ್ ಸೂಟ್ಸ್‌ ಎಂಬ ಹೋಟೆಲ್ ಎದುರು ಅಳವಡಿಸಿರುವ ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತು ತೀರಾ ಅವಹೇಳನಕಾರಿ ಇಂಗ್ಲಿಷ್‌ ಬರಹ ಹಾಕಲಾಗಿದೆ ಎಂದು ಪೋಸ್ಟ್ ಮಾಡಿದ್ದರು. ಶನಿವಾರ ಬೆಳಗ್ಗೆ ಈ ಪೋಸ್ಟ್‌ ಗಮನಿಸಿರುವ ಮಡಿವಾಳ ಪೊಲೀಸ್‌ ಠಾಣೆಯ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪಿಎಸ್‌ಐ ರಮೇಶ್‌ ಹೂಗಾರ್‌, ತಕ್ಷಣ ಹೋಟೆಲ್‌ ಬಳಿ ತೆರಳಿ ಪರಿಶೀಲಿಸಿದ್ದಾರೆ. ಬಳಿಕ ಆ ಡಿಜಿಟಲ್‌ ಬೋರ್ಡ್‌ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿ ಈ ಡಿಜಿಟಲ್‌ ಡಿಸ್‌ ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತ ಅಶ್ಲೀಲ ಬರಹ ಸ್ಕ್ರಾಲ್‌ ಆಗುತ್ತಿದ್ದುದನ್ನು ಖಚಿತಪಡಿಸಿಕೊಂಡಿದ್ದಾರೆ.

ನಂತರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ಸಂಬಂಧ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹ್ಯಾಕ್‌ ಆಗಿದೆ ಎಂದ ಸಿಬ್ಬಂದಿ

ಪೊಲೀಸರ ವಿಚಾರಣೆ ವೇಳೆ ಈ ಎಲ್‌ಇಡಿ ಡಿಜಿಟೆಲ್‌ ಡಿಸ್‌ ಪ್ಲೇ ಬೋರ್ಡ್‌ ಹ್ಯಾಕ್‌ ಆಗಿರುವ ಸಾಧ್ಯತೆಯಿದೆ ಎಂದು ಹೋಟೆಲ್‌ ಸಿಬ್ಬಂದಿ ಹೇಳಿದ್ದಾರೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಬೋರ್ಡ್‌ ಬದಲಿಸಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. 

Read more Articles on