ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ವಿವಿಧ ಕಾರ್ಮಿಕ ವರ್ಗಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಆಹೋರಾತ್ರಿ ಪ್ರತಿಭಟನೆ ನಡೆಸಿದರು.ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದರು. ರಾಜ್ಯದೆಲ್ಲೆಡೆ ವಿವಿಧ ಕೈಗಾರಿಕೆಗಳಲ್ಲಿ ಲಕ್ಷಾಂತರ ಹಾಗೂ ಅಸಂಘಟಿತ ವಲಯದಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರಿಗೆ ಭದ್ರತೆ ಎಂಬುದು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆ ಅನುಷ್ಠಾನಗೊಳಿಸಿಲ್ಲ. ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.ಬಂಡವಾಳಗಾರರ ಪರ ರೂಪಿತವಾದ ನೀತಿಗಳಿಂದ ಹಲವು ವಿಭಾಗ ಕಾರ್ಮಿಕರು ಸಂಕಷ್ಟ, ಶೋಷಣೆಗೆ ಒಳಗಾಗಿದ್ದಾರೆ. ಸರ್ಕಾರಗಳಿಗೆ ಕೆಲಸದ ಭದ್ರತೆಗಿಂತ ಉದ್ದಿಮೆಗಳ ಭದ್ರತೆ ಹೆಚ್ಚಿನ ಆದ್ಯತೆಯಾಗಿದೆ. ಈ ಹಿಂದೆ ದುಡಿಯುವ ವರ್ಗಗಳಿಗೆ ಇದ್ದ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಬದಲಾಯಿಸಿ ಮುಷ್ಕರ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕಿತ್ತುಗೊಳ್ಳಲಾಗಿದೆ ಎಂದು ಆರೋಪಿಸಿದರು.
ಕೆಲಸ ಮಾಡುವ ಶ್ರಮ ಜೀವಿಗಳ ಕನಿಷ್ಠ ವೇತನ ಬೆಲೆ ಏರಿಕೆ ಆಧಾರದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ವೈಜ್ಞಾನಿಕವಾಗಿ ಪರಿಷ್ಕರಣೆಯಾಗಬೇಕು. ಆದರೆ, ಕನಿಷ್ಟ ವೇತನ ಸಲಹಾ ಮಂಡಳಿಯನ್ನು ಪರಿಗಣಿಸದೆ ಮಾಲೀಕರಿಗೆ ಅನುಗುಣವಾಗಿ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ಕನಾರ್ಟಕ ಕಾರ್ಮಿಕ ಸಮ್ಮೇಳನ ರಚನೆ ಸೇರಿದಂತೆ ರಾಜ್ಯ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸಲು 2025ರ ಮಾರ್ಚ್‌ನಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್ ನಲ್ಲಿ ಕಟ್ಟಡ ನಿರ್ಮಾಣ, ಆಟೋ, ಟ್ಯಾಕ್ಸಿ, ಮನೆಗೆಲಸ, ಹಮಾನಿ, ಬೀದಿ ಬದಿ, ಉದ್ಯೋಗ ಖಾತ್ರಿ, ಖಾಸಗಿ ವಲಯ, ಸರ್ಕಾರದ ಮುನ್ಸಿಪಾಲಿಟಿ, ಗ್ರಾಮ ಪಂಚಾಯ್ತಿಗಳಲ್ಲಿ ದುಡಿಯುತ್ತಿರುವ ನೌಕರರು, ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಸ್ಕೀಂಗಳಲ್ಲಿ ಕೆಲಸ ಮಾಡುವ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರ 37 ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಉಪಾಧ್ಯಕ್ಷೆ ಪ್ರಮೀಳ ಕುಮಾರಿ, ಮಂಜುಳಾ ರಾಜ್, ಜಯಲಕ್ಷ್ಮಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.