ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಒಟ್ಟು ₹4,71,074 ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು ಹಾಗೂ ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ದೇವೇಂದ್ರ ಅಲಿಯಾಸ್ ಡೇಬ್ಯಾ ರಮೇಶ ವಾಘಮೋರೆ(30), ಸಚಿನ್ ದತ್ತಾತ್ರೇಯ ಗೌಳಿ (39) ಹಾಗೂ ಕಪಿಲ್ ಅಲಿಯಾಸ್ ಅಪ್ಪಾ ಭಜರಂಗ ಜಾಧವ (23) ಬಂಧಿತ ಆರೋಪಿಗಳು. ಕುವೆಂಪು ನಗರದ ನಿವೃತ್ತ ಪ್ರಾಧ್ಯಾಪಕ ಅರುಣ ವಾಮನರಾವ್ ಜಾಧವ ಅವರ ಮನೆಯಲ್ಲಿ ಬಂಗಾರ ಮತ್ತು ಬೆಳ್ಳಿ ಆಭರಣಗಳು ಕಳ್ಳತನವಾಗಿದ್ದವು. ಈ ಕುರಿತು ಮೇ 3ರಂದು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ, ಅವರನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ ಆರೋಪಿಗಳು ಮನೆಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ₹1,67,186 ಮೌಲ್ಯದ 12.080 ಗ್ರಾಂ ಬಂಗಾರದ ಆಭರಣ, ₹1,83,888 ಮೌಲ್ಯದ 744.5 ಗ್ರಾಂ ಬೆಳ್ಳಿ ಆಭರಣ ಹಾಗೂ ₹1,20,000 ಮೌಲ್ಯದ ಎರಡು ದ್ವಿಚಕ್ರ ವಾಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಪಿಎಂಸಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಯು.ಎಸ್.ಅವಟಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಎಸ್.ಕೆ. ಹೊಳೆನ್ನವರ, ಎಎಸ್‌ಐ ಎಂ.ಎ. ಪಾಟೀಲ ಸೇರಿದಂತೆ ಠಾಣಾ ಸಿಬ್ಬಂದಿ, ಬೆರಳು ಮುದ್ರೆ ಘಟಕ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ತಂಡದ ಕಾರ್ಯವನ್ನು ಮೆಚ್ಚಿದ್ದಾರೆ.-------------
9ಬಿಇಎಲ್1