ಸಾರಾಂಶ
ತೊಕ್ಕೊಟ್ಟುವಿನ ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಲಾದ ತಿಂಗಳ ಬೆಳಕು-ಗೌರವ ಅತಿಥಿ ಪತ್ರಕರ್ತರ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ ಖಾಲಿಯಿರುವ ಗುಡ್ಡಪ್ರದೇಶಗಳನ್ನು ಉಪಯೋಗಿಸಿ ಗೇರು ಬೆಳೆ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಗೇರುಬೀಜ ಕಾರ್ಖಾನೆಗಳು ಅನೇಕ ಇದ್ದರೂ ದೇಶಕ್ಕೆ ವಿದೇಶಗಳಿಂದ ಗೋಡಂಬಿ ಆಮದು ಮಾಡಲಾಗುತ್ತಿದೆ. ಶೀಘ್ರವೇ ಮನೆಗೊಂದು ಗೇರುಗಿಡ ಯೋಜನೆಯನ್ನು ನಿಗಮದಿಂದ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಹೇಳಿದರು.
ಅವರು ತೊಕ್ಕೊಟ್ಟುವಿನ ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಲಾದ ತಿಂಗಳ ಬೆಳಕು-ಗೌರವ ಅತಿಥಿ ಪತ್ರಕರ್ತರ ಜೊತೆಗಿನ ಸಂವಾದ ನಡೆಸಿ ಮಾತನಾಡಿದರು.೧೮ ವಿವಿಧ ರೀತಿಯ ಗೇರು ತಳಿಗಳಿದ್ದು, ಇದೊಂದು ವಾಣಿಜ್ಯ ಬೆಳೆಯಾಗಿರುವುದರಿಂದ ರೈತರಿಗೆ ನಷ್ಟ ಉಂಟಾಗಲಾರದು. ಉಳ್ಳಾಲದ ಗೇರು ಅಭಿವೃದ್ಧಿ ಸಂಶೋಧನಾ ಕೇಂದ್ರ, ಪಡೀಲ್, ಕೆರೆಬೈಲ್, ಮೂಡುಬಿದಿರೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ನರ್ಸರಿಗಳಿದ್ದು ಗೇರುಗಿಡಗಳು ಲಭ್ಯವಿದೆ. ಗಿಡವೊಂದಕ್ಕೆ ೪೦ರಿಂದ ೫೦ ರುಪಾಯಿ ಇಧ್ದು, ಸರ್ಕಾರದಿಂದ ಉಚಿತವಾಗಿ ನೀಡುವುದ ಕಷ್ಟ. ಅತಿ ಶೀಘ್ರದಲ್ಲಿ ೮ ವಿಧಾನಸಭಾ ಕ್ಷೇತ್ರಗಳಲ್ಲಿಯೂ ರೈತರನ್ನು ಕರೆಸಿ, ಅಧಿಕಾರಿಗಳು, ವಿಜ್ಞಾನಿಗಳು ಸೇರಿದಂತೆ ಅನುಭವಿ ಸಂಪನ್ಮೂಲ ವ್ಯಕ್ತಿಗಳ ಸಮ್ಮುಖದಲ್ಲಿ ಮಾಹಿತಿ ನೀಡಿ ಗೇರು ಬೆಳೆ ಬೆಳೆಯಲು ಪ್ರೋತ್ಸಾಹಿಸಲಾಗುವುದು ಎಂದು ಅವರು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕ ಕೆ.ಟಿ.ಸುವರ್ಣ ಮಾತನಾಡಿ, ಪತ್ರಕರ್ತರು ಉತ್ತಮ ವಿಚಾರಗಳನ್ನು ಜನರಿಗೆ ತಲುಪಿಸುವ ಮುಖೇನ ಜನರ ಪ್ರೀತಿ ಪಾತ್ರರಾಗಿದ್ದಾರೆ. ಈ ಮೂಲಕ ಸಮಾಜದ ಮೂರನೇ ಕಣ್ಣು ಮಾಧ್ಯಮಗಳ ಕಾರ್ಯ ಎಂದಿಗೂ ಶ್ಲಾಘನೀಯ ಎಂದರು.
ಈ ಸಂದರ್ಭ ಇಬ್ಬರು ಅತಿಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ವಸಂತ್ ಎನ್. ಕೊಣಾಜೆ ವಹಿಸಿದ್ದರು.ತಾ.ಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್, ಕಾಂಗ್ರೆಸ್ ಮಹಿಳಾ ಮಂಡಲ ಅಧ್ಯಕ್ಷೆ ಚಂದ್ರಿಕಾ ರೈ ಕೋಟೆಕಾರು, ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರೀಫ್ ಕಲ್ಕಟ್ಟ, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಆಸೀಫ್ ಬಬ್ಬುಕಟ್ಟೆ, ಶಿವಶಂಕರ್ , ರಜನಿಕಾಂತ್, ಪತ್ರಕರ್ತರಾದ ಸತೀಶ್ ಕುಮಾರ್ ಪುಂಡಿಕಾಯಿ, ಅಶ್ವಿನ್ ಕುತ್ತಾರ್, ಗಂಗಾಧರ್, ಸುಶ್ಮಿತಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಸತೀಶ್ ಕೊಣಾಜೆ ಹಾಗೂ ವಜ್ರ ಗುಜರನ್ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ದಿನೇಶ್ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ನಿರೂಪಿಸಿದರು. ಜಿಲ್ಲಾ ಸಂಘದ ಸದಸ್ಯ ಮೋಹನ್ ಕುತ್ತಾರ್ ವಂದಿಸಿದರು.ಪೆನ್ನಿ ಪುನರಾರಂಭಿಸಲು ತಜ್ಞರ ಸಲಹೆ ಅಗತ್ಯ
ಮದ್ಯದ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಲವೆಡೆ ಗೇರುಹಣ್ಣುಗಳು ಕೊಳೆತು ಹಾಳಾಗುತ್ತಿವೆ. ಇದನ್ನು ಉಪಯೋಗಿಸಿ ಲಾಭದಾಯಕ ಹಾಗೂ ಜಿಲ್ಲೆಯ ಜನರಿಗೆ ಸ್ವ ಉದ್ಯೋಗ ಕಲ್ಪಿಸಬಹುದೇ? ಅನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಮತಾ ಗಟ್ಟಿ, ಹಿಂದೆ ಪೆನ್ನಿ ಉದ್ಯಮ ಲಾಭದಾಯಕವಾಗಿತ್ತು. ಆದರೆ ಕಾನೂನುಬಾಹಿರ ಚಟುವಟಿಕೆಗಳಿಂದ ಮುಚ್ಚುವಂತಾಗಿದೆ. ಗೋವಾ ರಾಜ್ಯದಲ್ಲಿ ಲಾಭದಾಯಕ ಉದ್ಯಮವಾಗಿ ಪೆನ್ನಿ ಹೊರಹೊಮ್ಮಿದೆ. ರಾಜ್ಯದಲ್ಲಿ ಮತ್ತೆ ಪೆನ್ನಿ ಆರಂಭಿಸಲು ತಜ್ಞರ ಸಲಹೆ ಅಗತ್ಯ. ಆದರೆ ಈ ಕುರಿತು ಸಚಿವರ ಗಮನಸೆಳೆಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.