ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾರ ನಗರದಲ್ಲಿ ಜಿ ೨ ಮನೆ ನಿರ್ಮಿಸಿ, ಅನೇಕ ವರ್ಷಗಳೇ ಕಳೆದಿವೆ. ಆದರೂ ಫಲಾನುಭವಿಗಳಿಗೆ ಈವರೆಗೂ ಮನೆ ನೀಡಿಲ್ಲ.

ಪಟ್ಟಣ ಪಂಚಾಯಿತಿ ಎದುರು ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನಾ ಸಭೆ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾರ ನಗರದಲ್ಲಿ ಜಿ+೨ ಮನೆ ನಿರ್ಮಿಸಿ, ಅನೇಕ ವರ್ಷಗಳೇ ಕಳೆದಿವೆ. ಆದರೂ ಫಲಾನುಭವಿಗಳಿಗೆ ಈವರೆಗೂ ಮನೆ ನೀಡಿಲ್ಲ. ಫಲಾನುಭವಿಗಳಿಂದ ₹೫೦೦೦೦ ಪಡೆಯಲಾಗಿದೆ. ಈ ಮನೆಗಳು ಇನ್ನೂ ಪೂರ್ತಿಯಾಗಿಲ್ಲ. ಇದರಲ್ಲಿ ಭಾರೀ ಪ್ರಮಾಣದ ಹಗರಣ ನಡೆದಂತೆ ಕಾಣುತ್ತಿದೆ. ಸರಿಯಾದ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದರು.

ಮಂಗಳವಾರ ಪಪಂ ಕಚೇರಿಯ ಮುಂದೆ ಬಿಜೆಪಿ ಮಂಡಳ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ. ರಸ್ತೆಗುಂಡಿಗಳನ್ನು ಮುಚ್ಚುವ ಸ್ಥಿತಿಯಲ್ಲೂ ಇಲ್ಲ. ಕೇಂದ್ರದಿಂದ ಗರಿಷ್ಠ ಮನೆಗಳು ಬಂದಿದ್ದು, ಅದನ್ನೂ ಪೂರ್ತಿಗೊಳಿಸುತ್ತಿಲ್ಲ. ಎಲ್ಲಾ ಕಾರ್ಯಗಳಲ್ಲೂ ಸ್ವಜನ ಪಕ್ಷಪಾತ, ಅಧಿಕಾರಿಗಳ ದುರ್ನಡತೆ, ಅವ್ಯವಹಾರ ಎದ್ದು ಕಾಣುತ್ತಿದೆ. ಅಲ್ಲದೇ, ಪಟ್ಟಣದಲ್ಲಿ ಸಂತೆ ರಸ್ತೆಯ ಮೇಲೆ ನಡೆಯುತ್ತಿದೆ. ಅದಕ್ಕೆ ಬೇರೆ ವ್ಯವಸ್ಥೆ ಮಾಡಬೇಕು ಮತ್ತು ಮೀನು ಮಾರಾಟ ಕಂಡಕಂಡಲ್ಲಿ ಮಾಡಲಾಗುತ್ತಿದೆ. ವ್ಯವಸ್ಥೆಯ ನಿಯಂತ್ರಣವಿಲ್ಲದೇ ಸಂಪೂರ್ಣ ಹದಗೆಟ್ಟಿದೆ ಎಂದ ಅವರು, ಜಿ+೨ ಮನೆಗಳನ್ನು ನೀಡುವುದಾಗಿ ಹೇಳಿ, ಅಂಗೈಯಲ್ಲಿ ಅರಮನೆ ತೋರಿಸಿದಂತಾಗಿದೆ ಬಡ್ಡಿ ಸಹಿತ ಫಲಾನುಭವಿಗಳಿಗೆ ಹಣ ವಾಪಸ್ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.

ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಮನೆಗಳೆಲ್ಲ ನಿರ್ಮಾಣವಾಗಿತ್ತು. ಕಳೆದ ೩-೪ ವರ್ಷಗಳಿಂದ ಫಲಾನುಭವಿಗಳಿಗೆ ಮನೆ ಸಿಗಲಿಲ್ಲ. ಇಲ್ಲಿ ನಮ್ಮ ಉದ್ದೇಶ ರಾಜಕೀಯ ಮಾಡುವುದಲ್ಲ. ಆದರೆ ಈ ವಿಷಯದಲ್ಲಿ ಶಾಸಕರ ವೈಫಲ್ಯ ಎದ್ದು ಕಾಣುತ್ತದೆ. ಪಪಂನ ಎಸ್.ಸಿ/ಎಸ್.ಟಿಯ ಹಣ ರಸ್ತೆಗೆ ಬಳಸಲಾಗಿದೆ. ಅದೂ ಪೂರ್ಣವಾಗಿಲ್ಲ. ಶಾಸಕರು ಅಪಾರ ಅನುಭವ ಹೊಂದಿದ್ದಾರೆ. ಆದರೂ ಇಂತಹ ಸಮಸ್ಯೆಯನ್ನು, ಬಡವರಿಗೆ ತೊಂದರೆ ಆಗುತ್ತಿರುವುದನ್ನು ನೋಡುತ್ತಿದ್ದೂ ಏಕೆ ಸುಮ್ಮನಿದ್ದಾರೆ ? ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ. ಪಪಂನಲ್ಲಿ ಫಾರಂ ನಂ.೩ ಪಡೆಯಲು ವರ್ಷಗಟ್ಟಲೇ ಬೇಕು. ಹೀಗೆ ಸರ್ಕಾರಿ ಕಚೇರಿ ಅಂದರೆ ಜನರಿಗೆ ಶೋಷಣೀಯ ಕೇಂದ್ರವಾಗಿದೆ. ಕಳೆದ ಜಾತ್ರೆಯಲ್ಲಿ ಅಂಗಡಿ ಹರಾಜಿನಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಅದನ್ನು ಮುಚ್ಚಿಹಾಕಲಾಗಿದೆ. ಆ ಬಗ್ಗೆ ಯಾರೂ ಬಾಯ್ಬಿಡುತ್ತಿಲ್ಲ ಏಕೆ? ಎಂದರು.

ತಹಶೀಲ್ದಾರ, ಪಪಂ ಆಡಳಿತಾಧಿಕಾರಿ ಚಂದ್ರಶೇಖರ ಹೊಸ್ಮನಿ ಮನವಿ ಸ್ವೀಕರಿಸಿ, ಜಿ+೨ ಮನೆ ಪಪಂಗೆ ಸೇರಿದ್ದಲ್ಲ. ಸ್ಲಮ್ ಬೋರ್ಡಿನವರು ಗುತ್ತಿಗೆದಾರರ ಮೂಲಕ ನಿರ್ಮಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಜಾತ್ರೆಯ ಒಳಗಾಗಿ ಎಲ್ಲಾ ಫಲಾನುಭವಿಗಳಿಗೆ ಮನೆಯನ್ನು ಹಸ್ತಾಂತರಿಸುತ್ತೇವೆ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆ ಕುರಿತು ಪ್ರಯತ್ನ ನಡೆಯುತ್ತಿದೆ ಎಂದು ಭರವಸೆ ನೀಡಿದರು.

ಪ್ರಮುಖರಾದ ರಾಮು ನಾಯ್ಕ, ಉಮೇಶ ಭಾಗ್ವತ, ರಾಘವೇಂದ್ರ ಭಟ್ಟ ಹಾಸಣಗಿ, ಗಜಾನನ ನಾಯ್ಕ ಮಾತನಾಡಿದರು. ಗೋಪಾಲಕೃಷ್ಣ ಗಾಂವ್ಕರ, ನಾರಾಯಣ ನಾಯಕ, ಸುಬ್ಬಣ್ಣ ಬೋಳ್ಮನೆ, ಆದಿತ್ಯ ಗುಡಿಗಾರ, ರಜತ ಬದ್ದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಇದ್ದರು.