ಸಾರಾಂಶ
ಮುಂಡರಗಿ:ಮುಂಡರಗಿಯಿಂದ ಶಿರಹಟ್ಟಿಗೆ ತೆರಳುವಾಗ ಬಾಗೇವಾಡಿ ಹತ್ತಿರವಿರುವ ಕಣವಿ ದುರ್ಗಮ್ಮನ ದೇವಸ್ಥಾನಕ್ಕೆ ಮಂಗಳವಾರ ಹಾಗೂ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ರಾತ್ರಿ ವೇಳೆಯಲ್ಲಿ ಕತ್ತಲೆಯಾಗುವುದರಿಂದ ಜನರ ಅನುಕೂಲಕ್ಕಾಗಿ ಅಲ್ಲಿ ವಿದ್ಯುತ್ ಹಾಕುವಂತೆ ಹೆಸ್ಕಾಂ ಇಲಾಖೆ ಅಧಿಕಾರಿಗೆ 50 ಬಾರಿ ಮಾತನಾಡಿದರೂ ಈ ಬಗ್ಗೆ ಯಾವುದೇ ರೀತಿ ಕೆಲಸ ಮಾಡಿಲ್ಲ. ಅಧಿಕಾರಿ ಶಾಸಕರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ ಎಂದರೆ ಹೇಗೆ? ನಾವು ಸಾರ್ವಜನಿಕರಿಗೆ ಏನು ಹೇಳಬೇಕು ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆಕ್ರೋಶ ವ್ಯಕ್ತಪಡಿಸಿದರು.ಅವರು ಸೋಮವಾರ ಸಂಜೆ ಮುಂಡರಗಿ ತಾಲೂಕು ಪಂಚಾಯತ್ ಸಮರ್ಥ ಸೌಧದಲ್ಲಿ ಜರುಗಿದ ತಾಲೂಕಾ ಮಟ್ಟದ ತ್ರೈಮಾಸಿಕ ಸಭೆಯ ಸಹ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಣವಿ ದುರ್ಗಮ್ಮನ ದೇವಸ್ಥಾನದ ಬಳಿ ಕುಡಿಯುವ ನೀರು ಹಾಗೂ ವಿದ್ಯುತ್ ಬೀದಿ ದೀಪದ ವ್ಯವಸ್ಥೆಯೂ ಆಗಬೇಕು. ಎರಡೂ ಇಲಾಖೆಯವರು ಚರ್ಚಿಸಿ ವಿದ್ಯುತ್ ಸಂಪರ್ಕ ಹಾಗೂ ನೀರಿನ ವ್ಯವಸ್ಥೆ ಮಾಡುವಂತೆ ತಿಳಿಸಿದ್ದೆ. ಆದರೆ ಇದುವರೆಗೂ ಎರಡೂ ಕೆಲಸಗಳಾಗಿಲ್ಲ ಎಂದರು. ಈ ಸಂದರ್ಭದಲ್ಲಿ ಹೆಸ್ಕಾ ಅಧಿಕಾರಿ ಮಾತನಾಡಿ ತಾವು ನನ್ನೊಂದಿಗೆ ಮಾತನಾಡಿದ ತಕ್ಷಣವೇ ಆ ಕಾರ್ಯದ ಕುರಿತು ಚರ್ಚಿಸಿ ಮಾಡಿಸುತ್ತಿರುವೆ. ದಾಖಲೆಗಳ ಕ್ರೋಢೀಕರಣದಿಂದಾಗಿ ಒಂದಿಷ್ಟು ವಿಳಂಬವಾಗಿದೆ. ಶೀಘ್ರದಲ್ಲಿ ಪ್ರಾರಂಭಿಸುವುದಾಗಿ ಸಭೆಗೆ ತಿಳಿಸಿದರು.
ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಪ್ರಾರಂಭದಲ್ಲಿಯೇ ಮುಗಾರು ಉತ್ತಮವಾಗಿ ಪ್ರಾರಂಭವಾಗಿದ್ದರಿಂದ ರೈತರಿಗೆ ಮುಂಗಾರು ಮಳೆಯ ಬಗ್ಗೆ ಉತ್ತಮವಾದ ನಿರೀಕ್ಷೆ ಇತ್ತು. ಆದರೆ ನಂತರದಲ್ಲಿ ಮಳೆಯಾಗದೇ ಇರುವುದರಿಂದ ರೈತರೆಲ್ಲರೂ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳು ಬೆಳೆವಿಮೆ ತುಂಬುವ ಕುರಿತು ರೈತರಿಗೆ ಸರಿಯಾದ ತಿಳುವಳಿಕೆ ನೀಡಿ ಹೆಚ್ಚಿನ ರೈತರಿಗೆ ಬೆಳೆವಿಮೆ ಬರುವಂತೆ ಅನುಕೂಲ ಮಾಡಿಕೊಡಬೇಕು ಎಂದರು. ಈ ಕುರಿತು ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ಈಗಾಗಲೇ ಹೆಸರು ಬೆಳೆಗೆ ಬೆಳೆ ವಿಮೆ ತುಂಬಲು ಕೊನೆಯ ದಿನಾಂಕ ಮುಗಿದಿದೆ. ಉಳಿದ ಬೆಳೆಗಳಿಗೆ ಇನ್ನೂ ದಿನಾಂಕ ಇದ್ದು, ಇವುಗಳ ಕುರಿತು ರೈತರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು.ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕಳೆದ ವರ್ಷ ನನ್ನ ಕ್ಷೇತ್ರದ ಮುಂಡರಗಿ ಹೋಬಳಿಯ ರೈತರೊಬ್ಬರ ಜಮೀನಿನಲ್ಲಿ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದು ಕಬ್ಬು ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ಹಾನಿಯಾಗಿರುವ ಬಗ್ಗೆ ಅವರಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಹೆಸ್ಕಾಂ ಅಧಿಕಾರಿಗೆ ತಿಳಿಸಿ ವರ್ಷವಾದರೂ ಇದುವರೆಗೂ ಮಾಡುತ್ತಿಲ್ಲ. ಇದೇ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕಿನಲ್ಲಿ ಆದ ರೈತರಿಗೆ ಅಲ್ಲಿನ ಅಧಿಕಾರಿಯ ಪ್ರಯತ್ನದಿಂದಾಗಿ ಈಗಾಗಲೇ ಪರಿಹಾರ ದೊರೆತಿದೆ ನಮ್ಮಲ್ಲೇಕೆ ಬರಲಿಲ್ಲ ಎಂದು ಹರಿಹಾಯ್ದರು. ಆಗ ಹೆಸ್ಕಾಂ ಅಧಿಕಾರಿ ಮಾತನಾಡಿ, ಸರಿಯಾದ ದಾಖಲೆಗಳ ಹೊಂದಾಣಿಕೆ ಕೊರತೆಯಿಂದಾಗಿ ಇದು ವಿಳಂಬವಾಗಿದೆ. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳುವೆ ಎಂದರು.
ಸರ್ಕಾರಿ ವಸತಿ ನಿಲಯಗಳಲ್ಲಿ ಮಕ್ಕಳಿಗೆ ದೊರೆಯುವ ಎಲ್ಲ ಸೌಲಭ್ಯಗಳೂ ಸರಿಯಾಗಿ ದೊರೆಯಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಾದ್ಯಂತ ಪಂಚ ಗ್ಯಾರಂಟಿಗಳನ್ನು ನೀಡುತ್ತಾ ಬಂದಿದ್ದು, ಕಳೆದ ವರ್ಷ 52 ಸಾವಿರ ಕೋಟಿ ಖರ್ಚು ಮಾಡಿದ್ದು, ಪ್ರಸ್ತುತ ವರ್ಷವೂ ಸಹ 53 ಸಾವಿರ ಕೋಟಿ ಹಣವನ್ನು ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆಯಾದರೂ ಪ್ರತಿ ವರ್ಷ ಸರ್ಕಾರದಿಂದ ನಡೆಯುವ ಎಲ್ಲ ಇಲಾಖೆಗಳ ಯೋಜನೆಗಳು, ಕಾರ್ಯಕ್ರಮಗಳು ವಿಳಂಬವಾಗದೇ ಎಲ್ಲವೂ ಎಂದಿನಂತೆ ನಡೆಯುತ್ತಿವೆ ಎಂದರು.ಪ್ರತಿ ತ್ರೈಮಾಸಿಕ ಸಭೆಗೂ ನೀರಾವರಿ ಇಲಾಖೆ ಹಿರಿಯ ಅಧಿಕಾರಿ ಯಾವುದೇ ಸಭೆಗೆ ಬಾರದೇ ತಮ್ಮ ಕೆಳೆಗಿನ ಅಧಿಕಾರಿಗಳನ್ನು ಕಳಿಸುತ್ತಾರೆ. ಹೀಗಾದರೆ ನಾವು ಸಂಪೂರ್ಣ ಮಾಹಿತಿ ಪಡೆಯುವುದು ಹೇಗೆ? ಈ ಹಿಂದೆ 2-3 ಬಾರಿ ಸಭೆಗೆ ಗೈರಾದಗಲೂ ಅವರಿಗೆ ಕಾರಣಕೇಳಿ ನೋಟಿಸ್ ನೀಡುವಂತೆ ತಿಳಿಸಿದ್ದೆ. ಅವರಿಂದ ಏನು ಉತ್ತರ ಬಂದಿದೆ ಎಂದು ತಾಪಂ ಇಒ ಅವರಿಗೆ ಶಾಸಕ ಡಾ. ಚಂದ್ರು ಲಮಾಣಿ ಪ್ರಶ್ನಿಸಿದರು. ಈ ಕುರಿತು ಉತ್ತರಿಸಲು ತಾಪಂ ಇಒ ತಡಕಾಡಿದ್ದು ಕಂಡು ಬಂದಿತು. ನಂತರ ಇನ್ನೊಂದು ಬಾರಿ ನೋಟಿಸ್ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ತಹಸೀಲ್ದಾರ ಎರ್ರಿಸ್ವಾಮಿ ಪಿ.ಎಸ್., ಸಿಪಿಐ ಮಂಜುನಾಥ ಕುಸುಗಲ್, ತ್ರೈಮಾಸಿಕ ಸಭೆಯ ಸರ್ಕಾರದ ನಾಮನಿರ್ದೇಶಿತ ಸದಸ್ಯರಾದ ಅಶೋಕ ಹುಬ್ಬಳ್ಳಿ, ಎಂ.ಯು. ಮಕಾಂದಾರ, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಪಿಡಬ್ಲೂಡಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.