ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಇದೇ ಮೊದಲ ಬಾರಿಗೆ ಸಾರ್ವಜನಿಕರಿಂದ "ಮುನ್ಸಿಪಲ್ ಬಾಂಡ್ ಸಾಲ " ಪಡೆಯಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರಿನ ಏಜೆನ್ಸಿಯೊಂದನ್ನು ನಿಗದಿ ಕೂಡ ಮಾಡಿದೆ. ಅದು ಈ ಕುರಿತು ಅಧ್ಯಯನ ನಡೆಸಿ ಪಾಲಿಕೆಗೆ ವರದಿ ಸಲ್ಲಿಸಲಿದೆ. ಆ ಬಳಿಕ ಇದು ಕಾರ್ಯರೂಪಕ್ಕೆ ಬರಲಿದೆ. ಒಂದು ವೇಳೆ ಬಾಂಡ್ ಸಾಲ ಪಡೆದರೆ ರಾಜ್ಯದ 2ನೇ ಪಾಲಿಕೆ ಇದಾಗಲಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆ ಸೇರಿದಂತೆ ಸ್ಥಳೀಯವಾಗಿ ಪಾಲಿಕೆ ಕೈಗೊಳ್ಳುವ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ "ಮುನ್ಸಿಪಲ್ ಬಾಂಡ್ ಸಾಲ " ಪಡೆಯಲು ಮುಂದಾಗಿದೆ. ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯ ನಿಗದಿಪಡಿಸಿರುವ ಏಜೆನ್ಸಿಯ ಸಹಾಯ ಪಡೆದಿದ್ದು, ಆ ಏಜೆನ್ಸಿಯೂ ಈ ಕುರಿತು ಅಧ್ಯಯನ ನಡೆಸಲಿದೆ. ಬಿಬಿಎಂಪಿಯೂ ಈ ಹಿಂದೆ ಇದೇ ರೀತಿ ಬಾಂಡ್ ಸಾಲ ಪಡೆದು ಮೂಲಸೌಲಭ್ಯ ಕಲ್ಪಿಸಲು ಬಳಸಿತ್ತು. ಈಗಲೂ ಬಿಬಿಎಂಪಿ ಬಳಸುತ್ತಿದೆ. ಇನ್ನು ಇಂದೋರ್‌ನಲ್ಲಿನ ಪಾಲಿಕೆ ಕೂಡಾ ಇದೇ ರೀತಿ ಬಾಂಡ್ ತಯಾರಿಸಿ ಸಾಲ ಪಡೆದಿತ್ತು ಎಂದು ಮೂಲಗಳು ತಿಳಿಸಿವೆ. ಅದೇ ಮಾದರಿಯಲ್ಲಿ ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಬಾಂಡ್ ಸಾಲ ಪಡೆಯಲು ಮುಂದಾಗಿದೆ.ಪಾಲಿಕೆಗೆ ಅಭಿವೃದ್ಧಿ ಅಥವಾ ಮೂಲ ಸೌಲಭ್ಯ ಕಲ್ಪಿಸಲು ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಪರದಾಡುವುದು ತಪ್ಪುತ್ತದೆ. ಪ್ರತಿ ವರ್ಷ ಬಾಂಡ್ ಸಾಲ ಮರುಪಾವತಿ, ಅದರ ಬಡ್ಡಿ ಪಾವತಿಗೆ ಇಂತಿಷ್ಟು ಎಂದು ಹಣ ಮೀಸಲಿಡುವುದು. ಇದರಿಂದ ಪಾಲಿಕೆಗೂ ಹೊರೆಯಾಗಲ್ಲ. ಜತೆಗೆ ದೊಡ್ಡ ಪ್ರಮಾಣದ ದುಡ್ಡು ಸಿಕ್ಕು ಅಭಿವೃದ್ಧಿ ಕೆಲಸಕ್ಕೂ ತೊಂದರೆಯಾಗಲ್ಲ ಎಂಬ ಆಲೋಚನೆ ಪಾಲಿಕೆಯದ್ದು. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದಲೂ ಸಹಮತವಿದೆ.
ಅಮೃತ್-2:ಇದೀಗ ಅಮೃತ್- 2 ಯೋಜನೆ ಪಾಲಿಕೆಗೆ ಮಂಜೂರಾಗಿದೆ. ಅದಕ್ಕೆ ಶೇ.50ರಷ್ಟು ಅನುದಾನ ಪಾಲಿಕೆ ಭರಿಸಬೇಕು. ಈ ಯೋಜನೆಗೆ ಮುನ್ಸಿಪಲ್ ಬಾಂಡ್ ಬಳಸಲು ಪಾಲಿಕೆ ನಿರ್ಧರಿಸಿದೆ. ಯಾವ ರೀತಿ ಬಾಂಡ್ ಮಾಡಿದರೆ ಉತ್ತಮ, ಬಿಬಿಎಂಪಿ ಹಿಂದೆ ಯಾವ ರೀತಿ ಬಾಂಡ್ ಮಾಡಿತ್ತು ಎಂಬುದನ್ನು ಪರಿಶೀಲಿಸಿ ವರದಿಯನ್ನು ಪಾಲಿಕೆಗೆ ಸಲ್ಲಿಸಲಿದೆ. ಅದಾದ ಬಳಿಕ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವರದಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಬಳಿಕ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯಲಾಗುದು. ಈ ಎಲ್ಲ ಕೆಲಸಗಳಾಗಬೇಕೆಂದರೆ ಕನಿಷ್ಠ 6 ತಿಂಗಳಾದರೂ ಬೇಕಾಗಬಹುದು ಎಂದು ಪಾಲಿಕೆ ಮುಖ್ಯಲೆಕ್ಕಾಧಿಕಾರಿ ಪಿ.ಎನ್. ವಿಶ್ವನಾಥ ತಿಳಿಸುತ್ತಾರೆ.
ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಪಾಲಿಕೆ ಮುನ್ಸಿಪಲ್ ಬಾಂಡ್ ಮಾಡಲು ಸಿದ್ಧತೆ ನಡೆಸಿದೆ. ಬಾಂಡ್ ತಯಾರಿಸಿ ಸಾಲ ಪಡೆದರೆ ಮುನ್ಸಿಪಲ್ ಬಾಂಡ್ ಮಾಡಿದ ರಾಜ್ಯದ 2ನೇ ಪಾಲಿಕೆಯಾಗಲಿದೆ. ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ. ಸಾರ್ವಜನಿಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಏನಿದು ಬಾಂಡ್ ಸಾಲ:ಪಾಲಿಕೆಯೇ ತನಗೆ ಯಾವ ಅಭಿವೃದ್ಧಿ ಕೆಲಸಕ್ಕೆ ದುಡ್ಡು ಬೇಕಾಗಿರುತ್ತದೆಯೋ ಎಂಬುದನ್ನು ಅಧ್ಯಯನ ಮಾಡುವುದು, ಪಾಲಿಕೆಯ ಆರ್ಥಿಕತೆ ಯಾವ ಮಟ್ಟದಲ್ಲಿದೆ, ಎಷ್ಟು ಪ್ರಮಾಣದ ಹಣ ಬೇಕಾಗುತ್ತದೆ, ಎಷ್ಟು ಮುಖಬೆಲೆಯ ಬಾಂಡ್ ಸಿದ್ಧಪಡಿಸಬೇಕು, ಎಷ್ಟು ವರ್ಷದ್ದಾಗಿರಬೇಕು, ಅದಕ್ಕೆ ಎಷ್ಟು ಬಡ್ಡಿದರ ಕೊಡಬೇಕು ಎಂಬುದನ್ನೆಲ್ಲ ಅಧ್ಯಯನ ಮಾಡಿ ಅಷ್ಟು ಪ್ರಮಾಣದ ಬಾಂಡ್ ತಯಾರಿಸಿ ಖರೀದಿಸಲು ಇಚ್ಛಿಸುವ ಸಾರ್ವಜನಿಕರಿಗೆ ಮಾರಾಟ ಮಾಡುವುದಾಗಿದೆ. ಇವುಗಳನ್ನು ಖರೀದಿಸಿದ ಮೇಲೆ ಅವುಗಳನ್ನು ಇಂತಿಷ್ಟು ವರ್ಷ (5 ವರ್ಷವೋ, 10 ವರ್ಷವೋ ಅಥವಾ ಅದಕ್ಕಿಂತ ಜಾಸ್ತಿನೋ) ಎಂದು ಅವರು ತಮ್ಮ ಬಳಿ ಇಟ್ಟುಕೊಳ್ಳಬೇಕು. ಅದನ್ನು ಪಾಲಿಕೆ ನಿರ್ಧರಿಸುತ್ತದೆ. ಹೀಗೆ ಖರೀದಿಸಿದವರಿಗೆ ಪ್ರತಿ ವರ್ಷ ಬಡ್ಡಿ ಪಾವತಿಸುತ್ತದೆ. ಬಳಿಕ ಅದರ ಅವಧಿ ಮುಗಿದ ಬಳಿಕ ಖರೀದಿಸಿದ ವ್ಯಕ್ತಿ ಬಯಸಿದರೆ ದುಡ್ಡು ವಾಪಸ್ ಕೊಡುವುದು ಅಥವಾ ಮತ್ತಷ್ಟು ದಿನ ಅಥವಾ ವರ್ಷ ಇಟ್ಟುಕೊಳ್ಳಲು ಬಯಸಿದರೆ ಅದನ್ನು ಮುಂದುವರಿಸುವುದು. ಹೀಗೆ ಬಾಂಡ್ ಸಾಲ ಕೆಲಸ ಮಾಡುತ್ತದೆ.ಮುನ್ಸಿಪಲ್ ಬಾಂಡ್ ಸಿದ್ಧಪಡಿಸಲು ಪಾಲಿಕೆ ನಿರ್ಧರಿಸಿದೆ. ಬಾಂಡ್ ಯಾರು ಬೇಕಾದರೂ ಖರೀದಿಸಬಹುದು. ಅವರಿಗೆ ಪಾಲಿಕೆಯಿಂದ ಬಡ್ಡಿ ನೀಡಲಾಗುತ್ತದೆ. ಎಷ್ಟು ಮುಖಬೆಲೆ ಬಾಂಡ್, ಎಷ್ಟು ಬಡ್ಡಿ ದರ, ಎಷ್ಟು ಪ್ರಮಾಣದ ಬಾಂಡ್ ಸಿದ್ಧಪಡಿಸಬೇಕು ಎಂಬುದರ ಅಧ್ಯಯನಕ್ಕೆ ಬೆಂಗಳೂರಿನ ಏಜೆನ್ಸಿಯೊಂದನ್ನು ಗೊತ್ತು ಮಾಡಲಾಗಿದೆ. ಅದು ವರದಿ ಕೊಟ್ಟ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಪಿ.ಎನ್. ವಿಶ್ವನಾಥ ಹೇಳಿದರು.