ಸಾರಾಂಶ
ಜಯಚಾಮರಾಜೇಂದ್ರ ಆಸ್ಪತ್ರೆ ಆವರಣದಲ್ಲಿ ರೋಗಿಗಳು ಹಾಗೂ ಅವರ ಸಹಾಯಕರಿಗೆ ಕೆಲ ಹೊತ್ತು ವಿಶ್ರಮಿಸಿಕೊಳ್ಳಲು ಆಸ್ಪತ್ರೆ ಆವರಣದಲ್ಲಿ ನಗರಸಭೆ ಉದ್ಯಾನವನ್ನು ನಿರ್ಮಿಸಿ ಕೊಟ್ಟಿದೆ. ಇದು ನಿರ್ಮಾಣವಾಗಿ ಹಲವು ವರ್ಷಗಳಾದರೂ ಆಸ್ಪತ್ರೆ ಆಡಳಿತ ಇದನ್ನು ಸಾರ್ವಜನಿಕರಿಗೆ ಮುಕ್ತವಾಗಿ ತೆರೆಯದೆ ಗೇಟ್ ಬಂದ್ ಮಾಡಿದ್ದಾರೆ. ಪಾರ್ಕ್ ಗಿಡಗಂಟಿಗಳಿಂದ ಆವೃತಗೊಂಡಿದ್ದು, ವಾಕ್ ಪಾತ್‌ನಲ್ಲಿ ಸಿಮೆಂಟ್ ಚಿಪ್ಸ್‌ಗಳ ಮೇಲೆ ಗಿಡಗಂಟೆಗಳು ಬೆಳೆದಿವೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆ ಆವರಣದಲ್ಲಿ ರೋಗಿಗಳು ಹಾಗೂ ಅವರ ಸಹಾಯಕರಿಗೆ ಕೆಲ ಹೊತ್ತು ವಿಶ್ರಮಿಸಿಕೊಳ್ಳಲು ಆಸ್ಪತ್ರೆ ಆವರಣದಲ್ಲಿ ನಗರಸಭೆ ಉದ್ಯಾನವನ್ನು ನಿರ್ಮಿಸಿ ಕೊಟ್ಟಿದೆ. ಇದು ನಿರ್ಮಾಣವಾಗಿ ಹಲವು ವರ್ಷಗಳಾದರೂ ಆಸ್ಪತ್ರೆ ಆಡಳಿತ ಇದನ್ನು ಸಾರ್ವಜನಿಕರಿಗೆ ಮುಕ್ತವಾಗಿ ತೆರೆಯದೆ ಗೇಟ್ ಬಂದ್ ಮಾಡಿದ್ದಾರೆ. ಸುಂದರವಾಗಿ ರೂಪಿಸಿಕೊಟ್ಟಿದ್ದ ಪಾರ್ಕ್ ಗಿಡಗಂಟಿಗಳಿಂದ ಆವೃತಗೊಂಡಿದ್ದು, ವಾಕ್ ಪಾತ್‌ನಲ್ಲಿ ಸಿಮೆಂಟ್ ಚಿಪ್ಸ್‌ಗಳ ಮೇಲೆ ಗಿಡಗಂಟೆಗಳು ಬೆಳೆದಿವೆ, ಯಾವ ಸದುದ್ದೇಶಕ್ಕಾಗಿ ಇದನ್ನು ನಿರ್ಮಿಸಿದರು ಎಂಬುದನ್ನು ಆಸ್ಪತ್ರೆಯ ನಿರ್ವಹಣಾ ಸಮಿತಿ ಅರ್ಥ ಮಾಡಿಕೊಳ್ಳಬೇಕು. ಆಸ್ಪತ್ರೆ ಭೌತಿಕವಾಗಿ ಸಾಕಷ್ಟು ಅಭಿವೃದ್ಧಿ ಆಗಿದೆ ಆದರೂ ಆಂತರಿಕವಾಗಿ ಹಲವು ಸಮಸ್ಯೆಗಳನ್ನ ರೋಗಿಗಳು ಎದುರಿಸುತ್ತಲೇ ಇದ್ದಾರೆ, ಈ ಎಲ್ಲಾ ಮೇಲ್ವಿಚಾರಣೆ ನೋಡಿಕೊಳ್ಳಲು ಆರೋಗ್ಯ ರಕ್ಷಾಸಮಿತಿ ಇದೆ. ಇದರ ಅಧ್ಯಕ್ಷರು ನಮ್ಮ ದಕ್ಷ ಶಾಸಕರೇ ಆಗಿದ್ದಾರೆ, ಸಮಿತಿಗೆ ಉತ್ಸಾಹಿ ಸದಸ್ಯರನ್ನು ಸಹ ಅವರು ನೇಮಕ ಮಾಡಿದ್ದಾರೆ.ಪಾರ್ಕ್ ಗೇಟ್ ತೆಗೆಸಲು ನಗರಸಭೆ ಅಧ್ಯಕ್ಷರು ಅಥವಾ ಶಾಸಕರು ಬರಬೇಕೇ? ಆಸ್ಪತ್ರೆಯ ಆಡಳಿತ ಅಧಿಕಾರಿಗಳು ರಕ್ಷಾ ಸಮಿತಿ ಸದಸ್ಯರು ಇದನ್ನು ಏಕೆ ಗಮನಿಸುತ್ತಿಲ್ಲ? ಎಂಬುದು ಸಾರ್ವಜನಿಕರ ಪ್ರಶ್ನೆ, ದೊಡ್ಡ ಆಸ್ಪತ್ರೆಯ ಆವರಣವನ್ನೆಲ್ಲಾ ಸ್ವಚ್ಛಗೊಳಿಸಲು ವೆಚ್ಚ ಮಾಡಲಾಗುತ್ತದೆ. ಆದರೆ ಅದೇ ಸಣ್ಣದಾಗಿರುವ ಪಾರ್ಕನ್ನು ನಿರ್ವಹಣೆ ಮಾಡುವುದು ಕಷ್ಟವೇನಲ್ಲ. ಅರಸೀಕೆರೆಯಲ್ಲಿ ನೀರಿಗೂ ಬರವಿಲ್ಲ, ಈ ಉದ್ಯಾನವನ ಸುಂದರವಾಗಿ ಮಾಡಬಹುದು ಇಚ್ಛಾಶಕ್ತಿ ಬೇಕಷ್ಟೇ. ಯಾವುದಾದರೂ ಸಂಘಸಂಸ್ಥೆಗಳ ಸಹಯೋಗದೊಂದಿಗಾದರೂ ಆರೋಗ್ಯ ರಕ್ಷಾಸಮಿತಿ ಸದಸ್ಯರು ಇತ್ತ ಗಮನಹರಿಸಬೇಕಿದೆ.