ಸಾರಾಂಶ
ಭಾನುವಾರ ಸ್ಥಳೀಯ ಕ್ರಿಯೇಟಿವ್ ಬಾಯ್ಸ್ ಹುಡುಗರ ತಂಡ ಶ್ರಮ ವಹಿಸಿ ಕಟಾವು ಮಾಡಿ ತೆರವು ಮಾಡಿದ್ದಾರೆ.
ಭಟ್ಕಳ: ತಾಲೂಕಿನಲ್ಲಿ ಕಳೆದ ವಾರ ಸುರಿದ ಭಾರಿ ಮಳೆಗೆ ಮೂಡಭಟ್ಕಳ ಗೋಪಿನಾಥ ನದಿಗೆ ಅಡ್ಡಲಾಗಿ ಬಿದ್ದ ಬೃಹದಾಕಾರದ ಅಲದ ಮರವೊಂದನ್ನು ಭಾನುವಾರ ಸ್ಥಳೀಯ ಕ್ರಿಯೇಟಿವ್ ಬಾಯ್ಸ್ ಹುಡುಗರ ತಂಡ ಶ್ರಮ ವಹಿಸಿ ಕಟಾವು ಮಾಡಿ ತೆರವು ಮಾಡಿದ್ದಾರೆ.
ಮೂಡಭಟ್ಕಳ ಗೋಫಿನಾಥ ನದಿಯ ಕಟ್ಟೆಗೆ ತಾಗಿಕ್ಕೊಂಡ ಬೃಹತ್ ಆಲದ ಮರ ಇದಾಗಿತ್ತು. ಪ್ರತಿ ವರ್ಷ ಇದೇ ಕಟ್ಟೆಯ ಮೇಲೆ ಚನ್ನಪಟ್ಟಣ ಹನುಮಂತ ದೇವರ ಉತ್ಸವ ಮೂರ್ತಿ ಪಾಲಕಿಯಲ್ಲಿ ಬಂದು ಇದೇ ಕಟ್ಟೆಯ ಮೇಲೆ ಕೂತು ಭಕ್ತರ ಸೇವೆ ಪಡೆಯುತ್ತಿತ್ತು. ಕಳೆದ ವಾರದ ಸುರಿದ ಭಾರಿ ಮಳೆ-ಗಾಳೆಗೆ ಮರ ಬುಡಸಮೇತ ಕಳಚಿ ಬಿದ್ದಿತು.ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮರ ತೆರವಿಗೆ ಮುಂದಾಗಿರಲಿಲ್ಲ. ನದಿಗೆ ಅಡ್ಡಲಾಗಿ ಮರ ಬಿದ್ದಿರುವ ಕಾರಣ ಭಾರಿ ಮಳೆಯಾದರೆ ನದಿ ನೀರು ಮುಂದೆ ಸಾಗಲಾರದೇ ಸುತ್ತಮುತ್ತಲಿನ ಪ್ರದೇಶಗಳಿಗೆ ಮನೆ ನೀರು ನುಗ್ಗುವ ಸನ್ನಿವೇಶ ಇತ್ತು. ಇದನ್ನು ಮನಗಂಡ ತಾಲೂಕಿನ ಕ್ರಿಯೇಟಿವ್ ಬಾಯ್ಸ್ ಸದಸ್ಯರು ಶ್ರಮದಾನ ಮೂಲಕ ಬೃಹದಾಕಾರದ ಮರ ಕಟಾವು ಮಾಡಿದ್ದಾರೆ.
ಭಟ್ಕಳದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ 50 ಸದಸ್ಯರನ್ನೊಳಗೊಂಡ ಭಟ್ಕಳ ಕ್ರಿಯೇಟಿವ್ ಬಾಯ್ಸ್ ತಂಡ ಮರ ಕಟಾವು ಮಾಡುವ ಯಂತ್ರವನ್ನು ತಮ್ಮ ವಂತಿಗೆಯ ಹಣದಿಂದ ಬಾಡಿಗೆಗ ತಂದು ಯಂತ್ರದ ಸಹಾಯದಿಂದ ಬೃಹದಾಕಾರದ ಮರ ಕಟಾವು ಮಾಡಿ ಅದರ ತುಂಡುಗಳನ್ನು ವ್ಯವಸ್ಥಿತವಾಗಿ ನಿಗದಿತ ಸ್ಥಳದಲ್ಲಿ ಕೂಡಿಟ್ಟು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಕಳೆದೊಂದು ವಾರದ ಹಿಂದೆ ಮುರಿದು ಬಿದ್ದ ಮರವನ್ನು ಸ್ಥಳೀಯಾಡಳಿತ ತೆರವು ಮಾಡಬೇಕಿತ್ತು. ಆದರೆ ಸ್ಥಳೀಯಾಡಳಿತ ಮರ ಕಟಾವಿಗೆ ತಗಲುವ ಬಾರಿ ವೆಚ್ಚ ಭರಿಸುವವರಾರು ಎನ್ನುವ ಜಿಜ್ಞಾಸೆಯಲ್ಲಿತ್ತು. ಇದನ್ನು ಮನಗಂಡ ನಮ್ಮ ತಂಡದ ಸದಸ್ಯರು ಸ್ವಯಂ ಕಾರ್ಯಾಚರಣೆ ನಡೆಸಿ ಮರ ತೆರವು ಮಾಡದ್ದೇವೆ ಎಂದು ಕುಮಾರ್ ನಾಯ್ಕ ಹೇಳಿದರು.