ಮಾಜಿ ಮುಖ್ಯಮಂತ್ರಿ, ರೈತ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಸಂಭ್ರಮಾಚರಣೆಯನ್ನು ಅಭಿಮಾನೋತ್ಸವ ಹೆಸರಿನಲ್ಲಿ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮಾಜಿ ಮುಖ್ಯಮಂತ್ರಿ, ರೈತ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಸಂಭ್ರಮಾಚರಣೆಯನ್ನು ಅಭಿಮಾನೋತ್ಸವ ಹೆಸರಿನಲ್ಲಿ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಶನಿವಾರ ನಗರದ ಸುತ್ತೂರು ಮಠದ ಶಿವರಾತ್ರೀಶ್ವರ ಸ್ವಾಮೀಜಿಯನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೇ 9ರಂದು ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ರಾಜ್ಯದ ವಿವಿಧ ಮಠಗಳ ಸಾವಿರಾರು ಮಠಾಧೀಶರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಕ್ಕೂ ಮುನ್ನಾ ದಿನ ಅಂದರೆ ಮೇ 8ರಂದು ಸಂಜೆ 5 ಗಂಟೆಗೆ ಯಡಿಯೂರಪ್ಪ ಅವರು ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗುವುದು. ಸುಮಾರು 20 -25 ಕಲಾತಂಡಗಳೊಂದಿಗೆ ‘ಮಿನಿ ದಸರಾ’ ಮಾದರಿಯಲ್ಲಿ ಮೆರವಣಿಗೆ ನಡೆಯಲಿದೆ. ಸಾವಿರಾರು ರೈತರು ಮತ್ತು ಮಹಿಳೆಯರೂ ಕೂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.

ರಾಜಕೀಯ ಬಣ್ಣ ಬೇಡ:

ಇದು ವಿಜಯೇಂದ್ರ ಅವರಿಗಾಗಲಿ ಅಥವಾ ಪಕ್ಷಕ್ಕಾಗಲಿ ಬೂಸ್ಟ್ ನೀಡಲು ಮಾಡುತ್ತಿರುವ ಕಾರ್ಯಕ್ರಮ ಅಲ್ಲ. ಯಡಿಯೂರಪ್ಪ ಅವರು 45 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದು ಹೋರಾಟ ಮಾಡಿದ ಧೀಮಂತ ನಾಯಕ. ಅವರ ಹೋರಾಟದ ಬದುಕನ್ನು ಗೌರವಿಸಲು ಹಿರಿಯರು ಮತ್ತು ಅಭಿಮಾನಿಗಳು ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದಕ್ಕೆ ಯಾವುದೇ ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ಭೌಗೋಳಿಕ ಅನುಕೂಲ:

ಸಂಸದ ಗೋವಿಂದ ಕಾರಜೋಳ ಅವರ ಆಶಯದಂತೆ ಹಾಗೂ ಭೌಗೋಳಿಕವಾಗಿ ಎಲ್ಲರಿಗೂ ಅನುಕೂಲವಾಗಲಿ ಎಂಬ ಕಾರಣಕ್ಕೆ ಚಿತ್ರದುರ್ಗವನ್ನು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಬಿವೈವಿ ಮಾಹಿತಿ ನೀಡಿದರು.

ಈ ವೇಳೆ ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಬ್ಬಣ್ಣ, ಮಾಜಿ ಅಧ್ಯಕ್ಷರಾದ ಎಲ್.ಆರ್.ಮಹದೇವಸ್ವಾಮಿ, ಎಸ್.ಡಿ.ಮಹೇಂದ್ರ, ಜಿಪಂ ಮಾಜಿ ಉಪಾಧ್ಯಕ್ಷ ಡಾ। ಶಿವರಾಮ್ ಇದ್ದರು.