ಕಟ್ಟೇಪುರದ ಅಣೆಕಟ್ಟೆಯಲ್ಲಿ ಭಾರೀ ಗಾತ್ರದ ಮೊಸಳೆ ಪತ್ತೆ, ಗ್ರಾಮಸ್ಥರ ಆತಂಕ

| Published : Nov 19 2025, 12:30 AM IST

ಕಟ್ಟೇಪುರದ ಅಣೆಕಟ್ಟೆಯಲ್ಲಿ ಭಾರೀ ಗಾತ್ರದ ಮೊಸಳೆ ಪತ್ತೆ, ಗ್ರಾಮಸ್ಥರ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರೀ ಗಾತ್ರದ ಮೊಸಳೆ ನದಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಅರಕಲಗೂಡು: ತಾಲೂಕಿನ ಕಟ್ಟೇಪುರದ ಅಣೆಕಟ್ಟೆಯಲ್ಲಿ ಭಾರೀ ಗಾತ್ರದ ಮೊಸಳೆ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಕಾವೇರಿ ನದಿಯಲ್ಲಿ ಒಳಹರಿವಿನ ಪ್ರಮಾಣ ಕಡಿಮೆಗೊಂಡಿದ್ದು, ಸೋಮವಾರ ಮಧ್ಯಾಹ್ನ ಬೃಹತ್ ಗಾತ್ರದ ಮೊಸಳೆ ನದಿ ದಂಡೆಯ ಹುಲ್ಲು ಹಾಸಿನ ಮೇಲೆ ಬಿಸಿಲಿಗೆ ಮೈಯ್ಯೊಡ್ಡಿ ಮಲಗಿರುವುದು ಕಂಡುಬಂದಿದೆ. ಕಟ್ಟೇಪುರ ಗ್ರಾಮಸ್ಥರು ಮತ್ತು ಸುತ್ತಮುತ್ತಲ ಜನರು ಬಟ್ಟೆ ತೊಳೆಯಲು ಮತ್ತು ಜಾನುವಾರುಗಳಿಗೆ ನೀರು ಕುಡಿಸಲು, ಮೈತೊಳೆಯುವ ಸಲುವಾಗಿ ನಿತ್ಯವೂ ಅಣೆಕಟ್ಟೆಯ ಹಿನ್ನೀರಿಗೆ ಬಂದುಹೋಗುತ್ತಾರೆ. ಅಲ್ಲದೆ ಅಣೆಕಟ್ಟೆಯ ಎಡಭಾಗದಲ್ಲಿನ ನಾಲೆಯಲ್ಲಿ ಜಲವಿದ್ಯುತ್ ಉತ್ಪಾದನೆ ಕೂಡ ನಡೆಯುತ್ತಿದೆ.

ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರೀ ಗಾತ್ರದ ಮೊಸಳೆ ನದಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಅಣೆಕಟ್ಟೆಯ ಸುತ್ತಮುತ್ತ ಗ್ರಾಮಸ್ಥರು, ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೊಸಳೆಯನ್ನು ಹಿಡಿದು ಸುರಕ್ಷಿತ ವನ್ಯಜೀವಿ ವಾಸಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅಣೆಕಟ್ಟೆಯ ಪ್ರವೇಶದ್ವಾರದಲ್ಲಿ ನಾಮಫಲಕ ಅಳವಡಿಸಿ ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸಿದ್ದಾರೆ.