ಸಾರಾಂಶ
ಎಂ.ಪ್ರಹ್ಲಾದಕನ್ನಡಪ್ರಭ ವಾರ್ತೆ ಕನಕಗಿರಿತುಂಗಭದ್ರ ಎಡ, ಬಲದಂಡೆ ನಾಲೆಗಳ ಮುಖಾಂತರ ಬೆಳೆಯಲಾದ ಭತ್ತದ ಹುಲ್ಲಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಭೀಕರ ಬರದಲ್ಲಿ ಹುಲ್ಲಿನ ದರ ಏರಿಕೆಗೆ ಒಣಭೂಮಿ ರೈತರನ್ನು ಸಂಕಷ್ಟಿಕ್ಕೀಡು ಮಾಡಿದೆ.ಭತ್ತಕ್ಕೆ ಮಾತ್ರವಲ್ಲ ಭತ್ತದ ಹುಲ್ಲಿಗೂ ಭಾರಿ ಬೇಡಿಕೆ ಬಂದಿದೆ. ಎಕರೆ ಹುಲ್ಲಿಗೆ ಬರೋಬ್ಬರಿ ₹3000 ನಿಗದಿಯಾಗಿದೆ. ಒಂದು ಟ್ರ್ಯಾಕ್ಟರ್‌ಗೆ ೨ ಎಕರೆ ಹುಲ್ಲು ಅವಶ್ಯವಿದೆ. ಮಾಗಾಣಿಯಿಂದ (ನೀರಾವರಿ) ಮಳೆಯಾಶ್ರಿತ ಪ್ರದೇಶದ ರೈತರು ತಾವು ವಾಸವಿದ್ದ ಸ್ಥಳಕ್ಕೆ ಹಲ್ಲು ಒಯ್ಯುತ್ತಾರೆ. ಕಳೆದ ವರ್ಷ ಭತ್ತದ ಹುಲ್ಲಿಗೆ ಈ ಪರಿ ಬೇಡಿಕೆ ಇರಲಿಲ್ಲ. ಬರ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಿದ್ದರಿಂದ ರೈತರಿಗೆ ಆರ್ಥಿಕ ಪೆಟ್ಟು ಬಿದ್ದಂತಾಗಿದೆ.ಜಿಲ್ಲೆಯ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಕನಕಗಿರಿ ತಾಲೂಕಿನ ಒಣಭೂಮಿಯ ರೈತರು ತಮ್ಮ ಜಾನುವಾರುಗಳಿಗೆ ಹುಲ್ಲು ಸಂಗ್ರಹಕ್ಕೆ ಮುಂದಾಗಿದ್ದು, ಬಾಡಿಗೆ ಟ್ರ್ಯಾಕ್ಟರ್‌ಗಳೊಂದಿಗೆ ಹಗಲು-ರಾತ್ರಿ ಎನ್ನದೇ ನೀರಾವರಿ ಪ್ರದೇಶದ ಕಡೆಗೆ ತೆರಳುತ್ತಿದ್ದಾರೆ. ನಮಗೆ ತುತ್ತು ಅನ್ನ ಇಲ್ಲದಿದ್ದರೂ ಪರವಾಗಿಲ್ಲ. ದನಕರುಗಳಿಗೆ ಮೇವು ಬೇಕು ಎಂಬ ಆತಂಕಕ್ಕೊಳಗಾದ ಒಣಭೂಮಿ ರೈತರು ಹುಲ್ಲು ಸಂಗ್ರಹಕ್ಕೆ ಗಂಗಾವತಿ, ಸಿಂಧನೂರು, ಕಂಪ್ಲಿ ಕಡೆಗೆ ಹೋಗುತ್ತಿದ್ದಾರೆ.ಹುಲ್ಲು ಬೆಳೆದ ಮಾಲೀಕರ ಭೇಟಿ ಮಾಡಿದ ರೈತರು ದರ ಕುದುರಿಸಿಕೊಂಡು ಹಲ್ಲು ಖರೀದಿಸಿಕೊಂಡು ಬರುತ್ತಿದ್ದಾರೆ. ಭೀಕರ ಬರ ಎದುರಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಆಗುವುದನ್ನು ಮನಗಂಡು ಸಂಗ್ರಹಕ್ಕೆ ಮುಂದಾಗಿದ್ದಾರೆ.ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತು ಜಿಲ್ಲೆಯ ಒಣಭೂಮಿ ರೈತರ ಸಂಕಷ್ಟಕ್ಕೆ ಸ್ಪಂಧಿಸುವ ನಿಟ್ಟಿನಲ್ಲಿ ಆಯಾ ತಾಲೂಕುಗಳಲ್ಲಿ ಮೇವು ಸಂಗ್ರಹಿಸಿ, ಗೋಶಾಲೆ ಆರಂಭಿಸಿದರೆ ರೈತರಿಗೆ ಅನುಕೂಲವಾಗುವುದಲ್ಲದೇ ಹುಲ್ಲು, ಮೇವಿನ ಹಣ ಖರ್ಚು ಉಳಿತಾಯವಾಗಲಿದೆ. ಬರ ನಿರ್ವಹಣೆಗೆ ಕೋಟಿಗಟ್ಟಲೇ ವ್ಯಯ ಮಾಡುವ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ? ಕಾದು ನೋಡಬೇಕಿದೆ.ಸರ್ಕಾರ ಮೇವು ಸಂಗ್ರಹಿಸುವಂತೆ ಆದೇಶಿಸಿದೆ. ಆದರೂ ಜಿಲ್ಲೆಯ ಯಾವ ತಾಲೂಕಿನಲ್ಲಿಯೂ ಮೇವಿನ ಸಂಗ್ರಹ ಆಗುತ್ತಿಲ್ಲ. ಗೋಶಾಲೆ ತೆರೆಯುವ ಚಿಂತನೆ ಜಿಲ್ಲಾಡಳಿತಕ್ಕಿಲ್ಲ. ಸರ್ಕಾರ ಮತ್ತು ಅಧಿಕಾರಿಗಳ ನಡೆಗೆ ರೈತರು ಬೇಸತ್ತಿದ್ದಾರೆ. ಹಾಗಾಗಿ ಭತ್ತದ ಹುಲ್ಲು ಖರೀದಿ ಅನಿವಾರ್ಯವಾಗಿದೆ. ಜಿಲ್ಲಾಧಿಕಾರಿ ತಕ್ಷಣವೇ ಎಚ್ಚೆತ್ತು ಮೇವು ಖರೀದಿಸಿ, ಗೋಶಾಲೆ ಆರಂಭಿಸಬೇಕು. -ಶರಣಪ್ಪ ಗದ್ದಿ, ರೈತ ಮುಖಂಡಕೊಪ್ಪಳ ಜಿಲ್ಲೆಯಲ್ಲಿ ಮೇವಿನ ಕೊರತೆ ಇನ್ನೂ ಕಂಡು ಬಂದಿಲ್ಲ. ರೈತರು ಮುಂಜಾಗ್ರತೆಯಿಂದ ಹುಲ್ಲು ಸಂಗ್ರಹಿಸುತ್ತಿದ್ದಾರೆ. ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಮೇವು ಸಂಗ್ರಹಿಸಿ, ಗೋಶಾಲೆ ಆರಂಭಿಸಲಾಗುವುದು.-ನಳಿನ್ ಅತುಲ್, ಜಿಲ್ಲಾಧಿಕಾರಿ