ಡೋಣಿ ಬೆಳೆದರೇ, ಓಣಿಯಲ್ಲ ಜೋಳ ಎಂಬ ನಾಣ್ಣುಡಿ ಉತ್ತರ ಕರ್ನಾಟಕದ ಜನಜೀವನದಲ್ಲಿ ಇಂದಿಗೂ ಪ್ರಚಲಿತ. ಆದರೆ, ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯಿಂದ ಜೋಳದ ಬಿತ್ತನೆ ಕುಸಿತ ಕಂಡಿದ್ದು, ಮಾರುಕಟ್ಟೆಯಲ್ಲಿ ಬಿಳಿ ಜೋಳಕ್ಕೆ ಬೇಡಿಕೆ ಭಾರೀ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾಗಿರುವ ಜೋಳದ ರೊಟ್ಟಿ, ಮಳೆ ಕೊರತೆಯ ನಡುವೆಯೂ ರೈತರ ಬದುಕಿನ ನಿರೀಕ್ಷೆಯಾಗಿದೆ. ವಿಜಯಪುರ ಜಿಲ್ಲೆಯ ಮಾಲ್ದಂಡಿ ಬಿಳಿ ಜೋಳವು ತನ್ನ ವಿಶಿಷ್ಟ ಗುಣಮಟ್ಟದಿಂದ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದ್ದು, ಈ ಜೋಳವನ್ನು ವಿಜಯಪುರದ ಬಿಳಿ ಮುತ್ತು ಎಂದು ಕರೆದಿರುವುದು ಧಾರಣೆ ಹೆಚ್ಚಳದಿಂದ ಸತ್ಯವಾಗಿದೆ.
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಡೋಣಿ ಬೆಳೆದರೇ, ಓಣಿಯಲ್ಲ ಜೋಳ ಎಂಬ ನಾಣ್ಣುಡಿ ಉತ್ತರ ಕರ್ನಾಟಕದ ಜನಜೀವನದಲ್ಲಿ ಇಂದಿಗೂ ಪ್ರಚಲಿತ. ಆದರೆ, ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯಿಂದ ಜೋಳದ ಬಿತ್ತನೆ ಕುಸಿತ ಕಂಡಿದ್ದು, ಮಾರುಕಟ್ಟೆಯಲ್ಲಿ ಬಿಳಿ ಜೋಳಕ್ಕೆ ಬೇಡಿಕೆ ಭಾರೀ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾಗಿರುವ ಜೋಳದ ರೊಟ್ಟಿ, ಮಳೆ ಕೊರತೆಯ ನಡುವೆಯೂ ರೈತರ ಬದುಕಿನ ನಿರೀಕ್ಷೆಯಾಗಿದೆ. ವಿಜಯಪುರ ಜಿಲ್ಲೆಯ ಮಾಲ್ದಂಡಿ ಬಿಳಿ ಜೋಳವು ತನ್ನ ವಿಶಿಷ್ಟ ಗುಣಮಟ್ಟದಿಂದ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದ್ದು, ಈ ಜೋಳವನ್ನು ವಿಜಯಪುರದ ಬಿಳಿ ಮುತ್ತು ಎಂದು ಕರೆದಿರುವುದು ಧಾರಣೆ ಹೆಚ್ಚಳದಿಂದ ಸತ್ಯವಾಗಿದೆ.
ಬರದ ನಡುವೆಯೂ ಬೆಲೆ ಏರಿಕೆಯ ನಿರೀಕ್ಷೆ:ಈ ವರ್ಷ ಮಳೆಯ ಕೊರತೆಯಿಂದ ಜೋಳದ ಬಿತ್ತನೆ ಪ್ರದೇಶ ಕಡಿಮೆಯಾಗಿದ್ದು, ಉತ್ಪಾದನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಮತ್ತೊಂದೆಡೆ, ಬಿಳಿ ಜೋಳಕ್ಕೆ ಆಹಾರ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಬೆಲೆ ಏರಿಕೆಯ ನಿರೀಕ್ಷೆ ರೈತರಲ್ಲಿ ಮೂಡಿದೆ. ಜೋಳದ ಬೆಲೆ ಏರಿಕೆಯಿಂದ ರೈತರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ನೆರವು ದೊರೆಯುವ ಆಶಾಭಾವನೆ ಮೂಡಿದ್ದರೂ ಬರದ ಕಾರಣ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಬೆಲೆ ಏರಿಕೆಯೊಂದೇ ಸಾಕಾಗುವುದಿಲ್ಲ. ಸರ್ಕಾರ ಬೆಳೆ ನಷ್ಟದ ಪರಿಹಾರ, ಬೆಂಬಲ ಬೆಲೆ ಮತ್ತು ಖರೀದಿ ವ್ಯವಸ್ಥೆ ಕಲ್ಪಿಸಬೇಕೆಂಬುವುದು ರೈತರ ಒತ್ತಾಯ.ಬೆಲೆ ಏರಿಕೆ ರೈತರಿಗೆ ವರದಾನ:
ಮಳೆ ಕೊರತೆಯಿಂದ ಬಿತ್ತನೆ ಕುಸಿತ, ಉತ್ಪಾದನೆ ಕಡಿಮೆಯಾಗುವ ಆತಂಕ ಹಾಗೂ ಕೃಷಿ ವೆಚ್ಚದ ಹೆಚ್ಚಳದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಳಿ ಜೋಳದ ಬೆಲೆ ಏರಿಕೆಯ ನಿರೀಕ್ಷೆ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಲಾಭ ನೇರವಾಗಿ ರೈತರಿಗೆ ತಲುಪಬೇಕಾದರೆ ಮಧ್ಯವರ್ತಿಗಳ ಹಾವಳಿ ನಿಯಂತ್ರಣ, ನ್ಯಾಯಯುತ ಬೆಲೆ ಮತ್ತು ಖರೀದಿ ವ್ಯವಸ್ಥೆ ಅಗತ್ಯವಾಗಿದೆ. ಸರ್ಕಾರ ಬೆಂಬಲ ಬೆಲೆ ಘೋಷಿಸಿ, ರೈತರಿಂದ ನೇರವಾಗಿ ಜೋಳ ಖರೀದಿಸುವ ವ್ಯವಸ್ಥೆ ಕಲ್ಪಿಸಿದರೆ ರೈತರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ದೊರೆಯಲಿದೆ.ಬರದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಒದಗಿಸುವುದರ ಜೊತೆಗೆ, ಮುಂದಿನ ಹಂಗಾಮಿನಲ್ಲಿ ಜೋಳದ ಉತ್ಪಾದನೆ ಹೆಚ್ಚಿಸಲು ಅಗತ್ಯವಾದ ಬೀಜ, ಗೊಬ್ಬರ ಮತ್ತು ತಾಂತ್ರಿಕ ಮಾರ್ಗದರ್ಶನ ನೀಡಬೇಕಿದೆ. ಒಟ್ಟಿನಲ್ಲಿ, ಮಳೆ ಕೊರತೆಯಿಂದ ಜೋಳದ ಬಿತ್ತನೆ ಕುಸಿದಿದ್ದರೂ, ಬಿಳಿ ಜೋಳದ ಬೇಡಿಕೆ ಮತ್ತು ಬೆಲೆ ಏರಿಕೆಯ ನಿರೀಕ್ಷೆ ರೈತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ವಿಜಯಪುರದ ಬಿಳಿ ಮುತ್ತು ರೈತರ ಬದುಕಿನಲ್ಲಿ ನಿಜವಾದ ಬಂಗಾರವಾಗಬೇಕಾದರೇ ಸರ್ಕಾರದ ಬೆಂಬಲ ಮತ್ತು ನ್ಯಾಯಯುತ ಮಾರುಕಟ್ಟೆ ವ್ಯವಸ್ಥೆಯಾಗಬೇಕೆನ್ನುವುದು ರೈತರ ಆಗ್ರಹ.ಜೋಳ ಬಿತ್ತನೆ ಪ್ರಮಾಣದಲ್ಲಿ ಭಾರೀ ಕುಸಿತ:ತಾಲೂಕಿನಲ್ಲಿ ಹಿಂದೆ 10 ಸಾವಿರಾರು ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚು ಒಲವು ತೋರಿರುವುದರಿಂದ ಜೋಳದ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. 2024ನೇ ಸಾಲಿನಲ್ಲಿ 3,843 ಎಕರೆ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿತ್ತು. 2025ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿದ್ದರಿಂದ 6,745 ಎಕರೆ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿತ್ತು. ಪ್ರಸ್ತುತ ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಜೋಳದ ಬಿತ್ತನೆಗೆ ಹಿನ್ನಡೆಯಾಗಿದೆ. ಅಂದಾಜು ಸಾವಿರಾರು ಎಕರೆಗಳಿಗೆ ಮಾತ್ರ ಜೋಳದ ಬೀಜಗಳು ಖರೀದಿಯಾಗಿದೆ.ದೋಣಿ ನದಿ ತೀರದ ಪ್ರದೇಶದಲ್ಲಿ ಆಳವಾದ ಕಪ್ಪು ಮಣ್ಣು ಹೆರಳವಾಗಿದ್ದರಿಂದ ಮಾಲ್ದಂಡಿ ಬಿಳಿ ಜೋಳದ ಬೆಳೆ ಹೆಚ್ಚು ಬೆಳೆಯುತ್ತಾರೆ. ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಜೋಳದ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ನಿರೀಕ್ಷೆಯಂತೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಜೋಳದ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯಲ್ಲಿ ವ್ಯತ್ಯಾಸವಾಗುವುದು.
-ಶರಣಗೌಡ ಬಿರಾದಾರ, ಕೃಷಿ ಅಧಿಕಾರಿಗಳು ದೇವರಹಿಪ್ಪರಗಿ.