ಇಂದು ಬೃಹತ್ ಆರೋಗ್ಯ ಮೇಳ, ಸದ್ಬಳಿಸಿಕೊಳ್ಳಿ: ಶಾಸಕ ವಿಶ್ವಾಸ ವೈದ್ಯ

| Published : Mar 23 2025, 01:38 AM IST

ಇಂದು ಬೃಹತ್ ಆರೋಗ್ಯ ಮೇಳ, ಸದ್ಬಳಿಸಿಕೊಳ್ಳಿ: ಶಾಸಕ ವಿಶ್ವಾಸ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸವದತ್ತಿಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಆರೋಗ್ಯ ಮೇಳದ ವ್ಯವಸ್ಥೆಯನ್ನು ಶಾಸಕ ವಿಶ್ವಾಸ ವೈದ್ಯ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಾ.೨೩ರಂದು ಬೃಹತ್ ಆರೋಗ್ಯ ಮೇಳ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ತಜ್ಞ ವೈದ್ಯರಿಂದ ಎಲ್ಲ ರೀತಿ ರೋಗಗಳಿಗೆ ಪರೀಕ್ಷೆ ಮತ್ತು ಚಿಕಿತ್ಸೆ ನೀಡುವ ಗುರಿಯನ್ನು ಈ ಆರೋಗ್ಯ ಮೇಳದಲ್ಲಿ ಹೊಂದಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಪಂ ಸಹಯೋಗದೊಂದಿಗೆ ಮಾ.೨೩ರಂದು ಬೆಳಗ್ಗೆ ೮ರಿಂದ ಸಂಜೆ ೫.೩೦ರವರೆಗೆ ಆರೋಗ್ಯ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮೀಣ ಭಾಗದ ಎಲ್ಲ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಘನ ಸರಕಾರವು ನಮ್ಮ ಭಾಗದಲ್ಲಿ ಈ ಆರೋಗ್ಯ ಮೇಳ ಆಯೋಜಿಸಿರುವುದರಿಂದ ಪ್ರತಿಯೊಬ್ಬರೂ ಈ ಮೇಳದ ಸದುಪಯೋಗ ಪಡೆದುಕೊಳ್ಳಲಿ ಎಂದರು.

ಪಟ್ಟಣದ ಸೌಂದರ್ಯೀಕರಣದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಗುರುವಾರ ಪಟ್ಟಣದಲ್ಲಿ ಹಾದು ಹೋಗುವ ಸಿಂಧನೂರು ಹೆಮ್ಮಡಗಾ ಮುಖ್ಯ ರಸ್ತೆಯಲ್ಲಿ ಅತಿಕ್ರಮಿಸಿ ನಿರ್ಮಿಸಿಕೊಂಡ ಅಂಗಡಿಗಳನ್ನು ಸಾರ್ವಜನಿಕರೆ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿಕೊಂಡಿರುವುದು ಸಂತಸದ ವಿಷಯ ಎಂದರು. ಸಾರ್ವಜನಿಕರು ಪಟ್ಟಣದ ಸೌಂದರ್ಯೀಕರಣಕ್ಕೆ ಹಾಗೂ ಅಭಿವೃದ್ಧಿ ಕುರಿತು ನೀಡಿರುವ ಈ ಸಹಕಾರ ಸ್ಮರಿಸುತ್ತಾ ಬರುವಂತ ದಿನಗಳಲ್ಲಿ ತೊಂದರೆಗೊಳಗಾದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ತೆರವುಗೊಂಡ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಅಲ್ಲಲ್ಲಿ ರಸ್ತೆ ವಿಭಜಕಗಳನ್ನು ಅಳವಡಿಸುವುದರ ಜೊತೆಗೆ ₹೧೫ ಕೋಟಿ ಅನುದಾನದಲ್ಲಿ ವಿಶೇಷ ಅಭಿವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ. ಇದರೊಟ್ಟಿಗೆ ಅಲಂಕಾರಿಕ ವಿದ್ಯುತ್‌ ದ್ವೀಪ ಅಳವಡಿಸಲಾಗುತ್ತಿದೆ. ಪೂರಕವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ಎಲ್ಲ ಇಲಾಖೆ ಅಧಿಕಾರಿಗಳ ಶ್ರಮ ಬಹಳಷ್ಟಿದೆ ಎಂದರು. ಪಟ್ಟಣದ ಎಲ್ಲ ಮಹಾತ್ಮರ ವೃತ್ತಗಳನ್ನು ಅಭಿವೃದ್ಧಿಗೊಳಿಸುವುದರೊಂದಿಗೆ ಪಟ್ಟಣದಲ್ಲಿ ಅತ್ಯವಶ್ಯವಾಗಿರುವ ಒಳ ಚರಂಡಿ ಯೋಜನೆ ಕಾರ್ಯವನ್ನು ಕೂಡಲೆ ಆರಂಭಿಸಲಾಗುತ್ತಿದೆ ಎಂದರು. ಪಟ್ಟಣದಲ್ಲಿ ಏ.೧೦ಕ್ಕೆ ೨೪/೭ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಪರಿಪೂರ್ಣಗೊಳಿಸುವುದರ ಜೊತೆಗೆ ಅದನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಪಟ್ಟಣದಲ್ಲಿ ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಿಸುವ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿನಮಠ, ಶಿವಾನಂದ ಹೂಗಾರ, ಚಂದ್ರಣ್ಣ ಶಾಮರಾಯನವರ, ಬಿ.ಎನ್.ಪ್ರಭುನವರ, ಟಿ.ಎಚ್.ಓ ಡಾ.ಶ್ರೀಪಾದ ಸಬನೀಸ, ಲೋಕೋಪಯೋಗಿ ಇಲಾಖೆ ಅಭಿಯಂತರ ವಿಜಯ ಸಂಗಪ್ಪಗೋಳ, ಹೆಸ್ಕಾಂ ಎಇಇ ಮಹೇಂದ್ರ ವಿಶಾಪುರಕರ, ಪ್ರವೀಣ ರಾಮಪ್ಪನವರ, ಮಂಜು ಪಾಚಂಗಿ, ಬಸವರಾಜ ಅರಮನಿ ಇತರರು ಉಪಸ್ಥಿತರಿದ್ದರು.

೧೦ ಸಾವಿರಕ್ಕೂ ಅಧಿಕ ಜನ ಸೇರುವ ಸಾಧ್ಯತೆ

ಸವದತ್ತಿ: ಮಾ.೨೩ರಂದು ಬೃಹತ್ ಆರೋಗ್ಯ ಮೇಳವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಘನ ಉಪಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ್ ಉದ್ಘಾಟಿಸಲಿದ್ದಾರೆ.

ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆವಹಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಸರಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ, ಕರ್ನಾಟಕ ಸರಕಾರದ ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ ಭರಮಗೌಡ ಕಾಗೆ, ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಸೇರಿದಂತೆ ಜಿಲ್ಲೆಯ ಸಂಸದರು, ರಾಜ್ಯ ಸಭಾ ಸದಸ್ಯರು ಮತ್ತು ಶಾಸಕರು ಹಾಗೂ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ತಾಲೂಕು ಕ್ರೀಡಾಂಗಣದಲ್ಲಿ ಬೃಹದಾಕಾರದ ಪೆಂಡಾಲ್‌ ಹಾಕಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಪಂ ಸಹಯೋಗದೊಂದಿಗೆ ಬೆಳಗ್ಗೆ ೮ರಿಂದ ಸಂಜೆ ೫.೩೦ರವರೆಗೆ ಆರೋಗ್ಯ ಮೇಳ ಆಯೋಜಿಸಲಾಗಿದೆ. ರೋಗಿಗಳ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಂದಾಜು ೧೦ ಸಾವಿರಕ್ಕೂ ಅಧಿಕ ಜನ ಸೇರುವ ಸಾಧ್ಯತೆಗಳಿದ್ದು, ೩೦೦ಕ್ಕೂ ಅಧಿಕ ನುರಿತ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದ್ದಾರೆ.

ಆರೋಗ್ಯ ಮೇಳಕ್ಕೆ ಆಗಮಿಸುವ ಎಲ್ಲ ರೋಗಿಗಳ ಪರೀಕ್ಷೆ ಹಾಗೂ ಚಿಕಿತ್ಸೆಯ ಜೊತೆಗೆ ಔಷಧೋಪಚಾರದ ವ್ಯವಸ್ಥೆ ಮಾಡಲಾಗಿದೆಂದು ಟಿಎಚ್‌ಓ ಡಾ.ಶ್ರೀಪಾದ ಸಬನೀಸ ವಿನಂತಿಸಿದ್ದಾರೆ.