ಗಾವಡಗೆರೆಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ಧೂರಿ ಸ್ವಾಗತ

| Published : Feb 11 2024, 01:46 AM IST

ಸಾರಾಂಶ

ಹಿರೀಕ್ಯಾತನಹಳ್ಳಿ ಗ್ರಾಪಂ ಕೇಂದ್ರ ಸ್ಥಾನದ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸರಳ ಮಾತನಾಡಿ, ಸಂವಿಧಾನವೆಂಬುದು ಕೇವಲ ಕಾನೂನಿನ ಪುಸ್ತಕವಲ್ಲ್ಲ. ಅದು ಆಧುನಿಕ ಭಾರತದಲ್ಲಿ ಜನರ ಜೀವನವನ್ನು ಪುನರುಜ್ಜೀವನಗೊಳಿಸಿದ ಒಂದು ಮಹಾನ್ ಗ್ರಂಥ ಎಂದರು.

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಪಂ ಪ್ರಮುಖ ಕೇಂದ್ರದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಶುಕ್ರವಾರ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

ಹೋಬಳಿ ವ್ಯಾಪ್ತಿಯ ಹರವೆ, ಗಾವಡಗೆರೆ, ಬಿಳಿಗೆರೆ, ಜಾಬಗೆರೆ, ಮುಳ್ಳೂರು, ಹಿರೀಕ್ಯಾನಹಳ್ಳಿ ಗ್ರಾಪಂ ಕೇಂದ್ರ ಸ್ಥಾನದಲ್ಲಿ ವಿವಿಧ ಶಾಲಾ ಮಕ್ಕಳು ರಾಷ್ಟ್ರಧ್ವಜ ಹಿಡಿದು ಜಾಥಾದಲ್ಲಿ ಪಾಲ್ಗೊಂಡರು.

ಗ್ರಾಮಸ್ಥರು ಎತ್ತಿನ ಗಾಡಿಗಳನ್ನು ಸಿಂಗರಿಸಿ ರಾಸುಗಳನ್ನು ವಿಶೇಷವಾಗಿ ಅಲಂಕರಿಸಿ ರಥದ ಜೊತೆ ಮೆರವಣಿಗೆಯಲ್ಲಿ ಸಾಗಿಬಂದವು. ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಸ್ವಾಗತಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಗ್ರಾಮಗಳ ಬೀದಿ ಬೀದಿಗಳಲ್ಲಿ ಬಣ್ಣ ಬಣ್ಣದ ರಂಗೋಲಿ, ತಳಿರು ತೋರಣ, ಬಣ್ಣ ಬಣ್ಣದ ಬಂಟಿಂಗ್ಸ್ ಗಳಿಂದ ಅಲಂಕರಿಸಲಾಗಿತ್ತು. ಟಮಟೆ ವಾದ್ಯಗಳು ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯನ್ನು ಇನ್ನಷ್ಟು ಅಂದಗಾಣಿಸಿದವು.

ಹಿರೀಕ್ಯಾತನಹಳ್ಳಿ ಗ್ರಾಪಂ ಕೇಂದ್ರ ಸ್ಥಾನದ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸರಳ ಮಾತನಾಡಿ, ಸಂವಿಧಾನವೆಂಬುದು ಕೇವಲ ಕಾನೂನಿನ ಪುಸ್ತಕವಲ್ಲ್ಲ. ಅದು ಆಧುನಿಕ ಭಾರತದಲ್ಲಿ ಜನರ ಜೀವನವನ್ನು ಪುನರುಜ್ಜೀವನಗೊಳಿಸಿದ ಒಂದು ಮಹಾನ್ ಗ್ರಂಥ ಎಂದರು.

ಹುಣಸೂರಿನ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕಾರ್ತಿಕ್ ಮಾತನಾಡಿ, ಅಂಬೇಡ್ಕರ್ ಸಂವಿಧಾನದಲ್ಲಿ ಆರ್ಟಿಕಲ್ 15ನ್ನು ಸೇರಿಸಿ ಮಹಿಳೆಯರಿಗೆ ಹಾಗೂ ಮಹಿಳೆಯರ ಏಳಿಗೆಗೆ ಶಿಕ್ಷಣವನ್ನು ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತಂದರು ಎಂದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತ್ತು. ಗ್ರಾಮದ ಯಜಮಾನರಾದ ಜಗದೀಶ್, ಸುರೇಶ್, ಶ್ರೀಧರ್, ಪಿಡಿಒ ಶಿಲ್ಪಾಶ್ರೀ, ಜನಪ್ರತಿನಿಧಿಗಳು ಇದ್ದರು.