ಹುಕ್ಕೇರಿ ತಾಪಂನಲ್ಲಿ ದುಡ್ಡಿದೆ, ಬಳಸುವ ಮನಸ್ಸಿಲ್ಲ

| Published : Dec 19 2023, 01:45 AM IST

ಹುಕ್ಕೇರಿ ತಾಪಂನಲ್ಲಿ ದುಡ್ಡಿದೆ, ಬಳಸುವ ಮನಸ್ಸಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಜಿಡ್ಡುಗಟ್ಟಿದ ಅಧಿಕಾರಿ-ಸಿಬ್ಬಂದಿ ಆಡಳಿತ ವ್ಯವಸ್ಥೆಯಿಂದ ಹುಕ್ಕೇರಿ ತಾಲೂಕು ಪಂಚಾಯಿತಿ ಬಹುತೇಕ ನಿಷ್ಕ್ರಿಯಗೊಂಡ ಸ್ಥಿತಿಯಲ್ಲೇ ಸಾಗಿದೆ. ಇಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ದುಡ್ಡಿದ್ದರೂ ಬಳಸುವ ಮನಸ್ಸು ಇಲ್ಲದೆ ಇಡೀ ವ್ಯವಸ್ಥೆಯೇ ಕುಸಿದಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಜಿಡ್ಡುಗಟ್ಟಿದ ಅಧಿಕಾರಿ-ಸಿಬ್ಬಂದಿ ಆಡಳಿತ ವ್ಯವಸ್ಥೆಯಿಂದ ಹುಕ್ಕೇರಿ ತಾಲೂಕು ಪಂಚಾಯಿತಿ ಬಹುತೇಕ ನಿಷ್ಕ್ರಿಯಗೊಂಡ ಸ್ಥಿತಿಯಲ್ಲೇ ಸಾಗಿದೆ. ಇಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ದುಡ್ಡಿದ್ದರೂ ಬಳಸುವ ಮನಸ್ಸು ಇಲ್ಲದೆ ಇಡೀ ವ್ಯವಸ್ಥೆಯೇ ಕುಸಿದಿದೆ.

ಗ್ಯಾರಂಟಿ ಯೋಜನೆಗಳ ಹೊಡೆತದಿಂದ ಸೊರಗಿರುವ ತಾಲೂಕು ಪಂಚಾಯಿತಿಗೆ ಇದೀಗ ಕೆಲ ಯೋಜನೆಗಳಲ್ಲಿ ಅಗತ್ಯ ಅನುದಾನವಿದ್ದರೂ ಬಳಸಿಕೊಳ್ಳುವಂಥ ಅಧಿಕಾರಿ-ಸಿಬ್ಬಂದಿ ಬರ ಎದುರಾಗಿದೆ. ಈ ಮೊದಲೇ ಚುನಾಯಿತ ಪ್ರತಿನಿಧಿಗಳಿಲ್ಲದೇ ಗರ ಬಡಿದಂತಿರುವ ತಾಪಂ ಇದ್ದ ಅನುದಾನವನ್ನೂ ಉಪಯೋಗಿಸಿಕೊಳ್ಳದೇ ಅಕ್ಷರಶಃ ಕಳಾಹೀನವಾಗಿದೆ.

ತಾಪಂನಲ್ಲಿ ನಿಧಾನವೇ ಪ್ರಧಾನ ಎಂಬ ಪರಿಸ್ಥಿತಿಯಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಆಮೆ ನಡಿಗೆ ಎನ್ನುವ ವಾತಾವರಣವಿದ್ದು ನಿಧಾನವಾಗಿ ಸರ್ಕಾರಕ್ಕೆ ಅಧಿಕಾರಿಗಳನ್ನು ಬಿಳಿಯಾನೆ ಸಾಕಿದ ಅನುಭವವಾಗುತ್ತಿದೆ. ಹಾಗಾಗಿ ಹುಕ್ಕೇರಿ ತಾಲೂಕು ಪಂಚಾಯಿತಿ ಎಂದರೆ ಮೂಗು ಮುರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

2023-24ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಡಿ ಈ ತಾಲೂಕು ಪಂಚಾಯಿತಿಗೆ ₹2,45,09,839 ಗಳನ್ನು ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದೆ. ಜತೆಗೆ ಈ ಅನುದಾನವನ್ನೂ ಬಿಡುಗಡೆಗೊಳಿಸಿದೆ. ಆದರೆ, ಈವರೆಗೂ ಒಂದೇ ಒಂದು ಪೈಸೆಯೂ ಖರ್ಚಾಗಿಲ್ಲ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಪ್ರಸಕ್ತ ಆರ್ಥಿಕ ಹಣಕಾಸು ವರ್ಷ ಪೂರ್ಣಗೊಳ್ಳಲು ಕೇವಲ ಮೂರು ತಿಂಗಳು ಬಾಕಿ ಉಳಿದಿದೆ. ಆದರೆ, ತಾಪಂ ಅಧಿಕಾರಿಗಳು ಇನ್ನೂ ಈ ಅನಿರ್ಬಂಧಿತ ಅನುದಾನದ ಕ್ರಿಯಾ ಯೋಜನೆ ರೂಪಿಸುವ ಹಂತದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಈ ಅತ್ಯಲ್ಪ ಅವಧಿಯಲ್ಲಿ ಕಾಮಗಾರಿಗಳನ್ನು ಮುಗಿಸುವುದು ಕಷ್ಟದಾಯಕವಾಗಿದೆ.

ಈ ಅನುದಾನ ಆಯಾ ಆರ್ಥಿಕ ವರ್ಷದಲ್ಲಿ ಖರ್ಚಾಗದಿದ್ದರೆ ಸರ್ಕಾರ ಮರಳಿ ವಾಪಸ್ ಪಡೆಯುತ್ತದೆ. ಹಾಗಾಗಿ ಮೊದಲೇ ಮರಳಿಹೋಗುವ (ಲ್ಯಾಪ್ಸಬಲ್) ಅನುದಾನ ಇದಾಗಿದ್ದರಿಂದ ಸರ್ಕಾರಕ್ಕೆ ವಾಪಸ್ಸಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆಗ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಪ್ರಗತಿಯಲ್ಲಿ ಹಿಂದೆ ಉಳಿದಿದ್ದೇವೆ ಎಂಬ ಅಳಲು ಶುರುವಾಗಬಹುದು.

ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯಬೇಕು. ಬಳಿಕ ಅಂದಾಜು ಪತ್ರಿಕೆಗಳನ್ನು ಸಿದ್ಧಪಡಿಸಿ ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆದು ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ಪತ್ರ ವಿತರಿಸಬೇಕು. ನಂತರ ಕಾಮಗಾರಿ ಪೂರ್ಣಗೊಳಿಸಿ ಖಜಾನೆಗೆ ಬಿಲ್ ಸಲ್ಲಿಸಬೇಕು. ಇಷ್ಟೆಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿ ವಲಯಕ್ಕೆ ಮೂರು ತಿಂಗಳಲ್ಲಿ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ಇನ್ನು ತಾಪಂನ ಅಧಿಬಾರಕರ (ಸ್ಟ್ಯಾಂಪ್ ಡ್ಯುಟಿ) ಯೋಜನೆಯ ಸ್ಥಿತಿಯೇನೂ ಭಿನ್ನವಾಗಿಲ್ಲ. ಸುಮಾರು 25 ಲಕ್ಷಕ್ಕೂ ಹೆಚ್ಚಿನ ಈ ಅನುದಾನದ ಕಾಮಗಾರಿಗಳೂ ಸಹ ಕುಂಟುತ್ತಾ ಸಾಗಿವೆ. ಪ್ರಸಕ್ತ ವರ್ಷದ 15ನೇ ಹಣಕಾಸು ಆಯೋಗ ಅನುದಾನ ಈವರೆಗೂ ಮಂಜೂರಾಗಿಲ್ಲ.

ತುಕ್ಕು ಹಿಡಿದಂತಿರುವ ಇಲ್ಲಿನ ತಾಲೂಕು ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸವನ್ನು ಸಂಬಂಧಿಸಿದ ಸಚಿವರು, ಶಾಸಕರು ಮತ್ತು ಹಿರಿಯ ಮೇಲಧಿಕಾರಿಗಳು ಮಾಡಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

----------------

--- ಕೋಟ್ ---

ಹುಕ್ಕೇರಿ ತಾಪಂಗೆ ವಿವಿಧ ಯೋಜನೆಯಡಿ ಬಿಡುಗಡೆಯಾದ ಎಲ್ಲ ಅನುದಾನವನ್ನು ನಿಗದಿತ ಅವಧಿಯಲ್ಲಿ ಕೆಲಸಗಳನ್ನು ಪೂರ್ಣಗೊಳಿಸಿ ಸದ್ಬಳಕೆ ಮಾಡಿಕೊಳ್ಳಲಾಗುವುದು. ಯಾವುದೇ ಹಣ ವಾಪಸ್ ಹೋಗದಂತೆ ನೋಡಿಕೊಳ್ಳಲಾಗುವುದು.

-ಪ್ರವೀಣ ಕಟ್ಟಿ, ಇಒ ತಾಪಂ