ಸಾರಾಂಶ
ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುನಗರದ ಮಾಗೋಡ ರಸ್ತೆಯಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ನಿರ್ಮಿಸಿರುವ ಮನೆಗಳಲ್ಲಿ ವಾಸಿಸುವವರಿಗೆ ಒಂದೂವರೆ ದಶಕ ಕಳೆದರೂ ಸಮಸ್ಯೆಯಲ್ಲೇ ಒದ್ದಾಡುವಂತಾಗಿದೆ.
ಸುಮಾರು 15 ವರ್ಷಗಳ ಹಿಂದೆ ಮೊದಲ ಹಂತದಲ್ಲಿ 538 ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡಿತ್ತು. ಆದರೆ, ಸದ್ಯ ಅಲ್ಲಿ ವಾಸಿಸುತ್ತಿರುವ ನಿವಾಸಿಗಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಈ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿ ಹೋಗಿದ್ದು, ಕೆಲವು ಕಡೆ ವಿಲೇವಾರಿ ಚೆಂಬರ್‌ಗಳು ಬಾಯಿ ತೆರೆದುಕೊಂಡಿವೆ. ಟ್ರಾನ್ಸ್‌ಫಾರ್ಮರ್‌ಗಳು ತುಕ್ಕು ಹಿಡಿದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿವೆ.
ಇಲ್ಲಿ ಒಟ್ಟು 24 ಟ್ರಾನ್ಸ್‌ಫಾರ್ಮರ್‌ಗಳಿದ್ದು ಆ ಪೈಕಿ 4 ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ನಿವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಾಗಿದೆ. ಈ ಹಿಂದೆ ಇಲ್ಲಿ ನಿರ್ಮಿಸಲಾದ ಓವರ್‌ಹೆಡ್ ಟ್ಯಾಂಕ್‌ಗಳು ಶಿಥಿಲಾವಸ್ಥೆಗೆ ಬಂದಿವೆ. ಇವುಗಳನ್ನು ಸ್ವಚ್ಛಗೊಳಸುವುದಂತೂ ದೂರದ ಮಾತಾಗಿದೆ. ರಸ್ತೆಗಳು ಹಾಳಾಗಿದ್ದು ದಾರಿಯುದ್ದಕ್ಕೂ ತೆಗ್ಗು ಗುಂಡಿಗಳು ಬಿದ್ದಿವೆ.ಹಸ್ತಾಂತರಕ್ಕೆ ಅಸಮ್ಮತಿ:
ಈ ಹಿಂದೆ ಇಲ್ಲಿನ ನಿವಾಸಿಗಳು ಈ ಪ್ರದೇಶವನ್ನು ಕರ್ನಾಟಕ ಗೃಹ ಮಂಡಳಿ ವ್ಯಾಪ್ತಿಯಿಂದ ನಗರಸಭೆ ಸುಪರ್ದಿಗೆ ಹಸ್ತಾಂತರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಆಗ ಶಾಸಕರಾಗಿದ್ದ ಅರುಣಕುಮಾರ ಪೂಜಾರ ಮೂಲಕ ಕರ್ನಾಟಕ ಗೃಹ ಮಂಡಳಿ ವತಿಯಿಂದ ₹2 ಕೋಟಿಗಳ ಚೆಕ್‌ನ್ನು ಕೂಡ ನಗರಸಭೆ ಪೌರಾಯುಕ್ತರಿಗೆ ನೀಡಿದ್ದರು. ಆದರೆ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಅದಕ್ಕೆ ಸಮ್ಮತಿ ದೊರಕದ ಕಾರಣ ಚೆಕ್‌ನ್ನು ಮರಳಿ ಕರ್ನಾಟಕ ಗೃಹ ಮಂಡಳಿಗೆ ಹಿಂದಿರುಗಿಸಲಾಯಿತು. ಹೀಗಾಗಿ ಪರಿಹಾರ ಕಾಣಬೇಕಾಗಿದ್ದ ಸಮಸ್ಯೆ ಹಾಗೆ ಉಳಿದುಕೊಂಡಿತು. ಇದರಿಂದ ಇಲ್ಲಿನ ನಿವಾಸಿಗಳ ಸಮಸ್ಯೆಗೆ ಪರಿಹಾರ ಎನ್ನುವುದು ಮರೀಚಿಕೆಯಾಗಿದೆ.ಕರ್ನಾಟಕ ಗೃಹ ಮಂಡಳಿಯ ಮೇಲೆ ನಂಬಿಕೆಯಿಟ್ಟು ನಿವೇಶನ ಖರೀದಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಆದರೆ ನಮ್ಮ ನಂಬಿಕೆ ಹುಸಿಯಾಗಿದ್ದು ಇದುವರೆಗೂ ನಾವು ಅನುಭವಿಸುತ್ತಿರುವ ತೊಂದರೆಗಳಿಗೆ ಪರಿಹಾರ ಸಿಕ್ಕಿಲ್ಲ. ಹಾವೇರಿಯಲ್ಲಿ ಜರುಗಿದ ಜನತಾ ದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಎರಡು ತಿಂಗಳು ಗತಿಸಿದರೂ ಪರಿಹಾರ ಮಾತ್ರ ಶೂನ್ಯವಾಗಿದೆ ಎಂದು ನಿವಾಸಿಗಳಾದ ಬಸವರಾಜ ಬಡಿಗೇರ, ವಿರೂಪಾಕ್ಷಪ್ಪ ಅರವಂಟಿಗಿ, ಅಶೋಕ ಸುರಗೊಂಡರ, ಲಿಂಗರಾಜ ಹನಗೋಡಿಮಠ, ಅಶೋಕರೆಡ್ಡಿ ಜಟ್ಟಪ್ಪನವರ, ಮಹಾಲಿಂಗಯ್ಯ ಸಾಲಿಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಬಗ್ಗೆ ಜಿಲ್ಲಾ ಕೇಂದ್ರ ಹಾವೇರಿ ಮತ್ತು ರಾಣಿಬೆನ್ನೂರಿನಲ್ಲಿ ನಡೆದ ಜನತಾ ದರ್ಶನದಲ್ಲಿ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅರ್ಜಿಗಳಿಗೆ (ಸಮಸ್ಯೆಗಳಿಗೆ) ತ್ವರಿತವಾಗಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೂ ಇಲ್ಲಿನ ನಿವಾಸಿಗಳ ಕೂಗು ಅರಣ್ಯರೋದನವಾಗಿದೆ. ಇತ್ತೀಚಿಗೆ ಬೆಳಗಾವಿಯಲ್ಲಿ ಜರುಗಿದ ವಿಧಾನ ಮಂಡಲದ ಅಧಿವೇಶನ ಸಂದರ್ಭದಲ್ಲಿಯೂ ಇಲ್ಲಿನ ನಿವಾಸಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಸಲ್ಲಿಸಿ ಬಂದಿದ್ದಾರೆ. ಇನ್ನು ಮೇಲಾದರೂ ಸರ್ಕಾರ ಇಲ್ಲಿನ ನಿವಾಸಿಗಳ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.