ಸಾರಾಂಶ
ಶಿವಮೊಗ್ಗ ನಗರದ ಡಿಸಿಸಿ ಬ್ಯಾಂಕ್ ಸಭಾ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಡಿ.21ರಂದು ಬೆಳಗ್ಗೆ 11 ಗಂಟೆಗೆ ರೈತ ಮಹಾನಾಯಕ ಎನ್.ಡಿ.ಸುಂದರೇಶ್ 31ನೇ ವರ್ಷದ ಸ್ಮರಣೆ ಹಾಗೂ ರೈತರ ಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ ಹೇಳಿದ್ದಾರೆ.
ಶಿವಮೊಗ್ಗ: ನಗರದ ಡಿಸಿಸಿ ಬ್ಯಾಂಕ್ ಸಭಾ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಡಿ.21ರಂದು ಬೆಳಗ್ಗೆ 11 ಗಂಟೆಗೆ ರೈತ ಮಹಾನಾಯಕ ಎನ್.ಡಿ.ಸುಂದರೇಶ್ ಅವರ 31ನೇ ವರ್ಷದ ಸ್ಮರಣೆ ಹಾಗೂ ರೈತರ ಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ ಹೇಳಿದರು.
ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ರೈತ ಸಂಘವನ್ನು ಕಟ್ಟಿದ ಧೀಮಂತ ರೈತ ನಾಯಕ ಎನ್.ಡಿ.ಸುಂದರೇಶ್ ಈ ನಾಡಿನ ರೈತರ ಕಣ್ಮಣಿ. ಬಡ ಕೂಲಿ ಕಾರ್ಮಿಕರ ಪರ ಧ್ವನಿ ಎತ್ತಿದ ರೈತ ಹೋರಾಟಗಾರ. ಮಹಾತ್ಮರಾಗಿ ರೈತರ ಹೃದಯಂತರಾಳದಲ್ಲಿ ಉಳಿದ್ದಾರೆ ಎಂದರು.ರಾಜ್ಯದಲ್ಲಿ ಬರಗಾಲದ ಕರಾಳ ಛಾಯೆಯಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದ 216 ತಾಲೂಕುಗಳನ್ನು ಬರಗಾಲದ ತಾಲೂಕುಗಳೆಂದು ಘೋಷಣೆ ಮಾಡಿ. ಇನ್ನೂ ರೈತರಿಗೆ ಬರ ಪರಿಹಾರವನ್ನು ನೀಡುವಲ್ಲಿ ಸರ್ಕಾರವು ಯಾವುದೇ ಆದೇಶ ಮಾಡಿಲ್ಲ. ಇದು ಜನವಿರೋಧಿ ನಡೆಯಾಗಿದೆ. ತನ್ನದು ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಎಂದು ಕಾಂಗ್ರೆಸ್ ಸಾಬೀತುಪಡಿಸಿಕೊಂಡಿದೆ ಎಂದು ಆರೋಪಿಸಿದರು.
ಬರದಿಂದ ತತ್ತರಿಸಿರುವ ರೈತರಿಗೆ ಕೇಂದ್ರ ವಿಪತ್ತು ಪ್ರತಿಕ್ರಿಯೆ ನಿಧಿ ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯನ್ನು ಶೀಘ್ರವಾಗಿ ಬಿಡುಗಡೆಗೊಳಿಸುವುದು, ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವುದು, ರೈತರ ಸಾಲ ವಸೂಲಾತಿ ಕ್ರಮಗಳ ಜಾರಿ ನಿಲ್ಲಿಸುವುದು, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ರೈತವಿರೋಧಿ ಹೊಸ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ- 2020, ಕಾರ್ಪೋರೇಟ್ ಕಂಪನಿಗಳಿಂದ ಆಹಾರ ಧಾನ್ಯಗಳ ನಿರಂಕುಶ ಶೇಖರಣೆ, ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ- 2020, ಕೃಷಿ ಉತ್ಪನ್ನಗಳಿಗೆ ಭಾರತ ಸರ್ಕಾರ ಪ್ರತಿವರ್ಷ ನಿಗದಿಪಡಿಸುವ ಎಂ.ಎಸ್.ಪಿ. ಬೆಲೆಯನ್ನು ಕಾನೂನು ವ್ಯಾಪ್ತಿಗೆ ತರಬೇಕು. ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ಕಲ್ಪಿಸಿ, ಕಾರ್ಮಿಕರ ಜೀವನ ಸುಗಮಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಈ ಜಾಗೃತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಯಶವಂತ ರಾವ್ ಘೋರ್ಪಡೆ, ಜಗದೀಶ್ ನಾಯ್ಕ್, ಕೆ.ಎಸ್. ಪುಟ್ಟಪ್ಪ, ಸಣ್ಣರಂಗಪ್ಪ, ಕೆ.ಸಿ.ಗಂಗಾಧರ್, ಮಂಜುನಾಥ್, ಮಹೇಶ್ , ಸೀನಪ್ಪ ಮತ್ತಿತರರು ಇದ್ದರು.
- - - (ಫೋಟೋ: ಎನ್.ಡಿ.ಸುಂದರೇಶ್)