ಸಾರಾಂಶ
ಐಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಡಿವೈಎಸ್‌ಪಿ ಚೈತ್ರಾಕನ್ನಡಪ್ರಭ ವಾರ್ತೆ ಹಿರಿಯೂರು
ಸಂವಿಧಾನ ರಚಿಸಿ ದೇಶದ ದಮನಿತರಿಗೆ, ಶೋಷಿತರಿಗೆ, ಮಹಿಳೆಯರಿಗೆ ಸಾಮಾಜಿಕ ನ್ಯಾಯ ನೀಡಿದ ಕೀರ್ತಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಡಿವೈಎಸ್‌ಪಿ ಎಸ್.ಚೈತ್ರಾ ಅಭಿಪ್ರಾಯಪಟ್ಟರು.ತಾಲೂಕಿನ ಐಮಂಗಲ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ 70 ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಜೀವಪರ, ಮಾನವಪರ ಮತ್ತು ಮನುಷ್ಯತ್ವ ಪರವಿರುವ ಸಂವಿಧಾನವನ್ನು ನೀಡಿ ಬೆಳೆಸಿ ಸಮಗ್ರ ಭಾರತವನ್ನು ಕಟ್ಟಿದರು. ದೇಶದ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿ, ರಾಜಕೀಯವಾಗಿ ಸಬಲೀಕರಣಗೊಳ್ಳಲು ಕಾರಣರಾದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿದ್ದು ಸಂವಿಧಾನದ ಆಶಯವಾಗಿದೆ. ಸಂವಿಧಾನದ ರಚನಾ ಸಮಿತಿಯಲ್ಲಿ 15 ಜನ ಸ್ತ್ರೀಯರು ಪಾಲ್ಗೊಂಡಿದ್ದು ಅವಿಸ್ಮರಣೀಯ ಎಂದರು..ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಶಿಕ್ಷಕ ಕೆ.ರಾಮಚಂದ್ರಪ್ಪ ಮಾತನಾಡಿ, ಅಪಮಾನವನ್ನು ಅನುಭವಿಸಿ, ತನಗೆ ಬಂದ ಕಷ್ಟ ದೇಶದ ಯಾವ ಪ್ರಜೆಗೂ ಬರಬಾರದು ಎಂದು ಚಿಂತಿಸಿ, ಹಣದ ಅಭಾವದ ಮಧ್ಯೆಯೂ ಛಲ ಬಿಡದೆ ನಿರಂತರವಾಗಿ ಓದಿ ವಿಶ್ವಜ್ಞಾನಿಯಾಗಿ ಅಂಬೇಡ್ಕರ್ ರೂಪುಗೊಂಡರು. ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆಯನ್ನು ನೀಡಿ, ಸಾರ್ವಭೌಮ ಮತ್ತು ಜಾತ್ಯತೀತ ಭಾರತವನ್ನು ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಹಿಳಾ ಮೀಸಲಾತಿಗಾಗಿ ಹಿಂದು ಕೋಡ್ ಬಿಲ್ ರಚಿಸಿ ಲೋಕಸಭೆಯಲ್ಲಿ ಮಂಡಿಸಿ ಅದು ವಿಫಲವಾದಾಗ ತಮ್ಮ ಕೇಂದ್ರ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದೇಶದ ಏಕೈಕ ರಾಜಕಾರಣಿ ಎಂದರೆ ಅದು ಅಂಬೇಡ್ಕರ್ ಮಾತ್ರ ಎಂದರು.
ಅಂಬೇಡ್ಕರ್ ಓದು ಕಾರ್ಯಕ್ರಮದ ಸಂಚಾಲಕ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಭೂಮಿ, ಶಿಕ್ಷಣ, ನೀರು, ಜೀವವಿಮೆ ರಾಷ್ಟ್ರೀಕರಣ ವಾಗಬೇಕು. ಅದು ದೇಶದ ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಆದರೆ ಸಂವಿಧಾನ ಅಳವಡಿಸಿ 75 ವರ್ಷ ಕಳೆದರೂ ಅದು ಮರೀಚಿಕೆಯಾಗಿಯೇ ಉಳಿದಿದ್ದು ವಿಷಾದನೀಯ. ದೇಶದಲ್ಲಿ ನಿರುದ್ಯೋಗ, ಬಡತನ, ಹಸಿವು ನಿರಂತರ ವಾಗಿ ಕಾಡುತ್ತಿದೆ. ಭೂಮಿ ಮತ್ತು ಶಿಕ್ಷಣ ದುಬಾರಿಯಾಗುತ್ತಾ ಬಂದಿದ್ದು, ಸಾಮಾನ್ಯ ಜನರಿಗೆ ಅದು ದಕ್ಕದೆ ಹಾಗೆಯೇ ಉಳಿದಿದೆ. ಆದುದರಿಂದ ಅಂಬೇಡ್ಕರ್ ರವರ ಚಿಂತನೆಗಳನ್ನು ಸೀಮಿತ ದೃಷ್ಟಿಕೋನದಲ್ಲಿ ನೋಡದೆ ಸಮಷ್ಟಿ ಭಾವದಿಂದ ನೋಡಿದಾಗ ಮಾತ್ರ ಸಮಾನತೆಯ ಭಾರತವನ್ನು ಕಟ್ಟಲು ಸಾಧ್ಯವಿದೆ ಎಂದರು.ಈ ಸಂದರ್ಭದಲ್ಲಿ ಉಪನ್ಯಾಸಕ ಎಂ.ರಮೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಮಹಮ್ಮದ್ ಷಕೀಲ್, ಎಚ್.ಎಸ್.ಲೀಲಾವತಿ, ಎಸ್.ಕೆ.ಮಂಜುನಾಥ್, ರೇಖಾ, ಯಮುನ, ಲಲಿತ ಮುಂತಾದವರು ಉಪಸ್ಥಿತರಿದ್ದರು.