ಅಂತ್ಯಸಂಸ್ಕಾರಕ್ಕೆ ಅಡ್ಡಿ ವಿವಾದ, ತಹಸೀಲ್ದಾರ್‌ ಭರವಸೆ ಬಳಿಕ ಧರಣಿ ಹಿಂದಕ್ಕೆ

| Published : Dec 19 2023, 01:45 AM IST

ಅಂತ್ಯಸಂಸ್ಕಾರಕ್ಕೆ ಅಡ್ಡಿ ವಿವಾದ, ತಹಸೀಲ್ದಾರ್‌ ಭರವಸೆ ಬಳಿಕ ಧರಣಿ ಹಿಂದಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶವಸಂಸ್ಕಾರಕ್ಕೆ ತೆರಳುವ ರಸ್ತೆ ವಿವಾದದಿಂದ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ್ದ ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದ ಮೃತ ವೃದ್ಧೆ ಯಲ್ಲಮ್ಮ ವಾಲ್ಮೀಕಿ ಕುಟುಂಬಸ್ಥರು ತಹಸೀಲ್ದಾರ್‌ ನಾಗರಾಜ ಕೆ. ಮಧ್ಯಸ್ಥಿಕೆ ಬಳಿಕ ತಡರಾತ್ರಿ ಧರಣಿ ವಾಪಸ್‌ ಪಡೆದರು.

ಜಮೀನು ಮಾಲೀಕರು-ಗ್ರಾಪಂ ಅಧಿಕಾರಿಗಳ ಸಭೆ ಕರೆಯುವ ಭರವಸೆರೋಣ: ಶವಸಂಸ್ಕಾರಕ್ಕೆ ತೆರಳುವ ರಸ್ತೆ ವಿವಾದದಿಂದ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ್ದ ಚಿಕ್ಕಮಣ್ಣೂರು ಗ್ರಾಮದ ಕುಟುಂಬಸ್ಥರು ತಹಸೀಲ್ದಾರ್‌ ನಾಗರಾಜ ಕೆ. ಮಧ್ಯಸ್ಥಿಕೆ ಬಳಿಕ ತಡರಾತ್ರಿ ಧರಣಿ ವಾಪಸ್‌ ಪಡೆದರು.

ಶವ ಸಂಸ್ಕಾರಕ್ಕೆ ತೆರಳುವ ರಸ್ತೆ ಬಂದ್ ಮಾಡಿದ್ದರಿಂದ ಸ್ಥಳೀಯ ಗ್ರಾಪಂ ಎದುರು ಶವವಿಟ್ಟು ಧರಣಿ ಕುಳಿತ ಸುದ್ದಿ ತಿಳಿಯುತ್ತಿದ್ದಂತೆ ದೌಡಾಯಿಸಿದ ತಹಸೀಲ್ದಾರ್‌ ನಾಗರಾಜ ಕೆ., ಸಿಪಿಐ ಎಸ್.ಎಸ್. ಬಿಳಗಿ, ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ಅವರು, ರುದ್ರಭೂಮಿಗೆ ತೆರಳುವ ರಸ್ತೆ ಬಂದ್ ಮಾಡಿ ವಿರೋಧ ವ್ಯಕ್ತಪಡಿಸಿದ ಜಮೀನು ಮಾಲೀಕನೊಂದಿಗೆ 3 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಆದರೆ ಜಮೀನು ಮಾಲೀಕ ಮನವೊಲಿಕೆಗೆ ಒಪ್ಪದಿದ್ದರಿಂದ ಕೆಲಕಾಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಮನವೊಲಿಸಲು ಯಶಸ್ವಿಯಾದ ತಹಸೀಲ್ದಾರ್‌ ನಾಗರಾಜ ಕೆ. ಅವರು, ವೃದ್ಧೆ ಯಲ್ಲಮ್ಮ ವಾಲ್ಮೀಕಿ ಅಂತ್ಯ ಸಂಸ್ಕಾರಕ್ಕಾಗಿ ರುದ್ರಭೂಮಿಗೆ ತೆರಳಲು ಅನುಕೂಲ ಮಾಡಿಕೊಟ್ಟರು.ರುದ್ರಭೂಮಿಗೆ ತೆರಳುವ ರಸ್ತೆ ಗೊಂದಲ ಬಗೆಹರಿಸಿ, ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ದಿಶೆಯಲ್ಲಿ ಶೀಘ್ರದಲ್ಲಿಯೇ ರೋಣ ಮಿನಿ ವಿಧಾನಸೌದ ಸಭಾಂಗಣದಲ್ಲಿ ಚಿಕ್ಕಮಣ್ಣೂರ ಗ್ರಾಮಸ್ಥರು, ರುದ್ರಭೂಮಿಗೆ ತೆರಳುವ ರಸ್ತೆಯಲ್ಲಿನ ಜಮೀನು ಮಾಲೀಕರು ಮತ್ತು ಗ್ರಾಪಂ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅಂತಿಮ‌ ಕ್ರಮ‌ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ನಾಗರಾಜ ಕೆ. ಭರವಸೆ ನೀಡಿದರು.

ಬಳಿಕ ಗ್ರಾಮಸ್ಥರು ಮತ್ತು ಮೃತ ವೃದ್ಧೆ ಸಂಬಂಧಿಕರು ಧರಣಿ ಹಿಂಪಡೆದು, ವೃದ್ಧೆ ಶವವನ್ನು ರುದ್ರಭೂಮಿಗೆ ಕೊಂಡೊಯ್ದು ತಡರಾತ್ರಿ 1.30ಕ್ಕೆ ಅಂತ್ಯ ಸಂಸ್ಕಾರ ನೇರವೇರಿಸಿದರು.