ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಆದರ್ಶಗಳು ಪ್ರಕೃತಿಗೆ ಪೂರಕವಾಗಿರಬೇಕು. ಭವಿಷ್ಯದ ಜನಾಂಗಕ್ಕೆ ಅವರ ಸ್ವಾಸ್ಥ್ಯ ಆರೋಗ್ಯ, ಶುದ್ಧ ಗಾಳಿ, ನೀರಿಗಾಗಿ ನಮ್ಮ ಯೋಜನೆಗಳು ಸೀಮಿತವಾಗಬೇಕು ಎಂದು ಶಿರಳಿಗೆ ಚೈತನ್ಯ ರಾಜಾರಾಮ ಆಶ್ರಮದ ಬ್ರಹ್ಮಾನಂದ ಶ್ರೀ ಹೇಳಿದರು.ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಕಾಂತಾರಯಜ್ಞ ಸಂಘಟನೆ ಮುಖ್ಯಸ್ಥ ಶ್ರೀಧರ ಸೀತಾರಾಮ ಹೆಗಡೆ ಕೊಳಗಿ ಇವರ ೮೦ನೇ ವರ್ಷಾಚರಣೆ ಪ್ರಯುಕ್ತ ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ರಕ್ತಚಂದನವನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮೆಲ್ಲರ ಬದುಕಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಲುಹುತ್ತಿರುವ ಪ್ರಕೃತಿ ಪೋಷಿಸುವ ಮೂಲಕ ವಂದಿಸಬೇಕು. ವಂದನೆ ನಮ್ಮ ಆದ್ಯ ಕರ್ತವ್ಯವೂ ಕೂಡ, ಜೀವರಾಶಿಗಳ ರಕ್ಷಣೆ ಇಲ್ಲದೇ ಮಾನವನ ಬದುಕು ಅಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು. ಪ್ರಕೃತಿಯೊಂದಿಗೆ ಬದುಕುವುದನ್ನ ಕಲಿಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತಹೆಗಡೆ ಅಶಿಸರ ಮಾತನಾಡಿ, ಪಾರಂಪರಿಕ ಆಸ್ತಿಯನ್ನು ಮುಂಪೀಳಿಗೆಗೆ ತಲುಪಿಸುವ ಮಹತ್ತರ ಕಾರ್ಯ ಕಾಂತಾರ ಯಜ್ಞ ತಂಡದವರದು. ಇಂತಹ ಸತ್ಕಾರ್ಯಕ್ಕೆ ಅರಣ್ಯ ಇಲಾಖೆ, ಗ್ರಾಪಂ ಜೊತೆಗೆ ಸರ್ವರ ಸಹಕಾರ ಅತ್ಯಂತ ಅಗತ್ಯವಿದೆ. ಪ್ರಸ್ತುತ ರಕ್ತಚಂದನ ವನ ನಿರ್ಮಾಣದ ಹಿನ್ನೆಲೆ ಸ್ಥಳೀಯವಾಗಿ ರಕ್ಷಣೆಗೊಳಗಾಗಿರುವ ಈ ವನಕ್ಕೆ ಮಾನ್ಯತೆ ದೊರಕಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಪಂ ಜೀವವೈವಿಧ್ಯ ಸಮಿತಿ ಮೂಲಕ ಶಿಫಾರಸ್ಸು ಕಳಿಸಲು ಸೂಚಿಸಿದೆ ಎಂದರು.ಭಾರತೀ ಸಂಪದ ವಡ್ಡಿನಗದ್ದೆ, ಪರಿಸರ ಜಾಗೃತಿ ಟ್ರಸ್ಟ್, ಡಿಆರ್‌ಎಸ್ ಸೇವಾ ಟ್ರಸ್ಟ್, ವಿನಾಯಕ ಮೋಟಾರ್ಸ್ ಕೋಟೇಶ್ವರ ಇವರ ಸಹಯೋಗದೊಂದಿಗೆ ನಡೆದ ಸಮಾರಂಭದಲ್ಲಿ ೮೦ ವಿವಿಧ ಗಿಡಮೂಲಿಕೆ, ಕಾಡು ಜಾತಿಯ ಗಿಡಗಳನ್ನು ನೆಡಲಾಯಿತು. ಸುದೀರ್ಘ ಪರಿಸರ ಸಂರಕ್ಷಣೆ ಸಕ್ರಿಯ ಕಾರ್ಯಕರ್ತರಾದ ಅನಂತಹೆಗಡೆ ಅಶಿಸರ, ಶ್ರೀಪಾದ ಬಿಚ್ಚುಗತ್ತಿ, ಎಂ.ಆರ್.ಪಾಟೀಲ್ ಇವರಿಗೆ ವಿಶೇಷ ಸಮ್ಮಾನ, ವಿಶೇಷ ಸಾಧಕರಾದ ಸಸ್ಯ ಪಾಲಕ ಸುರೇಶ ಲಕ್ಷ್ಮಣ ನಾಯ್ಕ್, ಜೇನು ಕೃಷಿಕ ಟಿ.ಕೆ.ವಿಘ್ನೇಶ್, ನಾಡಿ ವೈದ್ಯ ಕೆ.ಟಿ.ಗೌಡ ಮಾದಲಮನೆ, ನಾಟಿ ವೈದ್ಯ ಬೇಳೂರು ಕೃಷ್ಣಪ್ಪ, ಪರಿಸರ ಪತ್ರಕರ್ತ ಯು.ಎಲ್.ಸಂದೀಪ್, ಟಿ.ರಾಘವೇಂದ್ರ ಅವರುಗಳಿಗೆ ಸನ್ಮಾನಿಸಲಾಯಿತು.
ಪರಿಸರ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಎನ್.ಅಕ್ಷತಾ ಸಾಗರ, ಎಂ.ಕೀರ್ತನಾ, ಜೆ.ಹೊಯ್ಸಳ ಸೊರಬ, ಚರ್ಚಾಸ್ಪರ್ಧೆ ವಿಜೇತ ಡಿ.ರಂಜಿತಾ ಸಾಗರ, ಎಂ.ನಾಗರಾಜ ಶಿರಸಿ, ಕೆ.ಸಿಂಚನ ಸೊರಬಗೆ ಬಹುಮಾನ ವಿತರಿಸಲಾಯಿತು. ವಿಶೇಷವಾಗಿ ವನದ ಗಿಡಗಳಿಗೆ ಕ್ಯೂಆರ್ ಕೋಡ್ ಅಳವಡಿಸಲಾಯಿತು.ಕಾರ್ಯಕ್ರಮದಲ್ಲಿ ತವನಂದಿ ಗ್ರಾಪಂ ಪಿಡಿಒ ಸೀಮಾ, ಮಂಜುನಾಥ ಹೆಗಡೆ, ಲಕ್ಷ್ಮೀ, ಡಾ.ಅಶೋಕ್ ಗುಡ್ಡೆ, ಕೆರೆಕೊಪ್ಪ ಅನಂತಣ್ಣ, ಗಜಾನನ ರೇವಣಕಟ್ಟ, ಸೀತಾರಾಮ ಹೆಗಡೆ, ಕಾಂತರಾಯಜ್ಞ ತಂಡದವರು ಪಾಲ್ಗೊಂಡರು.