ಸಾರಾಂಶ
ವಿಶ್ವಸಂಸ್ಥೆ 1948ರ ಡಿ. 10ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಮೂಲಕ 30 ಹಕ್ಕುಗಳನ್ನು ನೀಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟಿದೆ ಎಂದು ಕೆಎಲ್ಇ ಸಂಸ್ಥೆಯ ಎಸ್.ಎ. ಮಾನ್ವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈಹನುಮಾನ ಹೇಳಿದರು.
ಗದಗ: ಮಾನವ ಹಕ್ಕುಗಳು ಮನುಷ್ಯನನ್ನು ಘನತೆಯಿಂದ ಬದುಕುವಂತೆ ಮಾಡಲು ಕಾರಣವಾಗಿವೆ ಎಂದು ಕೆಎಲ್ಇ ಸಂಸ್ಥೆಯ ಎಸ್.ಎ. ಮಾನ್ವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈಹನುಮಾನ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ನೆಹರು ಕೇಂದ್ರದ ಸಹಯೋಗದೊಂದಿಗೆ ಮಾನವ ಹಕ್ಕುಗಳು-ಭಾರತೀಯ ನ್ಯಾಯಾಂಗ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶ್ವಸಂಸ್ಥೆ 1948ರ ಡಿ. 10ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಮೂಲಕ 30 ಹಕ್ಕುಗಳನ್ನು ನೀಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟಿತು. ಎರಡನೆಯ ಮಹಾಯುದ್ಧದ ನಂತರ ರಾಷ್ಟ್ರವು ತನ್ನದೇ ಪ್ರಜೆಗಳ ವಿರುದ್ಧ ನಡೆಸುವ ಶೋಷಣೆಗೆ ವಿರಾಮ ನೀಡಲು ಈ ಹಕ್ಕುಗಳು ಮಹತ್ವದ ಪಾತ್ರ ವಹಿಸಿದವು. ಆದರೆ, ಇವುಗಳಲ್ಲಿ ಕೆಲವು ಹಕ್ಕುಗಳನ್ನು ಮಾತ್ರ ಮೂಲಭೂತ ಹಕ್ಕುಗಳೆಂದು ಪರಿಗಣಿಸಿ ಭಾರತೀಯ ಸಂವಿಧಾನದ ಮೂಲಕ ಅವುಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಇನ್ನುಳಿದ ಹಕ್ಕುಗಳನ್ನು ಕಡೆಗಣಿಸದೇ, ರಾಜ್ಯನಿರ್ದೇಶಕ ತತ್ವಗಳಲ್ಲಿ ಸೇರಿಸಲಾಗಿದೆ. ಆದರೆ ಇವುಗಳು ಕೇವಲ ನೈತಿಕ ಹಕ್ಕುಗಳಾಗಿದ್ದು, ಅವುಗಳಿಗೆ ಕಾನೂನಿನ ರಕ್ಷಣೆ ಇರುವುದಿಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಕೆ. ಮಠ ಮಾತನಾಡಿ, ಮಾನವ ಹಕ್ಕುಗಳು ಹಾಗೂ ಅವುಗಳ ರಕ್ಷಣೆಯ ಕುರಿತಾದ ಮಾಹಿತಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಾಗಿದೆ ಎಂದರು.
ಐಕ್ಯೂಎಸಿ ಸಂಯೋಜಕಿ ಡಾ. ವೀಣಾ ವಿಚಾರ ಸಂಕಿರಣದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗೌರಾ ಯಳಮಲಿ ವಂದಿಸಿದರು. ವಿಶಾಲ ತಳಗಡೆ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.