ಮಾನವ-ವನ್ಯಜೀವಿ ಸಂಘರ್ಷ: ಇಂದು ದಕ್ಷಿಣದ 3 ರಾಜ್ಯ ಸಭೆ

| Published : Mar 10 2024, 01:32 AM IST / Updated: Mar 10 2024, 03:05 PM IST

human animal conflict
ಮಾನವ-ವನ್ಯಜೀವಿ ಸಂಘರ್ಷ: ಇಂದು ದಕ್ಷಿಣದ 3 ರಾಜ್ಯ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಜಂಟಿಯಾಗಿ ಕಾರ್ಯತಂತ್ರ ರೂಪಿಸುವ ಸಲುವಾಗಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಸಚಿವರು ಮತ್ತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ನಡುವೆ ಮೊದಲ ಸಮನ್ವಯ ಸಮಿತಿ ಸಭೆ ಭಾನುವಾರ ಬಂಡೀಪುರದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಜಂಟಿಯಾಗಿ ಕಾರ್ಯತಂತ್ರ ರೂಪಿಸುವ ಸಲುವಾಗಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಸಚಿವರು ಮತ್ತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ನಡುವೆ ಮೊದಲ ಸಮನ್ವಯ ಸಮಿತಿ ಸಭೆ ಭಾನುವಾರ ಬಂಡೀಪುರದಲ್ಲಿ ನಡೆಯಲಿದೆ.ವನ್ಯಜೀವಿ-ಮಾನವ ಸಂಘರ್ಷ ಸೇರಿದಂತೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಂತೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಹಾಗೂ ಅಂತಾರಾಜ್ಯ ಸಮನ್ವಯ ಸಾಧಿಸಲು ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಅರಣ್ಯ ಸಚಿವರು, ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ. 

ಈ ಸಮಿತಿಯು ಇದೇ ಮೊದಲ ಬಾರಿಗೆ ಸಭೆ ನಡೆಸುತ್ತಿದೆ. ಭಾನುವಾರ ನಡೆಯಲಿರುವ ಸಭೆಯಲ್ಲಿ ರಾಜ್ಯದ ಅರಣ್ಯ ಸಚಿವ ಈಶ್ವರ್‌ ಬಿ.ಖಂಡ್ರೆ, ಕೇರಳದ ಸಚಿವ ಎ.ಕೆ. ಶಶಿಧರನ್‌ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ವಯನಾಡು ಘಟನೆ ಪ್ರಸ್ತಾಪ:2023ರ ನವೆಂಬರ್‌ನಲ್ಲಿ ಹಾಸನದ ಬೇಲೂರಿನಲ್ಲಿ ಸೆರೆ ಹಿಡಿದು ರೇಡಿಯೋ ಕಾಲರ್‌ ಅಳವಡಿಸಿ ನಂತರ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದ್ದ ದಂತ ರಹಿತ ಗಂಡಾನೆಯು ಕಳೆದ ತಿಂಗಳು ವಯನಾಡಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ್ದ ಪ್ರಕರಣದ ಬಗ್ಗೆ ಚರ್ಚಿಸಲು ರಾಜ್ಯ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ನಿರ್ಧರಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ರಾಜ್ಯಗಳು ಯಾವ ರೀತಿ ವರ್ತಿಸಬೇಕು ಎಂಬುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಿ, ನಿರ್ಧಾರಕ್ಕೆ ಬರುವಂತೆ ಮಾಡಲು ಚಿಂತನೆ ನಡೆಸಿದ್ದಾರೆ.

ಸಭೆಯಲ್ಲಿ ಭಾಗಿಯಾಗುತ್ತಿರುವ ಅಧಿಕಾರಿಗಳು: ರಾಜ್ಯದ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌, ಕೇರಳ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜ್ಯೋತಿಲಾಲ್‌, ರಾಜ್ಯದ ಪಿಸಿಸಿಎಫ್‌ ಬಿ.ಕೆ. ದೀಕ್ಷಿತ್‌, ಕೇರಳ ಪಿಸಿಸಿಎಫ್‌ ಗಂಗಾ ಸಿಂಗ್‌, ರಾಜ್ಯದ ಮುಖ್ಯ ವನ್ಯಜೀವಿ ಪರಿಪಾಲಕ ಸುಭಾಷ್‌ ಮಳಖೇಡೆ, ಕೇರಳದ ಮುಖ್ಯ ವನ್ಯಜೀವಿ ಪರಿಪಾಲಕ ಜಯಪ್ರಸಾದ್‌, ಕರ್ನಾಟಕ, ಕೇರಳ, ತಮಿಳುನಾಡಿನ ಎಲ್ಲ ಎಪಿಸಿಸಿಎಫ್‌, ಸಿಸಿಎಫ್‌, ಸಿಎಫ್‌ ಮತ್ತಿ ಡಿಸಿಎಫ್‌ಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.