ಹಗರಿಬೊಮ್ಮನಹಳ್ಳಿ: ತಂತ್ರಜ್ಞಾನ ಕ್ಷೇತ್ರದಿಂದ ರಕ್ಷಣಾ ಕೇತ್ರದವರೆಗೂ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರಿಂದ ಗಮನಾರ್ಹ ಸಾಧನೆಗಳು ವ್ಯಕ್ತವಾಗುತ್ತಿವೆ. ದೇಶದಲ್ಲಿ ಮಹಿಳಾ ಅಸ್ಮಿತೆ ಎಲ್ಲೆಡೆ ಅನುರಣಿಸುತ್ತಿದೆ. ಹೆಣ್ಣು ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ಮನುವಾದಿಗಳ ಮೂದಲಿಕೆಗಳು ಇಂದಿನ ದಿನಗಳಲ್ಲಿ ಅಪ್ರಸ್ತುತ ಎಂದು ಹೂವಿನಹಡಗಲಿಯ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಮುಖ್ಯಸ್ಥೆ ಎಂ.ಪಿ. ವೀಣಾ ಮಹಾಂತೇಶ್ ಪ್ರತಿಪಾದಿಸಿದರು.

ಪಟ್ಟಣದ ಯು.ಕೆ. ಕೊಟ್ರಬಸಪ್ಪನವರ ಬಯಲು ನಿವೇಶನದಲ್ಲಿ ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಹೆಣ್ಣು ಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹೋರಾಟ ನೆಡಸುವ ಕಾಲವಿತ್ತು. ಕುಟುಂಬ ಮತ್ತು ಸಮಾಜದೊಂದಿಗೆ ನಿರಂತರವಾಗಿ ಸೆಣಸಾಡಿ ಆಸ್ತಿತ್ವ ಸಾಬೀತು ಪಡಿಸುವ ಅಗತ್ಯವಿತ್ತು. ನಿರಂತರವಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಸಂಘರ್ಷ ನಡೆಸಿ ಬದುಕು ಕಟ್ಟಿಕೊಂಡ ಮಹಿಳೆಯರು ನಮ್ಮ ನಡುವೆಯೇ ಉಸಿರಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಾನಂತರ ಡಾ.ಅಂಬೇಡ್ಕರ್ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿ ಹೆಣ್ಣು ಮಕ್ಕಳ ಬದುಕಿಗೆ ನೆರವಾದರು. ಮನುವಾದಿಗಳು ಈಗಲೂ ಹೆಣ್ಣು ಮಕ್ಕಳನ್ನು ಬಸವ ಪೂರ್ವ ಯುಗಕ್ಕೆ ಒಯ್ಯಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮಹಿಳೆಯರ ಸಬಲೀಕರಣ, ಲಿಂಗ ಸಮಾನತೆ, ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಮನುವಾದಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದು ಕೋರಿದರು.

ಪ್ರತಿ ರಂಗದಲ್ಲೂ ಪುರುಷರಿಗೆ ಸಮಾನವಾಗಿ ದುಡಿಯುವ ಈ ಕಾಲದಲ್ಲೂ ಸಮಾಜದಲ್ಲಿ ಲಿಂಗ ಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನು ನಡೆಯುತ್ತಿವೆ. ಸುರಕ್ಷಿತ ಪರಿಸರ ಮತ್ತು ಪೂರಕ ಶಿಕ್ಷಣ ಒದಗಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.


ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್ ಸಂಸ್ಥೆಯ ಸಂಸ್ಥಾಪಕಿ ಶಂಶಾದ್ ಬೇಗಂ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶಕ್ತಿ ಯೋಜನೆಯಿಂದ ಮಹಿಳೆಯರು ಪುರುಷರಷ್ಟೇ ಸಮಾನರಾಗಿ ಮಾರಾಟ ವ್ಯವಸ್ಥೆಯಲ್ಲಿ ಶ್ರಮಿಸುತ್ತಿದ್ದಾರೆ. ನಮ್ಮ ಸಂಸ್ಥೆಯಿಂದ ನಿರುದ್ಯೋಗಿ ಮಹಿಳೆಯರಿಗಾಗಿ ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪಿಸಲು ಚಿಂತಿಸಲಾಗಿದೆ. ಮನೆಯಲ್ಲಿರುವ ಮಹಿಳೆಯರಿಗಾಗಿ ಗೃಹೋಪಯೋಗಿ ವಸ್ತುಗಳ ತಯಾರಿಕೆ ಕುರಿತು ಕಾರ್ಯಗಾರ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾದನೆ ಮಾಡಿರುವ ಮಹಿಳೆಯರನ್ನು ಗೌರವಿಸಲಾಯಿತು. ರಾಮವ್ವ ಜೋಗುತಿ ಅಧ್ಯಕ್ಷತೆ ವಹಿಸಿದ್ದರು.

ಹಂಪಸಾಗರದ ಶಾಹಿನಾ ನಿರ್ವಹಿಸಿದರು. ಧರ್ಮಸ್ಥಳ ಸಂಘದ ಶಿಲ್ಪಕಲಾ, ಕೋಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಗಂಗಾ, ತಂಬ್ರಹಳ್ಳಿಯ ಮಹಿಳಾ ಆರೋಗ್ಯ ಸಹಾಯಕಿ ನಾಗಲಕ್ಷ್ಮೀ, ಸರೋಜಮ್ಮ, ಉಸ್ಮಾನ್ ಬಾಷಾ, ಪೌರ ಕಾರ್ಮಿಕ ಮಹಿಳೆ ಪಾರ್ವತೆಮ್ಮ, ಬಾಬುನಿ, ಪ್ರಮೋದಿನಿ ಮತ್ತಿತರರಿದ್ದರು.