ವಿಜಯಪುರ: ಕಳೆದ ಐದು ವರ್ಷಗಳ ಅವಧಿಯಲ್ಲಿ ಪುರಸಭಾ ಸದಸ್ಯೆಯಾಗಿ ಹಾಗೂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರೂ, ಅಧಿಕಾರದ ದರ್ಪ ತೋರದೆ ಪುರಸಭಾ ಸದಸ್ಯರು, ಅಧಿಕಾರಿಗಳು ಹಾಗೂ ಪೌರಕಾರ್ಮಿಕರೊಂದಿಗೆ ಪ್ರೀತಿ-ವಿಶ್ವಾಸದಿಂದ ನಡೆದುಕೊಂಡಿದ್ದೇನೆ. ಸದಸ್ಯತ್ವಕ್ಕಿಂತ ಮನುಷ್ಯತ್ವ ಮುಖ್ಯ, ಅಧಿಕಾರ ಶಾಶ್ವತವಲ್ಲ; ಪ್ರೀತಿ-ವಿಶ್ವಾಸ ಮಾತ್ರ ಶಾಶ್ವತ ಎಂದು ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಭಾವುಕರಾದರು
ವಿಜಯಪುರ: ಕಳೆದ ಐದು ವರ್ಷಗಳ ಅವಧಿಯಲ್ಲಿ ಪುರಸಭಾ ಸದಸ್ಯೆಯಾಗಿ ಹಾಗೂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರೂ, ಅಧಿಕಾರದ ದರ್ಪ ತೋರದೆ ಪುರಸಭಾ ಸದಸ್ಯರು, ಅಧಿಕಾರಿಗಳು ಹಾಗೂ ಪೌರಕಾರ್ಮಿಕರೊಂದಿಗೆ ಪ್ರೀತಿ-ವಿಶ್ವಾಸದಿಂದ ನಡೆದುಕೊಂಡಿದ್ದೇನೆ. ಸದಸ್ಯತ್ವಕ್ಕಿಂತ ಮನುಷ್ಯತ್ವ ಮುಖ್ಯ, ಅಧಿಕಾರ ಶಾಶ್ವತವಲ್ಲ; ಪ್ರೀತಿ-ವಿಶ್ವಾಸ ಮಾತ್ರ ಶಾಶ್ವತ ಎಂದು ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಭಾವುಕರಾದರು.
ಪುರಸಭೆ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಇದೇ ೧೯ರಂದು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕೊನೆಯ ಸಾಮಾನ್ಯ ಸಭೆಯಲ್ಲಿ ಪುರಸಭೆ ಆಡಳಿತ ವರ್ಗ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ತಮಗೆ ಸಹಕರಿಸಿದ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.ಕುಡಿವ ನೀರು, ನೈರ್ಮಲ್ಯಕ್ಕೆ ಆದ್ಯತೆ:
ಪುರಸಭೆ ಸದಸ್ಯ ಸತೀಶ್‌ಕುಮಾರ್ ಮಾತನಾಡಿ, ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಂಡ ಬಳಿಕ ಮುಂದಿನ ಚುನಾವಣೆ ನಡೆಯುವವರೆಗೆ ಪುರಸಭೆ ಆಡಳಿತ ಅಧಿಕಾರಿಗಳ ಕೈಯಲ್ಲಿರಲಿದೆ. ಈಗಾಗಲೇ ತಾಲೂಕಿನಲ್ಲಿ ಬರ ಪರಿಸ್ಥಿತಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಮನವೊಲಿಸಿ ಹೆಚ್ಚಿನ ಅನುದಾನ ತಂದು ಕುಡಿಯುವ ನೀರು ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಹೋಟೆಲ್ ಮಳಿಗೆ ವಿಚಾರಕ್ಕೆ ಸದಸ್ಯರ ಆಕ್ಷೇಪ:
ವಿಜಯಪುರ ಬಸ್ ನಿಲ್ದಾಣದಲ್ಲಿರುವ ಪುರಸಭೆಯ ಹೋಟೆಲ್ ಮಳಿಗೆಯನ್ನು ಬಾಡಿಗೆ ಪಡೆದಿರುವ ಯಾಸರ್ ಅರ್ಫಾತ್‌ಗೆ, ಹೋಟೆಲ್ ಉದ್ಯಮ ಸಂಕಷ್ಟದಲ್ಲಿದ್ದು, ಅದೇ ಮಳಿಗೆಯಲ್ಲಿ ವಾಣಿಜ್ಯ/ವ್ಯಾಪಾರ ಚಟುವಟಿಕೆ ನಡೆಸಲು ಅನುಮತಿ ನೀಡುವಂತೆ ಸಲ್ಲಿಸಿದ್ದ ಮನವಿ ಸಭೆಯಲ್ಲಿ ಚರ್ಚೆಗೆ ಬಂತು. ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಮಳಿಗೆಗೆ ಠೇವಣಿ ಹಣ ಪಾವತಿಸಿಲ್ಲ, ಅಗತ್ಯ ಅನುಮತಿ ಪತ್ರವನ್ನೂ ಪಡೆದಿಲ್ಲ. ಒಂದು ದಿನವೂ ಹೋಟೆಲ್ ಆರಂಭಿಸದೆ ಹೋಟೆಲ್ ನಡೆಸಲು ಕಷ್ಟವಾಗಿದೆ ಎನ್ನುವುದು ಹೇಗೆ ಎಂದು ಸದಸ್ಯ ವಿ.ನಂದಕುಮಾರ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸತ್ಯನಾರಾಯಣ, ಬಾಡಿಗೆದಾರರಿಗೆ ನೋಟಿಸ್ ನೀಡಲಾಗುವುದು. ಸಮರ್ಪಕ ಉತ್ತರ ನೀಡದಿದ್ದಲ್ಲಿ ಮಳಿಗೆಯನ್ನು ಮುಟ್ಟುಗೋಲು ಹಾಕಿಕೊಂಡು ಮರು ಹರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.ಅಪೂರ್ಣ ಕಾಮಗಾರಿಗಳು:
೧೫ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳುವ ಹಂತಕ್ಕೆ ಬಂದರೂ ಹಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಇಂತಹ ಗುತ್ತಿಗೆದಾರರಿಗೆ ಟೆಂಡರ್ ನೀಡುವ ಅಗತ್ಯವೇನು ಎಂದು ಸದಸ್ಯ ಎಂ.ಸತೀಶ್‌ಕುಮಾರ್ ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಎಂಜಿನಿಯರ್ ಶೇಖರ್ ರೆಡ್ಡಿ, ಬಾಕಿ ಇರುವ ಕಾಮಗಾರಿಗಳನ್ನು ಮುಂದಿನ ೧೫ ದಿನಗಳೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನೀರಿನ ಸಮಸ್ಯೆಗೆ ಕ್ರಮ ವಹಿಸಿ:ದೇವನಹಳ್ಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪಟ್ಟಣ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಯುಜಿಡಿ ಸಮಸ್ಯೆಯನ್ನೂ ಶೀಘ್ರ ಪರಿಹರಿಸಬೇಕು ಎಂದು ಸದಸ್ಯ ರಾಜಣ್ಣ ಆಗ್ರಹಿಸಿದರು.
ಅಧಿಕಾರಿ, ಸಿಬ್ಬಂದಿಗೂ ಕೃತಜ್ಞತೆ ಸಲ್ಲಿಸಿದ ಸದಸ್ಯರು:ಕೊನೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಭವ್ಯ ಮಹೇಶ್ ಸೇರಿದಂತೆ ಸದಸ್ಯರು ತಮ್ಮ ಅಧಿಕಾರಾವಧಿಯಲ್ಲಿ ನಡೆದ ವಿವಿಧ ಕಾರ್ಯ ಚಟುವಟಿಕೆಗಳು, ಎದುರಾದ ಸಮಸ್ಯೆಗಳು ಹಾಗೂ ಅನುಭವಗಳನ್ನು ಹಂಚಿಕೊಂಡರು. ತಮ್ಮ ಅವಧಿಯಲ್ಲಿ ಸಹಕರಿಸಿದ ನಾಗರಿಕರು, ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಿದರು.
ಸಭೆಯಲ್ಲಿ ಪುರಸಭಾ ಸದಸ್ಯರಾದ ಇಕ್ಬಾಲ್, ಹನೀಫುಲ್ಲಾ, ರಾಜಣ್ಣ, ಎಂ. ನಾರಾಯಣಸ್ವಾಮಿ, ಮಂಜುಳಾ ಮುನಿರಾಜು, ಶಿಲ್ಪಾ ಅಜಿತ್, ನಂದಕುಮಾರ್, ಸುಷ್ಮಾ ಮಹೇಶ್, ಸಲ್ಮಾ ಖಾನಂ, ಆಯ ಸೈಫುಲ್ಲಾ ಸೇರಿದಂತೆ ಪುರಸಭೆ ಎಂಜಿನಿಯರ್ ಶೇಖರ್ ರೆಡ್ಡಿ, ಆರೋಗ್ಯಾಧಿಕಾರಿ ಲಾವಣ್ಯ, ಕಂದಾಯ ವಿಭಾಗದ ಅಧಿಕಾರಿಗಳಾದ ಬಾಲಚಂದ್ರ, ಶ್ರೀನಿವಾಸ್, ಸುನಿಲ್, ಮಮತಾ, ರತ್ನಮ್ಮ, ಲಿಂಗಣ್ಣ, ಜನಾರ್ದನ್, ನಾರಾಯಣಸ್ವಾಮಿ, ಹೇಮಾ, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.(ಫೋಟೋ ಕ್ಯಾಪ್ಷನ್)
ವಿಜಯಪುರ ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಕೊನೆಯ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಸತ್ಯನಾರಾಯಣ, ಸದಸ್ಯರಾದ ಇಕ್ಬಾಲ್, ಹನೀಫುಲ್ಲಾ, ರಾಜಣ್ಣ, ಸತೀಶ್‌ಕುಮಾರ್, ಮಂಜುಳಾ ಇತರರು ಪಾಲ್ಗೊಂಡಿದ್ದರು.