ಕನ್ನಡಪ್ರಭ ವಾರ್ತೆ ಆಲೂರು ಹುಣಸವಳ್ಳಿ ಗ್ರಾಮವು 1977ರಲ್ಲಿ ದೇವೇಗೌಡರಿಗೆ ರಾಜಕೀಯ ಪುನರ್ಜನ್ಮ ನೀಡಿದ ಗ್ರಾಮವಾಗಿದ್ದು ಈ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಶ್ರೀ ವೀರಭದ್ರೇಶ್ವರಸ್ವಾಮಿ ದೇವರು ಈ ಗ್ರಾಮದ ಜನರಿಗೆ ಸುಖ, ಶಾಂತಿ, ನೆಮ್ಮದಿ,ಸುಭಿಕ್ಷೆಯನ್ನು ಉಂಟುಮಾಡಲಿ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ ರೇವಣ್ಣ ದೇವರಲ್ಲಿ ಪ್ರಾರ್ಥಿಸಿದರು.ತಾಲೂಕಿನ ಕಸಬಾ ಹೋಬಳಿ ಹುಣಸವಳ್ಳಿ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಗೋಪಾಲಕೃಷ್ಣಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಅವರ ಕೆಂಡೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚೋಳರ ಕಾಲದ ಇತಿಹಾಸವನ್ನು ಹೊಂದಿರುವ ಈ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನವು 800 ವರ್ಷಗಳ ಅತ್ಯಂತ ಪ್ರಾಚೀನ ದೇವಸ್ಥಾನವಾಗಿದ್ದು, ಯಾವುದೇ ಸರ್ಕಾರದ ಅನುದಾನವನ್ನು ಪಡೆಯದೆ ಗ್ರಾಮಸ್ಥರೇ ಸ್ವಧೇಣಿಗೆಯನ್ನ ಹಾಕಿಕೊಂಡು ಸುಮಾರು 60 ಲಕ್ಷಕ್ಕೂ ಹೆಚ್ಚಿನ ಅಂದಾಜಿನಲ್ಲಿ ದೇವಾಲಯವನ್ನ ನಿರ್ಮಾಣ ಮಾಡಿರುವುದು ಈ ಗ್ರಾಮಕ್ಕೆ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಈ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಗ್ರಾಮಸ್ಥರು ಈ ಹಿಂದೆ ನನ್ನ ಗಮನಕ್ಕೆ ತಂದಿದ್ದರೆ ಸರ್ಕಾರದ ವತಿಯಿಂದಲೇ 60 ರಿಂದ 70 ಲಕ್ಷ ರು. ಗಳ ಅನುದಾನವನ್ನ ಕೊಡಿಸುತ್ತಿದ್ದೆ. ಆದರೆ ಯಾರೂ ಕೂಡ ನನ್ನ ಗಮನಕ್ಕೆ ತರದೆ ಈಗ ಪ್ರಾರಂಭೋತ್ಸವಕ್ಕೆ ನನ್ನನ್ನು ಕರೆದಿದ್ದೀರಿ, ಆದರೂ ಕೂಡ ಈ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ನಾವು ಯಾವುದೇ ತಾರತಮ್ಯ ಮಾಡದೆ ಗ್ರಾಮಸ್ಥರ ಕೋರಿಕೆಯಂತೆ ಎಚ್. ಡಿ ದೇವೇಗೌಡರ ಹೆಸರಿನ ಸಮುದಾಯ ಭವನ ನಿರ್ಮಾಣ ಮಾಡಲು ಗ್ರಾಮಸ್ಥರು ಮುಂದಾಗಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದ್ದು, ಈ ಕಾರ್ಯಕ್ಕೆ ರಾಜ್ಯಸಭಾ ಸದಸ್ಯರ ಅನುದಾನ, ವಿಧಾನಪರಿಷತ್ ಸದಸ್ಯರ ಅನುದಾನ ಹಾಗೂ ಕೇಂದ್ರ ಮಂತ್ರಿಗಳಾದ ಎಚ್. ಡಿ ಕುಮಾರಸ್ವಾಮಿ ಅವರ ಸಿ.ಎಸ್. ಆರ್‌ ಅನುದಾನದಲ್ಲಿ ಪ್ರಾರಂಭಿಕವಾಗಿ 1 ಕೋಟಿ ರು.ಗಳ ಅನುದಾನವನ್ನು ಕೊಡಿಸಿ ಕೊಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.ಕಾರ್ಯಕ್ರಮ ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಮಾತನಾಡಿ, ಗ್ರಾಮದ ಹಿರಿಯರು ಹಾಗೂ ಯುವಕರನ್ನು ಒಳಗೊಂಡಂತೆ ಅತ್ಯಂತ ಸುಂದರವಾದ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದು ಇನ್ನೂ ಕೂಡ ಗ್ರಾಮಗಳಲ್ಲಿ ಗ್ರಾಮದ ಯುವಕರಲ್ಲಿ ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆ ಅವರ ಹೃದಯದಲ್ಲಿ ಬೇರೂರಿದೆ ಎಂದರೆ ತಪ್ಪಾಗಲಾರದು, ಗ್ರಾಮಸ್ಥರು ಕಳೆದ 2 ತಿಂಗಳ ಹಿಂದೆ ನನ್ನನು ಭೇಟಿಯಾಗಿ ದೇವಸ್ಥಾನದ ಲೋಕಾರ್ಪಣ ಕಾರ್ಯಕ್ರಮವಿದ್ದು, ಕೆಲವು ಸಣ್ಣಪುಟ್ಟ ಕೆಲಸಗಳು ಬಾಕಿ ಇರುವುದರಿಂದ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆ ನಾನು ತುರ್ತಾಗಿ 2 ಲಕ್ಷ ರು.ಗಳ ಅನುದಾನವನ್ನು ನೀಡುವ ಮೂಲಕ ಈ ದೇವಸ್ಥಾನದ ನಿರ್ಮಾಣದಲ್ಲಿ ನಾನುಕೂಡ ಒಬ್ಬ ಭಕ್ತನಾಗಿ ಭಾಗಿಯಾಗಿರುವುದು ನೆಮ್ಮದಿಯನ್ನ ತಂದಿದೆ ಹಾಗೂ ಮುಂದಿನ ದಿನಗಳಲ್ಲಿ ನಮ್ಮ ತಾತ ಎಚ್.ಡಿ ದೇವೇಗೌಡರಿಗೆ ರಾಜಕೀಯವಾಗಿ ಶಕ್ತಿ ತುಂಬಿದ ಈ ಗ್ರಾಮದ ಅಭಿವೃದ್ಧಿಗೆ ಮುಂಬರುವ ನನ್ನ ಅನುದಾನದಲ್ಲಿ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ತಮ್ಮ ಊರಿನ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್. ಕೆ ಕುಮಾರಸ್ವಾಮಿ, ಎಚ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್ ಮಂಜೇಗೌಡ, ಕಬ್ಬಿನಹಳ್ಳಿ ಜಗದೀಶ್, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಪಿ.ಎಲ್ ನಿಂಗರಾಜು, ಜಿಲ್ಲಾ ಹಿಂದುಳಿದ ವರ್ಗಗಳ ಮುಖಂಡ ಬಿ.ಸಿ ಶಂಕರಾಚಾರ್‌, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸಿ.ವಿ ಲಿಂಗರಾಜು ನಟರಾಜು ನಾಕಲಗೂಡು ಮುಖಂಡರಾದ ರಾಜಪ್ಪಗೌಡ, ಎಚ್.ಬಿ ಧರ್ಮರಾಜು, ಎಚ್.ಸಿ ಶಾಂತಕೃಷ್ಣ, ರಾಮಚಂದ್ರ, ಶ್ರೀನಿವಾಸ್, ಸುರೇಶ್, ದಿನೇಶ್, ನಂದೀಶ್,ಲಕ್ಕೇಗೌಡ ಪುಟ್ಟರಾಜೇಗೌಡ, ಸುಬ್ಬೆಗೌಡ, ಮಂಜುನಾಥ್,ಜಯಪಾಲ, ಸೇರಿದಂತೆ ಇತರರು ಇದ್ದರು.