ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 38 ದಿನಗಳಿಂದ ನಡೆಯುತ್ತಿದ್ದ ಸರದಿ ಸತ್ಯಾಗ್ರಹಕ್ಕೆ ಮಂಗಳವಾರ ಅಂತಿಮ ತೆರೆ ಬಿದ್ದಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 38 ದಿನಗಳಿಂದ ನಡೆಯುತ್ತಿದ್ದ ಸರದಿ ಸತ್ಯಾಗ್ರಹಕ್ಕೆ ಮಂಗಳವಾರ ಅಂತಿಮ ತೆರೆ ಬಿದ್ದಿತು.

ಮಂಗಳವಾರ ಸಂಜೆ ಮಧ್ಯಾಹ್ನ 3ಕ್ಕೆ ಜಮಖಂಡಿ ಎಸಿ ಶ್ವೇತಾ ಬೀಡಿಕರ ಬನಹಟ್ಟಿಯ ಪ್ರತಿಭಟನೆಯ ವೇದಿಕೆಯಲ್ಲಿನ 7 ಜನ ಆಮರಣ ಉಪವಾಸ ಸತ್ಯಾಗ್ರಹಿಗಳ ಸಮ್ಮುಖ ಸಾರ್ವಜನಿಕರನ್ನುದ್ದೆಶಿಸಿ ಮಾತನಾಡಿದರು. ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಿಸಲು ಗುರುತಿಸಲಾಗಿರುವ ಬನಹಟ್ಟಿಯ ಸಿಟಿಎಸ್ 8022 ಸ್ಥಳದಲ್ಲಿನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆಮರಣ ನಿರಶನ ಮತ್ತು ಸರದಿ ಸತ್ಯಾಗ್ರಹಕ್ಕೆ ತೆರೆ ಎಳೆದರು.

ನಂತರ ಉಪವಾಸ ಸತ್ಯಾಗ್ರಹ ನಿರತರಾಗಿದ್ದ ಶಂಕರ ಸೊರಗಾಂವಿ, ಮಾಳು ಹಿಪ್ಪರಗಿ, ಶಿವಾನಂದ ಕಾಗಿ, ಬುಡಾನಸಾಬ ಜಮಾದಾರ, ನಿಂಗಪ್ಪ ಗೊಕಾಂವಿ, ಕುಬೇರ ಸಾರವಾಡ, ಗಿರಮಲ್ಲಪ್ಪ ಶೀಲವಂತ, ಏಳು ಜನರಿಗೆ ಜ್ಯೂಸ್ ಕುಡಿಸುವ ಮೂಲಕ ಸತ್ಯಾಗ್ರಹ ಅಂತ್ಯಗೊಂಡಿತು.

ಪ್ರತಿಭಟನಾ ನೇತೃತ್ವ ವಹಿಸಿದ್ದ ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾವಿ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದೆ. ಇಲ್ಲಿಯವರೆಗೆ ಮಾಡಿದ ಹೋರಾಟ ನಮಗೆ ಯಶಸ್ಸು ತಂದಿದೆ. ಹೋರಾಟಕ್ಕೆ ಸ್ಪಂದಿಸಿದ ಎಲ್ಲ ಸಮುದಾಯಗಳಿಗೆ ಹಾಗೂ ಅಧಿಕಾರಿಗಳು ಸೇರಿದಂತೆ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.

ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ಪ್ರತಿಭಟನಾ ವೇದಿಕೆಯಲ್ಲಿದ್ದ ಏಳು ಉಪವಾಸ ಸತ್ಯಾಗ್ರಹಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರ ಸಲಹೆಯಂತೆ ಅವರನ್ನು ಸರ್ಕಾರಿ ವಾಹನದಲ್ಲಿ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಬನಹಟ್ಟಿ ನಗರದಲ್ಲಿ ಬಿಎನ್‌ಎಸ್ 163ನೇ ಕಲಂ ಜಾರಿಗೊಳಿಸಿ ಜನರನ್ನು ಚದುರಿಸಲಾಯಿತು. ಅರ್ಧ ದಿನಕ್ಕೂ ಹೆಚ್ಚು ಕಾಲ ಬನಹಟ್ಟಿ ಸಂಪೂರ್ಣ ಬಂದ್ ಆಚರಿಸಲಾಯಿತು. ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ನಿತ್ಯದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಂಜೆ 5 ಗಂಟೆ ವೇಳೆಗೆ ಯಥಾಸ್ಥಿತಿಯಲ್ಲಿ ನಗರದ ಜನಜೀವನ ಹಾಗೂ ಮಾರುಕಟ್ಟೆ ಚಟುವಟಿಕೆಗಳು ಪುನರಾರಂಭಗೊಂಡವು.

ಎಸ್ಪಿ ಸಿದ್ಧಾರ್ಥ ಗೋಯಲ್‌ ಅವರ ನೇತೃತ್ವದಲ್ಲಿ ಭದ್ರತೆಗಾಗಿ ಡಿವೈಎಸ್ಪಿ.ಎಸ್‌.ರೋಶನ, ಸಿಪಿಐ ಆರ್.ಆರ್.ಪಾಟೀಲ, ವಿಜಯ ಮುರಗುಂಡಿ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ನೂರಾರು ಪೊಲೀಸರು ಬನಹಟ್ಟಿಯಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.