ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಬಿರುಗಾಳಿ ಮಳೆ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಮರ ಬಿದ್ದು ಪತಿ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಕೆ.ಶೆಟ್ಟಹಳ್ಳಿ ವೇಬ್ರಿಡ್ಜ್ ಬಳಿ ಶುಕ್ರವಾರ ಸಂಜೆ ಜರುಗಿತು.ಗ್ರಾಮದ ಎಸ್.ಬಿ.ಪುಟ್ಟಸ್ವಾಮೀಗೌಡ (50) ಮರಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದುರ್ದೈವಿ. ಪತ್ನಿ ಬಿ.ಸಿ.ಚಂದ್ರಕಲಾ (40) ಅವರ ಕೈ ಮತ್ತು ಕಣ್ಣಿಗೆ ಪೆಟ್ಟಬಿದ್ದು ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ ಕೆ.ಎಂ.ದೊಡ್ಡಿಯಿಂದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಶೆಟ್ಟಹಳ್ಳಿ-ವೇಬ್ರಿಡ್ಜ್ ಬಳಿ ದಂಪತಿ ಮೇಲೆ ಬಿದ್ದಿದೆ. ಪುಟ್ಟಸ್ವಾಮಿ ಗಂಭೀರವಾಗಿ ಗಾಯಗೊಂಡರೆ ಪತ್ನಿ ಚಂದ್ರಕಲಾ ಅವರಿಗೆ ಮುಖಕ್ಕೆ ಪೆಟ್ಟು ಬಿದ್ದು ಬಲಗೈ ಮುರಿದಿದೆ. ತಕ್ಷಣ ಇವರನ್ನು ಸ್ಥಳೀಯರು ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಪತಿ ಪುಟ್ಟಸ್ವಾಮಿ ಮೃತಪಟ್ಟಿದ್ದಾರೆ. ಪತ್ನಿ ಚಂದ್ರಕಲಾ ಚಿಕಿತ್ಸೆ ಪಡೆಯುತ್ತಿದ್ದಾರೆ. ತಹಸೀಲ್ದಾರ್ ಸೋಮಶೇಖರ್ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ವ್ಯಕ್ತಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕೆ.ಶೆಟ್ಟಹಳ್ಳಿ ರುದ್ರಭೂಮಿಯಲ್ಲಿ ಶನಿವಾರ ಮಧ್ಯಾಹ್ನ ಜರುಗಿತು.ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸಂಪೂರ್ಣ ಬೆಳೆ ನಾಶ
ಮಳವಳ್ಳಿ: ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಅಪಾರ ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಕಿರುಗಾವಲು ಹೋಬಳಿಯ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೈತ ನವೀನ್ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆ ಸಂಪೂರ್ಣ ಸುಟ್ಟು ಕರಕಲಾಗಿದೆ. ತೀವ್ರ ಬರಗಾಲದ ನಡುವೆಯೂ ಬೋರ್ ವೆಲ್ ನೀರಿನಿಂದ ಬೆಳೆದ ಕಬ್ಬು ಕಟಾವಿಗೆ ಬಂದಿತ್ತು. ಎಂದಿನಂತೆ ನವೀನ್ ಶನಿವಾರ ಬೆಳಗ್ಗೆ ಕಬ್ಬಿನ ಗದ್ದೆಗೆ ಹೋಗಿ ನೀರು ಕಟ್ಟಿ ಬಂದಿದ್ದಾರೆ.ನಂತರ ಮಧ್ಯಾಹ್ನ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಒಂದು ಎಕರೆ ಕಬ್ಬು ಬೆಳೆ ಸಂಪೂರ್ಣ ನಷ್ಟವಾಗಿದೆ. ನಂತರ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದರೂ ಕಬ್ಬು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದ್ದರಿಂದ 1 ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ನವೀನ್ ಒತ್ತಾಯಿಸಿದರು.