ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯ ಕುತ್ತಿಗೆಯನ್ನು ಕಾಲಿನಿಂದ ತುಳಿದು ಗುತ್ತಿಗೆದಾರನೊಬ್ಬ ಹತ್ಯೆಗೈದಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.ಪೀಣ್ಯ ಸಮೀಪದ ನಿವಾಸಿ ಕಾವ್ಯ (34) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪತಿ ದರಿಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಆರಂಭವಾದ ಜಗಳ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಬೆಳಗಾವಿ ಜಿಲ್ಲೆಯ ದರಿಯಪ್ಪ, ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಗುತ್ತಿಗೆದಾರನಾಗಿದ್ದ. ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಆತ ವಾಸವಾಗಿದ್ದ. ಇತ್ತೀಚಿಗೆ ಹಣಕಾಸು ಹಾಗೂ ಕೌಟುಂಬಿಕ ವಿಚಾರವಾಗಿ ದರಿಯಪ್ಪ ಸಂಸಾರದಲ್ಲಿ ತಾಳಮೇಳ ತಪ್ಪಿತ್ತು. ಇದೇ ವಿಷಯವಾಗಿ ಮನೆಯಲ್ಲಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು.ಮನೆಯಲ್ಲಿ ಎರಡು ಲಕ್ಷ ರು ಹಣವನ್ನು ದರಿಯಪ್ಪ ಇಟ್ಟಿದ್ದರು. ಈ ಹಣವನ್ನು ತನ್ನ ಸೋದರನಿಗೆ ಸಾಲ ಕೊಡುವುದಾಗಿ ಕಾವ್ಯ ಹೇಳಿದ್ದಳು. ಇದಕ್ಕೆ ದರಿಯಪ್ಪ ಆಕ್ಷೇಪಿಸಿದ್ದಾನೆ. ಆಗ ದಂಪತಿ ಮಧ್ಯೆ ಜಗಳವಾಗಿದೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ತಾರಕ್ಕೇರಿದೆ. ಈ ಹಂತದಲ್ಲಿ ಕೆರಳಿದ ದರಿಯಪ್ಪ, ಪತ್ನಿಯನ್ನು ನೆಲಕ್ಕೆ ಕೆಡವಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ದರಿಯಪ್ಪ ಸ್ತ್ರೀಲೊಲ: ಸ್ನೇಹಿತನ ಹೇಳಿಕೆ
ಮೃತ ಕಾವ್ಯ ಸಂಭಾವಿತೆ. ಆದರೆ ದರಿಯಪ್ಪ ನೈತಿಕವಾಗಿ ಹಾದಿ ತಪ್ಪಿದವನು. ಆತನಿಗೆ ಪರಸ್ತ್ರೀ ವ್ಯಾಮೋಹ ಹೆಚ್ಚಿತ್ತು ಎಂದು ದರಿಯಪ್ಪ ಸ್ನೇಹಿತರು ಹೇಳಿದ್ದಾರೆ. ತನ್ನ ಪತ್ನಿಗೆ ಗೆಳೆತಿಯರ ಪೋಟೋ ತೋರಿಸಿ ಹಿಂಸೆ ಕೊಡುತ್ತಿದ್ದ. ಪತಿಯ ವರ್ತನೆಯಿಂದ ಕಾವ್ಯ ನೊಂದಿದ್ದಳು. ಇದೇ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಹಲವು ಬಾರಿ ಸತಿ-ಪತಿ ಮಧ್ಯೆ ರಾಜಿ ಸಂಧಾನ ನಡೆಸಲಾಗಿತ್ತು. ಹೀಗಿದ್ದರೂ ದರಿಯಪ್ಪ ಮಾತ್ರ ಬದಲಾಗಿರಲಿಲ್ಲ ಎಂದು ಕಿಡಿಕಾರಿದ್ದಾರೆ.