ಹುತ್ತರಿ ಹಬ್ಬವನ್ನು ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ದುಗ್ಗಳ ಸದಾನಂದ
ಕನ್ನಡಪ್ರಬ ವಾರ್ತೆ ನಾಪೋಕ್ಲುಕೊಡಗಿನ ಸುಗ್ಗಿಯ ಹಬ್ಬವಾದ ಧಾನ್ಯ ಲಕ್ಷ್ಮೀಯನ್ನು ಬರಮಾಡಿಕೊಳ್ಳುವ ಹುತ್ತರಿ ಹಬ್ಬ ವನ್ನು ಗುರುವಾರ ಜಿಲ್ಲೆಯಾದ್ಯಂತ ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಗುರುವಾರ ರಾತ್ರಿ ಹುತ್ತರಿ ಹಬ್ಬದ ಮೊದಲ ಪೂಜೆ ನಡೆಯಿತು. ಬಳಿಕ ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭತ್ತದ ಕದಿರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿತು. ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ಸುತ್ತಮುತ್ತಲಿನ ಪೊಂಗೇರ, , ಕೋಳೆಯಂಡ, ಬೊಳ್ಳನಮ್ಮಂಡ, ಹಳ್ಳಿ ಮಾಡ ಸೇರಿದಂತೆ ಅಮ್ಮಂಗೇರಿಯ ಸುತ್ತಲಿನ ಕುಟುಂಬದವರು ಊರಿನ, ಪರವೂರಿನ ಭಕ್ತರು ಪಾಲ್ಗೊಂಡಿದ್ದರು. ದೇವಾಲಯದ ಸುತ್ತಮುತ್ತಲಿನ ವಿವಿಧ ಕುಟುಂಬಗಳ ಮಹಿಳೆಯರು ತಳಿಯಕ್ಕಿ ಬೊಳಕ್ನೊಂದಿಗೆ ದೇವಾಲಯಕ್ಕೆ ಆಗಮಿಸಿದರು. ಬಳಿಕ ಕುಡಿಯರ ಕಾವೇರಪ್ಪ ಮತ್ತು ಸಂಗಡಿಗರಿಂದ ದುಡಿಕೊಟ್ ಪಾಟ್ ನುಡಿಸಲಾಯಿತು. ಬಳಿಕ ಹಿರಿಯರಾದ ಪೊಂಗೇರ ಉಲ್ಲಾಸ್ ದೇವರ ನಡೆಯಲ್ಲಿ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆನಂತರ ಜಾಗಟೆ, ಡೋಲು ಸಹಿತ ಬೆಳ್ಳಿಯ ಬಿಂದಿಗೆಯೊಂದಿಗೆ ಮುಕ್ಕಾಟಿ ಸುಬ್ರಮಣಿ ಹಾಗೂ ವಿವಿಧ ಕುಟುಂಬಗಳ ಮಹಿಳೆಯರು ತಳಿಯಕ್ಕಿ ಬೊಳಕ್ನೊಂದಿಗೆ ಭಕ್ತಾದಿಗಳು ಪೊಂಗೇರ ಅಪ್ಪಣ್ಣನವರ ಮಾಬಲ್ಯ ಗದ್ದೆಗೆ ತೆರಳಿ ಪೂಜೆ ವಿಧಿವಿಧಾನ ನೆರವೇರಿಸಿದರು. ನಿಗದಿತ ಸಮಯದಲ್ಲಿ ಕುಶಾಲು ತೋಪು ಹಾರಿಸಿ ಪೊಲಿಪೊಲಿ ಬಾ ಉದ್ಘೋಷಗಳನಡುವೆ ಪಟಾಕಿಗಳ ಮೊರೆಕದೊಂದಿಗೆ ಕದಿರನ್ನು ಮುಕ್ಕಾಟಿ ಸುಬ್ರಮಣಿ ಅವರು ಭತ್ತದ ಕದಿರುಗಳನ್ನು ಕೊಯ್ದು ಇತರರ ಕೈಗೆ ಕೊಟ್ಟರು . ನಂತರ ಭತ್ತದ ಕದಿರಿನೊಂದಿಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಾಲಯದ ಅಶ್ವತ್ಥ ಕಟ್ಟೆಗೆ ಪ್ರದಕ್ಷಿಣೆ ಬಂದು ತೆನೆಗಳನ್ನು ಅರ್ಚಕರಿಗೆ ಒಪ್ಪಿಸಲಾಯಿತು. ಬಳಿಕ ದೇವಾಲಯದ ನಮಸ್ಕಾರ ಮಂಟಪದಲ್ಲಿರಿಸಿ ವಿಶೇಷ ಧಾನ್ಯಲಕ್ಷ್ಮಿ ಪೂಜೆಯನ್ನು ಅರ್ಚಕರಾದ ಜಗದೀಶ್, ಅರ್ಚಕ ವೃಂದ , ಶ್ರೀಕಾಂತ್ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಅನಂತರ ಪ್ರಥಮವಾಗಿ ಕದಿರು ದೇವರ ಗರ್ಭಗುಡಿ ಸೇರಿದಂತೆ ದೇವಾಲಯದ ವಿವಿಧ ಕಡೆಯಲ್ಲಿ ಕಟ್ಟಲಾಯಿತು. ಬಳಿಕ ಭಕ್ತರಿಗೆ ಕದಿರು, ತೀರ್ಥಪ್ರಸಾದವನ್ನು ವಿತರಿಸಲಾಯಿತು. ದೇವಾಲಯದಲ್ಲಿ ನಡೆದ ಆಚರಣೆಯಲ್ಲಿ ಊರಿನ, ಪರವೂರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸುಬ್ರಹ್ಮಣ್ಯ ಯುವಕ ಸಂಘದ ವತಿಯಿಂದ ತಳಿರು ತೋರಣ ವ್ಯವಸ್ಥೆಯನ್ನು ಮಾಡಲಾಗಿತ್ತು.ಬಳಿಕ ದೇವಾಲಯದ ಸುತ್ತಮುತ್ತಲಿನ ಕುಟುಂಬಸ್ಥರು ತಮ್ಮ ತಮ್ಮ ಮನೆಗೆ ತೆರಳಿ ಅವರ ಗದ್ದೆಯಿಂದ ಕದಿರು ತೆಗೆದು ಪಟಾಕಿ ಬಾಣ, ಬಿರುಸು, ಹಾಗೂ ಹುತ್ತರಿಯ ವಿಶೇಷ ತಿಂಡಿ, ತಿನಿಸು ಹಾಗೂ ಹೊಸ ಅಕ್ಕಿಯಿಂದ ಮಾಡಿದ ಪಾಯಸ ಗಳೊಂದಿಗೆ ಹುತ್ತರಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.