ನಾನು ಸಚಿವನಾಗಿದ್ದೇ ದೇವಾಂಗ ಸಮಾಜದಿಂದ: ಸಚಿವ ಮಧು ಬಂಗಾರಪ್ಪ

| Published : Feb 24 2025, 12:33 AM IST

ಸಾರಾಂಶ

ನಾನು ಸಚಿವನಾಗಿದ್ದೇನೆ ಎಂದರೆ ಅದಕ್ಕೆ ದೇವಾಂಗ ಸಮಾಜದ ಕೊಡುಗೆ ಇದೆ. ನಿಮ್ಮ ಸಮಾಜದ ಆಶ್ರಯ, ಅನ್ನ ಪಡೆದು ಶಿಕ್ಷಣ ಪಡೆದು ಬಂಗಾರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು. ಅದೇ ರೀತಿ ನಾನು ಸಚಿವನಾಗಿದ್ದೇನೆ ಎಂದು ಜಿಲ್ಲಾ ಉಸ್ತುವಾರ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಲೆನಾಡು ದೇವಾಂಗ ಸಮಾದ ಸುವರ್ಣ ಮಹೋತ್ಸವ । ಸ್ಮರಣ ಸಂಚಿಕೆ ಬಿಡುಗಡೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾನು ಸಚಿವನಾಗಿದ್ದೇನೆ ಎಂದರೆ ಅದಕ್ಕೆ ದೇವಾಂಗ ಸಮಾಜದ ಕೊಡುಗೆ ಇದೆ. ನಿಮ್ಮ ಸಮಾಜದ ಆಶ್ರಯ, ಅನ್ನ ಪಡೆದು ಶಿಕ್ಷಣ ಪಡೆದು ಬಂಗಾರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು. ಅದೇ ರೀತಿ ನಾನು ಸಚಿವನಾಗಿದ್ದೇನೆ ಎಂದು ಜಿಲ್ಲಾ ಉಸ್ತುವಾರ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಲೆನಾಡು ದೇವಾಂಗ ಸಮಾದ ಸುವರ್ಣ ಮಹೋತ್ಸವ ಕಟ್ಟಡ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸುವರ್ಣ ಸ್ಮರಣ ಸಂಚಿಕೆ ‘ಮಲೆನಾಡು ದೇವಾಂಗ ಸೌರಭ’ ವನ್ನು ಬಿಡುಗಡೆಗೊಳಿಸಿ ಮಾತನಾಡಿ, ನಿಮ್ಮ ಸಮಾಜದ ಸಹಕಾರ ಇರದಿದ್ದರೆ ಅವರು ಸಿಎಂ ಆಗುತ್ತಿರಲಿಲ್ಲ ಎಂದರು.

ಚಿತ್ರನಟ ಶಿವರಾಜ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಿದ ಡಾ.ಮುರುಗೇಶ್ ಮನೋಹರ್ ನಿಮ್ಮ ಸಮಾಜದವರು. ಅವರ ಬಳಿ ಚಿಕಿತ್ಸೆಗೆ ಯಾವುದೇ ಭಾರತೀಯರು ಹೋದರೂ ಅವರ ಬಳಿ ಶುಲ್ಕ ಪಡೆಯುವುದಿಲ್ಲ. ನಿಮ್ಮ ಸಮಾಜದಲ್ಲಿ ಬಹಳಷ್ಟು ಜನ ಸಾಧಕರಿದ್ದಾರೆ. ನಿಮ್ಮ ಹಕ್ಕುಗಳಿಗೆ ಆಗ್ರಹಿಸಬೇಕು. ಆಗ ಮಾತ್ರ ನಿಮ್ಮ ಕೆಲಸಗಳನ್ನು ನಾವು ಮಾಡಿಕೊಡಲು ಸಾಧ್ಯ ಎಂದು ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಸಂಘಟಿತರಾಗಬೇಕು ಎಂದು ಒಂದು ಸಮಾಜಕ್ಕೆ ಹೇಳಲಿಲ್ಲ. ಅದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಸಮಾಜಕ್ಕೆ ಬೇಕಾದ ಅನುಕೂಲ ಕಲ್ಪಿಸಿಕೊಡಲು ಸರ್ಕಾರ ಸಿದ್ದವಿದೆ. ದೇವಾಂಗ ಅಭಿವೃದ್ಧಿ ನಿಗಮಕ್ಕೆ ಅವಶ್ಯವಿರುವ ಅನುದಾನ ಮೀಸಲಿಟ್ಟು ನಿಗಮ ಘೋಷಣೆ ಮಾಡುವ ಬಗ್ಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಅನುದಾನ ನೀಡುವುದು ನಮ್ಮ ಕರ್ತವ್ಯ. ದೇವಾಂಗ ಸಮಾಜದ ಪದಾಧಿಕಾರಿಗಳಲ್ಲಿ ಹೆಚ್ಚಿನವರು ನಿವೃತ್ತ ಸರಕಾರಿ ನೌಕರರೆ ಆಗಿದ್ದಾರೆ. ಅವರು ತಮ್ಮ ನಿವೃತ್ತ ಜೀವನವನ್ನು ಕುಟುಂಬದ ಜತೆ ಕಳೆಯಬಹುದಿತ್ತು. ಆದರೆ ಅವರು ಸಮಯವನ್ನು ಸಮಾಜದ ಸಂಘಟನೆ ಹಾಗೂ ಪ್ರಗತಿಗೆ ಮೀಸಲಿಟ್ಟಿದ್ದಾರೆ. ಈ ಕಾರ್ಯಕ್ಕೆ ಜನಪ್ರತಿನಿಧಿಗಳಾಗಿ ಕೈ ಜೋಡಿಸುವುದು ನಮ್ಮ ಕರ್ತವ್ಯ ಎಂದರು.

ಹಂಪಿ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ಧಾರವಾಢ ಕವಲಗೇರಿ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಮಲೆನಾಡು ದೇವಾಂಗ ಸಮಾಜದ ಅಧ್ಯಕ್ಷ ಪಿ.ಆರ್. ಗಿರಿಯಪ್ಪ, ಇಸ್ರೋ ವಿಜ್ಞಾನಿ ಕಲ್ಪನಾ ಅರವಿಂದ್, ಅಂತಾರಾಷ್ಟ್ರೀಯ ಯೋಗಪಟು ಡಿ.ನಾಗರಾಜ್, ಚಿತ್ರನಟ ಶ್ರೀನಿವಾಸಮೂರ್ತಿ, ಮಾನ್ವಿಯ ಲೇಖಕ ರಮೇಶ್ ಬಾಬು ಯಾಳಗಿ, ಡಿಆರ್‌ಡಿಒ ನಿವೃತ್ತ ಡೈರೆಕ್ಟರ್ ಜನರಲ್ ಡಾ.ಎಸ್.ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪದಾಧಿಕಾರಿಗಳು, ಪ್ರಮುಖರನ್ನು ಅಭಿನಂದಿಸಲಾಯಿತು.

ಅಖಿಲ ಭಾರತ ದೇವಾಂಗ ಸಂಘದ ಅಧ್ಯಕ್ಷ ಅರುಣ್ ವರಾಡೆ, ಡಾ.ಸಿ.ವಾಸುದೇವಪ್ಪ, ಬಿ.ಆರ್.ಯೋಗೀಶ್, ಡಿಡಿಪಿಐ ಎಸ್.ಆರ್.ಮಂಜುನಾಥ್, ಭಾಸ್ಕರಯ್ಯ, ಮೋಹನ್ ಮೂರ್ತಿ, ಸಮಾಜದ ಬಂಧುಗಳಿದ್ದರು.