ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಹಿರಿಯರಾಗಿದ್ದು, ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ನಾನು ಕೂಡ ನೂತನ ಸರ್ಕಾರದಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ತಿಳಿಸಿದರು.

ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ವರ್ಷಕ್ಕೆ ಶಾಲಾ ಮಕ್ಕಳನ್ನ ಸ್ವಾಗತಿಸಿ ಅವರಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳ ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ಬಾರಿ ಶಾಸಕನಾಗಿ, ಸೆಸ್ಕಾಂ ನಿಗಮ ಮಂಡಳಿ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದೇನೆ. ಸಾಕಷ್ಟು ಅನುಭವದ ಜೊತೆಗೆ ಹಿರಿಯರಾಗಿದ್ದು ಸಚಿವನಾಗಲು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದರು.

ಕ್ಷೇತ್ರದಲ್ಲಿ ನಮ್ಮ ತಂದೆ ಸಚಿವರಾಗಿ ಹಾಗೂ ನಮ್ಮ ತಾಯಿ ಶಾಸಕರಾಗಿ ಹಾಗೂ ನಾನು ಮೂರು ಬಾರಿ ಶಾಸಕರಾಗಿದ್ದ ಸಮಯದಿಂದ ಅನುಭವ ಹೊಂದಿದ್ದೇನೆ. ನಿಗಮ ಮಂಡಳಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಇದರಿಂದ ನನಗೂ ಸಚಿವರಾಗಿ ರಾಜ್ಯದಲ್ಲಿ ಜನರ ಸೇವೆ ಮಾಡಲು ಅನುಕೂಲ ಮಾಡಬೇಕು. ಪಕ್ಷದ ಹೈಕಮಾಂಡ್ ನಾಯಕರು ಅವಕಾಶ ಮಾಡಿಕೊಟ್ಟರೆ ಸಚಿವ ಸ್ಥಾನ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಎಂದರು.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕು ಜಿಲ್ಲೆಗೆ 5ನೇ ಸ್ಥಾನ ಪಡೆದಿದೆ. ಶೇ.95 ರಷ್ಟು ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ. ಮುಂದಿನ ದಿನದಲ್ಲಿ ಎಲ್ಲಾ ಶಾಲೆಗಳಲ್ಲೂ ಶೇ.100 ಫಲಿತಾಂಶ ಬರಬೇಕು. ಪೋಷಕರ ಜೊತೆಗೆ ಶಿಕ್ಷಕರು ಇದರ ಜವಾಬ್ದಾರಿ ವಹಿಸಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಿ ಎಂದು ಕರೆ ನೀಡಿದರು.


ಈ ವೇಳೆ ತಾಪಂ ಇಒ ಚಂದ್ರು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್ ಲೋಕೇಶ್, ವಿದ್ಯಾ ಇಲಾಖೆ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ. ರಾಜು, ಪುರಸಭಾ ಮಾಜಿ ಸದಸ್ಯರಾದ ಕೃಷ್ಣಪ್ಪ, ಗಂಜಾಂ ಶಿವು ಸೇರಿದಂತೆ ಉಪ ಪ್ರಾಂಶುಪಾಲರು, ಶಿಕ್ಷಕರು ಉಪಸ್ಥಿತರಿದ್ದರು.