ಸಾರಾಂಶ
ಕನ್ನಡಪ್ರಭವಾರ್ತೆ ತುರುವೇಕೆರೆ
ನ್ಯಾಯಾಧೀಶ ಹುದ್ದೆ ಬಿಟ್ಟು ಜನರ ಸೇವೆ ಮಾಡಲೆಂದು ರಾಜಕೀಯಕ್ಕೆ ಬಂದ ನತದೃಷ್ಟ ನಾನು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಬೇಸರಿಸಿದರು.ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಸ್ತಿಗೊಂಡನಹಳ್ಳಿಯ ಎಂ.ದೇವರಾಜ್ ರವರ ಪದಗ್ರಹಣ ಸಮಾರಂಭ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನ ಸೇವೆ ಮಾಡಲು ರಾಜಕೀಯ ಕ್ಷೇತ್ರ ಅತ್ಯಂತ ಉತ್ತಮವಾದ ವೇದಿಕೆ. ಆದರೆ ಅಧಿಕಾರ ಬೇಕು. ಅಧಿಕಾರ ಇದ್ದರೆ ಕ್ಷೇತ್ರದ ಅಭಿವೃದ್ಧಿಯನ್ನೂ ಮಾಡಬಹುದು. ಜೊತೆಗೆ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸಲು ಸಾಧ್ಯ. ಹಾಗಾಗಿ ನಾನು ನ್ಯಾಯಾಧೀಶರ ಹುದ್ದೆಯನ್ನು ತೊರೆದು ಜನ ಸೇವೆಗಾಗಿ ರಾಜಕೀಯ ಕ್ಷೇತ್ರಕ್ಕೆ ಬಂದೆ. ಆದರೆ ಈಗ ಒಂದು ರೀತಿಯಲ್ಲಿ ನಿರಾಸೆಯಾಗುತ್ತಿದೆ. ನಾನು ಅಧಿಕಾರದಲ್ಲಿದ್ದಾಗ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಗಮನ ನೀಡಿದೆ. ಕ್ಷೇತ್ರದಾದ್ಯಂತ ಸಂಚರಿಸಿ ಜನರ ನೋವು ನಲಿವುಗಳಿಗೆ ಸ್ಪಂದಿಸಿದೆ. ಆದರೆ ಏಕೋ ಜನರು ನನ್ನನ್ನು ಕೈ ಬಿಟ್ಟರು ಎಂದು ಬೇಸರಿಸಿಕೊಂಡರು.
ವಿಧಾನ ಪರಿಷತ್ ನ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ನ ಮೈತ್ರಿ ಬಹುಶಃ ಈ ಲೋಕಸಭಾ ಚುನಾವಣೆಗೆ ಕ್ಲೋಸ್. ಬಿಜೆಪಿ ಮೈತ್ರಿಗೆ ಅಪಸ್ವರ ಎತ್ತಿದರೆ ಮೈತ್ರಿ ಇನ್ನು ಮೂರ್‍ನಾಲ್ಕು ತಿಂಗಳಲ್ಲಿ ಖತಂ ಆಗಲಿದೆ ಎಂದು ಬೆಮಲ್ ಕಾಂತರಾಜ್ ಭವಿಷ್ಯ ನುಡಿದರು.ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷ ಎಂ.ದೇವರಾಜು ಮಾತನಾಡಿ ಹಲವಾರು ವರ್ಷಗಳ ನಂತರ ವೀರಶೈವ ಲಿಂಗಾಯತ ಸಮುದಾಯಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ದೊರೆತಿದೆ. ಪಕ್ಷದಿಂದ ದೂರವಿರುವವರನ್ನು ಪಕ್ಷದ ವೇದಿಕೆಗೆ ಕರೆತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಳಾಲ ನಾಗರಾಜು, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ಸುಬ್ರಮಣಿ ಶ್ರೀಕಂಠೇಗೌಡ, ಕೆ.ಬಿ.ಹನುಮಂತಯ್ಯ, ನಂಜುಂಡಪ್ಪ, ಮಾಳೆ ಕೃಷ್ಣಪ್ಪ, ಲಕ್ಷ್ಮಿದೇವಮ್ಮ, ಗಿರಿಜಮ್ಮ, ಜಿ.ಆರ್.ರಂಗೇಗೌಡ, ಟಿ.ಎನ್.ಶಿವರಾಜು, ವೇಣುಗೋಪಾಲ್, ತ್ರೈಲೋಕಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.