ನಾನೇನು ಸನ್ಯಾಸಿಯಲ್ಲ. ನನ್ನ ಹಕ್ಕು ಕೇಳುತ್ತಿದ್ದೇನೆ. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಾನೇನು ಸನ್ಯಾಸಿಯಲ್ಲ. ನನ್ನ ಹಕ್ಕು ಕೇಳುತ್ತಿದ್ದೇನೆ. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವಂತೆ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಕೇಳಿದ್ದೇನೆ. ಪ್ರಬಲ ಆಕಾಂಕ್ಷಿ ಎಂಬುದನ್ನು ಮನದಟ್ಟು ಮಾಡಿದ್ದೇನೆ ಎಂದರು.
ಮುಖ್ಯಮಂತ್ರಿ ಸ್ಥಾನದ ಗೊಂದಲವನ್ನು ಪರಿಹಾರ ಮಾಡುವುದರ ಜೊತೆಗೆ ಹೊಸಬರಿಗೆ ಸಚಿವ ಸ್ಥಾನ ನೀಡುವ ವಿಚಾರವನ್ನು ಹೈಕಮಾಂಡ್ ಶೀಘ್ರ ಬಗೆಹರಿಸಬೇಕು ಎಂದು ಆಗ್ರಹಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯದಲ್ಲಿ ಗೊಂದಲ ಮೂಡಿಸಿದೆ. ಇದರಿಂದ ಪಕ್ಷಕ್ಕೂ ಹಾನಿಯಾಗಿದೆ. ಕೇಂದ್ರದ ನಾಯಕರೆ ಈ ಸಮಸ್ಯೆ ಪರಿಹರಿಸಬೇಕು. ಇನ್ನು, ಸಹಿ ಸಂಗ್ರಹ ವಿಚಾರದಲ್ಲಿ ತಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ. ನಾನು ಯಾವುದೇ ಬಣದಲ್ಲಿ ಗುರುತಿಸಿಕೊಂಡಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಜವಾದ ಬಣದಲ್ಲಿ ಇದ್ದೇನೆ. ನನ್ನದು ಹೈಕಮಾಂಡ್ ಬಣ ಎಂದರು.ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಕೇಳಿದ್ದಾರೆ. ಜಿ.ಪರಮೇಶ್ವರ ಅವರು ಸಿಎಂ ಸ್ಥಾನ ಕೇಳಿದ್ದಾರೆ. ಆದರೆ ಸಿಎಂ ಸ್ಥಾನ ಕೊಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ರಾಷ್ಟ್ರೀಯ ನಾಯಕರು ತೀರ್ಮಾನಿಸಿದರೆ ಸಿಎಂ ಸಹ ಬದಲಾಗಬಹುದು, ಮಂತ್ರಿಗಳು ಕೂಡ ಬದಲಾಗಬಹುದು ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಯಾರನ್ನು ರಕ್ಷಣೆ ಮಾಡಲ್ಲ. ಚಿನ್ನಯ್ಯ ರಕ್ಷಣೆ ವಿಚಾರ ಒಂದೇ ಬರಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ. ಸರ್ಕಾರ ಎಸ್‌ಐಟಿ ಮಾಡಿದ ಮೇಲೆ ತನಿಖೆ ಆಗಿದೆ. ಎಲ್ಲವೂ ನಿರ್ಧಾರ ಮಾಡುತ್ತದೆ. ಕೋರ್ಟ್ ಬೇಲ್ ಕೊಟ್ಟಿದೆ. ಅವರು ಬಗೆಹರಿಸಿಕೊಳ್ಳುತ್ತಾರೆ ಎಂದರು.ಕಾಂಗ್ರೆಸ್ ಸರ್ಕಾರ ಕೊಟ್ಟ ಪಂಚ ಗ್ಯಾರಂಟಿ ಬಡವರ ಮನೆ ತಲುಪಿದೆ. ಒಂದೆರಡು ತಿಂಗಳು ಡಿಲೇ ಆಗಿರಬಹುದು ಅಷ್ಟೆ. ಜನರಿಗೆ ಮೂಲಭೂತ ಸೌಕರ್ಯದ ಕೊರತೆ ಆಗಿಲ್ಲ. ಸಿಎಂ ಬದಲಾವಣೆ ಗೊಂದಲದಿಂದ ಗ್ಯಾರಂಟಿ ನಿಂತುಹೋಗಿದೆ ಎಂಬುದನ್ನ ಒಪ್ಪಲ್ಲ, ಖಂಡಿತಾ ಬಡವರ ಮನೆಗೆ ಗ್ಯಾರಂಟಿ ಯೋಜನೆ ಬೆಳಕಾಗಿದೆ. ಈಗ ಬರುವಂತ ಹಣ ಕೂಡ ಶೀಘ್ರದಲ್ಲೇ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಡಿಸಿಸಿ ಬ್ಯಾಂಕ್ ರಾಜ್ಯ ನಿರ್ದೇಶಕ ಎಂ.ಶ್ರೀಕಾಂತ್ ಇದ್ದರು.