ನಾನು ಕಾಲಹರಣ ಮಾಡುವ ಶಾಸಕ ಅಲ್ಲ: ಭೀಮಣ್ಣ

| Published : Jun 22 2024, 12:48 AM IST

ಸಾರಾಂಶ

ಬಿಜೆಪಿಗರು ಉಡಾಫೆ ಹೇಳಿಕೆ ನೀಡುವುದನ್ನು ಬಿಟ್ಟು ಲೋಪವಿದ್ದರೆ ತಿಳಿಸಲಿ. ಸುಪ್ರವೈಸರ್ ಶಬ್ದದ ಅರ್ಥ ಗೊತ್ತಿದೆಯೇ? ಜವಾಬ್ದಾರಿ ಅರಿತು ಕೆಲಸ ಮಾಡುವವನು ನಾನು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಶಿರಸಿ: ನಾನು ಕಾಲಹರಣ ಮಾಡುವ ಶಾಸಕ ಅಲ್ಲ. ಜನರ ತೆರಿಗೆ ಹಣ ದುರುಪಯೋಗವಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಸುಪ್ರವೈಸರ್ ಹೇಳಿರುವುದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗರು ಉಡಾಫೆ ಹೇಳಿಕೆ ನೀಡುವುದನ್ನು ಬಿಟ್ಟು ಲೋಪವಿದ್ದರೆ ತಿಳಿಸಲಿ. ಸುಪ್ರವೈಸರ್ ಶಬ್ದದ ಅರ್ಥ ಗೊತ್ತಿದೆಯೇ? ಜವಾಬ್ದಾರಿ ಅರಿತು ಕೆಲಸ ಮಾಡುವವನು ನಾನು. ಬಿಜೆಪಿಯವರು ಯಾವ ಮುಖ, ಯಾವ ಆತ್ಮಸ್ಥೈರ್ಯ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಬೇರೆ ಯಾವುದೇ ವಿಷಯವಿಲ್ಲದ ಕಾರಣ, ತೈಲ ಬೆಲೆ ಏರಿಕೆ ಮಾಡಿರುವುದರ ಬಗ್ಗೆ ಹೋರಾಟ ಹಮ್ಮಿಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ತಮಗೆ ನೀಡಿದ ಅವಕಾಶದಲ್ಲಿ ಜನರಿಗೆ ಏನು ಮಾಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಪರೋಕ್ಷವಾಗಿ ಕಾಗೇರಿ ವಿರುದ್ಧ ಗುಡುಗಿದರು.

ಪ್ರಧಾನಿ ನರೇಂದ್ರ ಮೋದಿ ಹೇಳಿದ ಭರವಸೆ ಯಾವುದನ್ನು ಈಡೇರಿಸಿದ್ದಾರೆ ಎಂಬುದನ್ನು ತಿಳಿಸಲಿ. ೧೦ ವರ್ಷದಲ್ಲಿ ೨೦ ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ನಿರುದ್ಯೋಗ ಸೃಷ್ಟಿ ಮಾಡಿರುವುದು ಕೇಂದ್ರ ಸರ್ಕಾರದ ದೊಡ್ಡ ಸಾಧನೆ ಎಂದು ಆರೋಪಿಸಿದ ಶಾಸಕ, ಗೃಹಲಕ್ಷ್ಮೀ ಯೋಜನೆ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹೨ ಸಾವಿರ, ವಿದ್ಯುತ್ ಬಿಲ್, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆ, ಯುವನಿಧಿ ಯೋಜನೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಬಿಜೆಪಿಗರಿಗೆ ತಾಕತ್ತು ಇದ್ದರೆ ಗ್ಯಾರಂಟಿ ಯೋಜನೆಗಳನ್ನು ಬೇಡ ಎಂದು ಜನರ ಬಳಿ ಹೇಳಲಿ. ಆಗ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಪ್ರಸನ್ನ ಶೆಟ್ಟಿ, ನಗರಸಭಾ ಸದಸ್ಯರಾದ ಖಾದರ್ ಆನವಟ್ಟಿ, ಶಮೀಮಾ ಬಾನು ಶಿಕಾರಿಪುರ, ರುಬೇಕಾ, ಗೀತಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ ನಾಯ್ಕ ಗಾಯತ್ರಿ ನೇತ್ರೇಕರ ಮತ್ತಿತರರು ಇದ್ದರು.ವಸೂಲಿ ಮಾಡುತ್ತಿದ್ದರೆ ಗಮನಕ್ಕೆ ತನ್ನಿ

ಲಕ್ಷ ಲಕ್ಷ ಹಣ ಕೊಟ್ಟರೆ ಮಾತ್ರ ಫಾರಂ ನಂಬರ್- ೩ ಪಡೆಯಲು ಸಾಧ್ಯವಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ, ಫಾರಂ ನಂಬರ್- ೩, ಇ ಸ್ವತ್ತು ಸೇರಿದಂತೆ ನಗರಸಭೆಯಲ್ಲಿ ಇನ್ನಿತರ ಕೆಲಸಕ್ಕೆ ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದನ್ನು ನನ್ನ ಗಮನಕ್ಕೆ ತಂದರೆ, ನಾನೇ ಸ್ವತಃ ಅವರ ಕೆಲಸ ಮಾಡಿಕೊಡುತ್ತೇನೆ ಎಂದರು.