ನಾನು ಬಿಜೆಪಿ, ಕಾಂಗ್ರೆಸ್ಸಿನಲ್ಲಿ ಇಲ್ಲ, ಶಾಸಕ ಅಷ್ಟೇ: ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟನೆ

| Published : Aug 28 2024, 12:54 AM IST

ನಾನು ಬಿಜೆಪಿ, ಕಾಂಗ್ರೆಸ್ಸಿನಲ್ಲಿ ಇಲ್ಲ, ಶಾಸಕ ಅಷ್ಟೇ: ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಯಡಿಯೂರಪ್ಪನವರ ಗೌರವಕ್ಕೆ ಧಕ್ಕೆಯಾಗುವ ರೀತಿ ನಾನು ಎಂದೂ ಮಾತನಾಡಿಲ್ಲ. ಮಾತನಾಡುವ ಸಂಸ್ಕೃತಿಯೇ ತಿಳಿಯದವರ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಮುಖಂಡರಿಗೆ ಶಾಸಕ ಶಿವರಾಮ ಹೆಬ್ಬಾರ ತಿರುಗೇಟು ನೀಡಿದರು.

ಶಿರಸಿ: ನಾನು ಈಗ ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ಇಲ್ಲ. ನಾನೊಬ್ಬ ಶಾಸಕ ಅಷ್ಟೇ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಪಪಡಿಸಿದರು.ಮಂಗಳವಾರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಂದಾಗಿಯೇ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು ಸತ್ಯ. ಅದೇ ರೀತಿ ನಾವು ೧೭ ಜನ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದರಿಂದಲೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ್ದೂ ಸತ್ಯ. ಯಡಿಯೂರಪ್ಪನವರ ಗೌರವಕ್ಕೆ ಧಕ್ಕೆಯಾಗುವ ರೀತಿ ನಾನು ಎಂದೂ ಮಾತನಾಡಿಲ್ಲ. ಮಾತನಾಡುವ ಸಂಸ್ಕೃತಿಯೇ ತಿಳಿಯದವರ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

ನಕಲಿ ದಾಖಲೆ ನೀಡಿ ಕಾರು ಖರೀದಿಯಲ್ಲಿ ಸಿಬ್ಬಂದಿ ತಪ್ಪಿಲ್ಲ

ಶಿರಸಿ: ಕೆಡಿಸಿಸಿ ಬ್ಯಾಂಕ್‌ಗೆ ನಕಲಿ ದಾಖಲೆ ನೀಡಿ ಕಾರು ಖರೀದಿಸಿದ ಪ್ರಕರಣದಲ್ಲಿ ಸಿಬ್ಬಂದಿ ತಪ್ಪಿಲ್ಲ. ಆರೋಪಿಗಳೂ ಕಂತುಗಳನ್ನು ಸರಿಯಾದ ಸಮಯಕ್ಕೆ ತುಂಬಿದ್ದರಿಂದ ಸಿಬ್ಬಂದಿಯ ಅರಿವಿಗೂ ಬಂದಿರಲಿಲ್ಲ. ಇನ್ನು ಮುಂದೆ ಏಜೆನ್ಸಿಯೊಂದನ್ನು ನೇಮಿಸಲಾಗಿದ್ದು, ಶೋ ರೂಮ್‌ಗೆ ತೆರಳಿ, ವಾಹನದ ಫೋಟೊ ತೆಗೆದ ಬಳಿಕವೇ ಸಾಲದ ಡಿಡಿ ಬರೆಯಲಿದ್ದೇವೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.ಮಂಗಳವಾರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ೪೨ ಕಾರುಗಳನ್ನು ನಕಲಿ ದಾಖಲೆ ನೀಡಿ ಖರೀದಿಸಿದ್ದರು. ೨೨ ಕಾರುಗಳ ಸಾಲವನ್ನು ಅವರು ಮರುಪಾವತಿಸಿದ್ದಾರೆ. ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಯಾವ ಕಾರಣಕ್ಕೂ ಹಣ ಬಾಕಿ ಆಗದಂತೆ ಸಂಪೂರ್ಣ ಹಣವನ್ನು ವಾಪಸ್ ತುಂಬಿಸಿಕೊಳ್ಳುತ್ತೇವೆ ಎಂದರು. ಇನ್ನು ಮುಂದೆ ವಾಹನ ಸಾಲ ಮಂಜೂರಾತಿಗೆ ಮುನ್ನ ವಾಹನ ಶೋರೂಂಗೆ ನಮ್ಮ ಸಿಬ್ಬಂದಿ ತೆರಳಿ ಪರಿಶೀಲನೆ ಮಾಡಿದ ಬಳಿಕವೇ ಹಣ ಬಿಡುಗಡೆ ಮಾಡುತ್ತೇವೆ ಎಂದರು.

ಅಡಕೆ ಬೆಳೆಗೆ ಈ ವರ್ಷ ಕೊಳೆರೋಗ ವಿಪರೀತವಾಗಿದ್ದು, ರೈತರು ಹಾನಿ ಅನುಭವಿಸಿದ್ದಾರೆ. ಆದರೆ, ಬೆಳೆ ಸಾಲದ ಅವಧಿ ವಿಸ್ತರಣೆಯ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬೆಳೆ ಸಾಲದ ಕಂತು ವಿಸ್ತರಿಸುವುದರಿಂದಾಗಿ ರೈತರಿಗೂ ಯಾವುದೇ ಪ್ರಯೋಜನವಾಗುವುದಿಲ್ಲ. ಬೆಳೆ ಸಾಲದ ಕಂತು ವಿಸ್ತರಿಸಿದರೆ ರೈತರು ಎರಡು ವರ್ಷಗಳ ಬಳಿಕ ಒಮ್ಮೆಲೇ ಎಲ್ಲ ಕಂತು ತುಂಬಬೇಕಾದ ಸ್ಥಿತಿ ಬರಲಿದೆ. ಒಂದೊಮ್ಮೆ ಸರ್ಕಾರ ಕಂತಿನ ಅವಧಿ ವಿಸ್ತರಿಸದಿದ್ದರೆ ಒಂದು ವರ್ಷದ ಬಳಿಕ ಶೂನ್ಯ ಬಡ್ಡಿದರದ ಸೌಲಭ್ಯವೂ ಸಿಗದಂತಾಗುತ್ತದೆ ಎಂದರು.