ಇಷ್ಟೆಲ್ಲಾ ಆದಮೇಲೂ ಕೂಡ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವಂತಾಯಿತು ಎಂದು ಈ ಹಿಂದಿನ ರಾಜಕಾರಣವನ್ನು ನೆನಪಿಸಿಕೊಂಡ ಸಚಿವರು, ಯಾರ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂಬುದನ್ನು ತಾಲೂಕಿನ ಜನರು ಈಗಲಾದರೂ ಅರ್ಥೈಸಿಕೊಳ್ಳಬೇಕು ,
ಕನ್ನಡಪ್ರಭ ವಾರ್ತೆ ನಾಗಮಂಗಲ
ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಪಕ್ಷವನ್ನು ಉಳಿಸಿದವನೇ ನಾನು. ಇದನ್ನು ಅರ್ಥೈಸಿಕೊಳ್ಳದೆ ಚಲುವರಾಯಸ್ವಾಮಿ ಮಾಡಬಾರದ ಅನ್ಯಾಯ ಮಾಡಿ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಹೋದರೆಂದು ನನ್ನ ವಿರುದ್ಧ ಮತ ಹಾಕುವುದು ಎಷ್ಟು ಸರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಅರಳೀಸೆರೆಕೊಪ್ಪಲು ಗ್ರಾಮದಲ್ಲಿ ₹1 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಜೆಡಿಎಸ್‌ಗಾಗಿ ಶ್ರಮಿಸಿದ ನಿಷ್ಠಾವಂತ ನಾಯಕರನ್ನು ಪಕ್ಷದಿಂದ ಹೊರಹಾಕುವ ಮೂಲಕ ಅವರು ದೋಷ ಮಾಡಿಕೊಂಡರೇ ಹೊರತು ನನ್ನಿಂದ ಜೆಡಿಎಸ್‌ಗೆ ಯಾವುದೇ ದೋಷವಾಗಿಲ್ಲ ಎಂದು ತಿಳಿಸಿದರು.
ಕಳೆದ 35 ವರ್ಷಗಳ ಹಿಂದಿನ ಚುನಾವಣೆಯಲ್ಲಿ ತಾಲೂಕಿನಿಂದ ಸ್ಪರ್ಧಿಸಿದ್ದ ಜನತಾದಳದ ಅಭ್ಯರ್ಥಿ ಕೇವಲ 3 ಸಾವಿರ ಮತ ಪಡೆದಿದ್ದರು. ನಂತರ 1994ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಲ್.ಆರ್.ಶಿವರಾಮೇಗೌಡ ಗೆಲುವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ವಿ.ಧರಣೇಂದ್ರಬಾಬು ಎರಡನೇ ಸ್ಥಾನ, ಜನತಾದಳದ ಅಭ್ಯರ್ಥಿಯಾಗಿದ್ದ ಎಚ್.ಟಿ.ಕೃಷ್ಣಪ್ಪ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದರು ಎಂದರು.ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 1994ರಲ್ಲಿ ನಾನು ಜಿಪಂ ಉಪಾಧ್ಯಕ್ಷನಾಗಿ ಎಸ್.ಡಿ.ಜಯರಾಂ ಅವರ ಜೊತೆಗೂಡಿ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಈ ನಡುವೆ ದಿ.ಕೆ.ಎನ್.ನಾಗೇಗೌಡರು ಮತ್ತು ಎಲ್.ಆರ್.ಶಿವರಾಮೇಗೌಡರಿಗೋಸ್ಕರ ದೇವೇಗೌಡರಾದಿಯಾಗಿ ಜಿಲ್ಲೆಯ ಜನತಾದಳದ ನಾಯಕರೆಲ್ಲರೂ ನನ್ನ ವಿರುದ್ಧ ನಿಂತರು. ಆರೋಗ್ಯ ಸಮಸ್ಯೆಯಿಂದ ಎಸ್.ಡಿ.ಜಯರಾಂ ಅವರು ನಿಧನರಾದ ನಂತರ ಜನತಾದಳದ ನಾಯಕರು ಕೊಡಬಾರದ ಹಿಂಸೆ ಕೊಟ್ಟರೂ ಎಲ್ಲವನ್ನೂ ಸಹಿಸಿಕೊಂಡು ನಾನು ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ ಎಂದು ತಿಳಿಸಿದರು.
1999ರ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಆಹ್ವಾನ ಕೊಟ್ಟರೂ ನಾನು ಹೋಗಲಿಲ್ಲ. ಆ ವೇಳೆ ದೇವೇಗೌಡರೇ ನನ್ನನ್ನು ಕರೆದು ನಾಗೇಗೌಡರು ಮತ್ತು ಶಿವರಾಮೇಗೌಡರಿಗೋಸ್ಕರ ನಿನ್ನನ್ನು ದೂರ ಇಟ್ಟಿದ್ದೆ. ಈಗ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಎಸ್.ಡಿ.ಜಯರಾಂ ಇಲ್ಲ. ನೀನೂ ಪಕ್ಷ ಬಿಟ್ಟು ಹೋದರೆ ಜಿಲ್ಲೆಯಲ್ಲಿ ನಾಯಕರಿಲ್ಲದಂತಾಗುತ್ತದೆ. ಆಗಿರುವ ತಪ್ಪನ್ನು ಮುಂದೆ ಸರಿ ಮಾಡಿಕೊಳ್ಳೋಣ, ಪಕ್ಷದಲ್ಲಿ ಇರಬೇಕು ಎಂದಾಗ ಒಬ್ಬ ಮಾಜಿ ಪ್ರಧಾನಿಗೆ ಗೌರವ ಕೊಟ್ಟು ಪಕ್ಷದಲ್ಲೇ ಉಳಿದಿದ್ದೆ ಎಂದರು.ಇಷ್ಟೆಲ್ಲಾ ಆದಮೇಲೂ ಕೂಡ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವಂತಾಯಿತು ಎಂದು ಈ ಹಿಂದಿನ ರಾಜಕಾರಣವನ್ನು ನೆನಪಿಸಿಕೊಂಡ ಸಚಿವರು, ಯಾರ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂಬುದನ್ನು ತಾಲೂಕಿನ ಜನರು ಈಗಲಾದರೂ ಅರ್ಥೈಸಿಕೊಳ್ಳಬೇಕು ಎಂದರು.
ಗ್ರಾಮಕ್ಕೆ ಆಗಮಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮಹಿಳೆಯರು ಬೆಲ್ಲದಾರತಿ ಮಾಡಿ ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಂಡರು. ನಂತರ ಶಿವನಹಳ್ಳಿಯಲ್ಲಿ ₹14 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ, ಎಚ್.ಕ್ಯಾತನಹಳ್ಳಿಯಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ, ಕುರುಡುಮಾಯಣ್ಣಗೌಡನಕೊಪ್ಪಲು ಮತ್ತು ಹರಳಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಕೂಚಹಳ್ಳಿಯಲ್ಲಿ ಮಾದರಿ ಗ್ರಾಮ ಯೋಜನೆಗೆ ಚಾಲನೆ ನೀಡಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಕಾಂಗ್ರೆಸ್ ಮುಖಂಡ ಸುನಿಲ್ ಲಕ್ಷ್ಮೀಕಾಂತ್, ಎಂ.ಪ್ರಸನ್ನ, ಬೋನಗೆರೆ ಸುರೇಶ್, ಕೆಆರ್‌ಐಡಿಎಲ್‌ನ ಇಇ ಸೋಮಶೇಖರ್, ಗ್ರಾಮದ ಮುಖಂಡರಾದ ಗಂಗಪ್ಪ, ದೇವರಾಜು, ಶ್ರೀಕಂಠ, ನಂದೀಶ್, ರವಿ, ಕೂಚಹಳ್ಳಿ ನವೀನ್ ಕುಮಾರ್ ಸೇರಿದಂತೆ ಹಲವರು ಇದ್ದರು.