ಬೆಂಗಳೂರು ಉತ್ತರಕ್ಕೆ ನಾನು ಚಿರಪರಿಚಿತೆ: ಶೋಭಾ ಕರಂದ್ಲಾಜೆ

| Published : Mar 16 2024, 01:52 AM IST / Updated: Mar 16 2024, 11:24 AM IST

ಬೆಂಗಳೂರು ಉತ್ತರಕ್ಕೆ ನಾನು ಚಿರಪರಿಚಿತೆ: ಶೋಭಾ ಕರಂದ್ಲಾಜೆ
Share this Article
  • FB
  • TW
  • Linkdin
  • Email

ಸಾರಾಂಶ

ನಾವೆಲ್ಲರೂ ಒಗ್ಗಟ್ಟಾಗಿ ರಾಜ್ಯಾದ್ಯಂತ 28 ಕ್ಷೇತ್ರಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕರ್ತರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಯಶವಂತಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿ ಮಂತ್ರಿ ಕೂಡ ಆಗಿದ್ದೆ, ಹಾಗಾಗಿ ಈ ಭಾಗಗಳಲ್ಲಿ ಚಿರಪರಿಚಿತಳಾಗಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಶೆಟ್ಟಿಹಳ್ಳಿಯಲ್ಲಿ ಶಾಸಕ ಎಸ್.ಮುನಿರಾಜು ಅವರನ್ನು ಭೇಟಿ ಮಾಡಿ ಬೆಂಬಲ ಕೋರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒಂದು ಅವಕಾಶವನ್ನು ಬಿಜೆಪಿ ವರಿಷ್ಠರು ಕೊಟ್ಟಿದ್ದಾರೆ. 

ಹಿಂದಿನಿಂದಲೂ ನಿರಂತರವಾಗಿ ಶಾಸಕ ಮುನಿರಾಜಣ್ಣ ಕೂಡ ನನಗೆ ನಿರಂತರವಾಗಿ ಬೆಂಬಲ ಸೂಚಿಸಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ರಾಜ್ಯಾದ್ಯಂತ 28 ಕ್ಷೇತ್ರಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಳ್ಳಬೇಕು ಎಂದರು.

ಕರ್ನಾಟಕದ ಕಾರ್ಯಕರ್ತರಲ್ಲಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಉತ್ಸಾಹ ಎಲ್ಲೆಡೆ ಕಾಣುತ್ತಿದೆ. ಆ ವಿಶ್ವಾಸ ನಮಗೂ ಇದೆ. 

ಜೆಡಿಎಸ್ ಕೂಡ ನಮ್ಮ ಜೊತೆ ಬಂದಮೇಲೆ ದಕ್ಷಿಣ ಕರ್ನಾಟಕದಲ್ಲಿ ಗೆಲುವು ಕಾಣಲು ಸಾಧ್ಯವಾಗಿದೆ. ಅವರ ಮತ್ತು ನಮ್ಮ ಶಕ್ತಿ ಸೇರಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ಶಕ್ತಿ, ವಿಶ್ವಾಸ ಹೊಂದಿದ್ದೇವೆ ಎಂದು ತಿಳಿಸಿದರು.

ಗೋ ಬ್ಯಾಕ್ ಪ್ರತಿಭಟನೆಯ ಹೇಳಿಕೆ ಯಾರು ಮಾಡಿದ್ದಾರೆ? ಯಾರು ಹೇಳಿಸಿದ್ದಾರೆ? ಎಂದು ಎಲ್ಲವೂ ಕೂಡ ಷಡ್ಯಂತರವಿದೆ. ಅದರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ ಎಂದರು.

ಎಲ್ಲರಿಗೂ ಅವಕಾಶ ಕೇಳುವ ಹಕ್ಕಿದೆ. ಆದರೆ ಪಕ್ಷ ಅಧಿಕೃತ ಅಭ್ಯರ್ಥಿಯನ್ನಾಗಿ ಯಾರನ್ನು ಘೋಷಣೆ ಮಾಡುತ್ತದೆ ಅವರಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ನಿರೀಕ್ಷೆ ಇದೆ ಎಂದರು.

ಶಾಸಕ ಎಸ್. ಮುನಿರಾಜು ಮಾತನಾಡಿ, ಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಲು, ಈ ದೇಶದ ಗೌರವವನ್ನು ಉಳಿಸಲು, ದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡುವುದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಶೋಭಾ ಕರಂದ್ಲಾಜೆ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸೋಣ ಎಂದರು.

ಈ ಸಂದರ್ಭದಲ್ಲಿ ನಾಗರಾಜ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್, ಉತ್ತರ ಜಿಲ್ಲಾ ಲೋಕಸಭಾ ಚುನಾವಣೆ ಸಂಚಾಲಕ ಸಚ್ಚಿದಾನಂದ, ಕ್ಷೇತ್ರದ ಮಹಿಳಾ ಮುಖಂಡರು, ಯುವ ಮೋರ್ಚಾ ಮುಖಂಡರು, ಬಿಜೆಪಿ ಹಿರಿಯ ಮುಖಂಡರು ಇದ್ದರು.

ಆದಿಚುಂಚನಗಿರಿ ಶ್ರೀಗಳ ಆಶಿರ್ವಾದ ಪಡೆದ ಸಂಸದೆ

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿತವಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದಲ್ಲಿನ ಶಾಸಕರು ಹಾಗೂ ಮುಖಂಡರನ್ನು ಭೇಟಿ ಮಾಡುವ ಮೂಲಕ ತಮಗೆ ಎದುರಾಗಿದ್ದ ಪ್ರತಿರೋಧವನ್ನು ಕಡಮೆಗೊ‍ಳಿಸುವ ಪ್ರಯತ್ನದಲ್ಲಿದ್ದಾರೆ.

ಗುರುವಾರವಷ್ಟೇ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರನ್ನು ಭೇಟಿ ಮಾಡಿದ್ದ ಶೋಭಾ ಅವರು ಶುಕ್ರವಾರ ಶಾಸಕ ಕೆ.ಗೋಪಾಲಯ್ಯ ಸೇರಿದಂತೆ ಹಲವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಇದೇ ವೇಳೆ ಶೋಭಾ ಅವರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಚನ ಪಡೆದರು.