ಸಾರಾಂಶ
ಬೆಂಗಳೂರು : ‘ನನಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ. ಕಳೆದ ಕೆಲ ದಿನಗಳಿಂದ ಕ್ಯಾನ್ಸರ್ ಇದೆ, ನಾನು ಹಾಡುವುದನ್ನು ನಿಲ್ಲಿಸಿದ್ದೇನೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಇದರಿಂದ ನನ್ನ ಕುಟುಂಬಸ್ಥರಿಗೆ ಬಹಳ ನೋವಾಗಿದೆ, ವೃತ್ತಿಗೆ ಹೊಡೆತ ಬೀಳುತ್ತಿದೆ’ ಎಂದು ಗಾಯಕಿ ಅರ್ಚನಾ ಉಡುಪ ಹೇಳಿದ್ದಾರೆ.
ಈ ಮೂಲಕ ಅರ್ಚನಾ ಉಡುಪ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆಂದು ಕೆಲದಿನಗಳಿಂದ ಹರಡುತ್ತಿರುವ ಗಾಸಿಪ್‌ಗೆ ಸ್ವತಃ ಗಾಯಕಿ ಅರ್ಚನಾ ಉಡುಪ ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಕನ್ನಡಪ್ರಭ ಜೊತೆಗೆ ಮಾತನಾಡಿದ ಅವರು, ‘ಈ ಸುದ್ದಿ ಕೆಲ ತಿಂಗಳುಗಳಿಂದ ನನ್ನ ಕಿವಿಗೆ ಬೀಳುತ್ತಲೇ ಇತ್ತು. ಹೋದಲ್ಲೆಲ್ಲ ಜನ ಆರೋಗ್ಯದ ಬಗ್ಗೆ ವಿಚಾರಿಸುವುದು, ಹಾಡೋದು ನಿಲ್ಲಿಸಿದ್ದೀರಂತೆ ಅಂತ ಅನುಕಂಪ ತೋರಿಸೋದು, ನಾನು ಸ್ಪಷ್ಟನೆ ನೀಡೋದು ಇತ್ಯಾದಿ ನಡೆಯುತ್ತಿತ್ತು. ಇತ್ತೀಚೆಗೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗಲಂತೂ ಇದ್ದಬದ್ದವರೆಲ್ಲ ಬಂದು ಆರೋಗ್ಯ ವಿಚಾರಿಸಿ, ಮತ್ತೆ ಹಾಡೋದಕ್ಕೆ ಶುರು ಮಾಡಿದ್ದೀರಾ ಅಂತೆಲ್ಲ ವಿಚಾರಿಸಿಕೊಂಡರು. ಧಾರಾವಾಹಿಯ ಒಂದು ಪಾತ್ರಕ್ಕಾಗಿ ನಾನು ಶಾರ್ಟ್ ಹೇರ್‌ಕಟ್ ಮಾಡಿಸಿಕೊಂಡಿದ್ದು ಈ ಸುದ್ದಿಗೆ ಮತ್ತಷ್ಟು ಇಂಬು ನೀಡಿತ್ತು.
ಈ ಬಗ್ಗೆ ಸೋಷಲ್ ಮೀಡಿಯಾದಲ್ಲೂ ಚರ್ಚೆ ನಡೆಯುತ್ತಿತ್ತು. ಇಷ್ಟೇ ಆಗಿದ್ದರೆ ಹೇಗೋ ಸಹಿಸಿಕೊಳ್ತಿದ್ದೆ. ಆದರೆ ಈ ಸುಳ್ಳುಸುದ್ದಿಯಿಂದ ನನ್ನ ವೃತ್ತಿಗೂ ಹೊಡೆತಬೀಳತೊಡಗಿತು. ಅನೇಕರು ನಾನೀಗ ಹಾಡೋದು ನಿಲ್ಲಿಸಿದ್ದೇನೆ ಎಂದುಕೊಂಡು ಕಾರ್ಯಕ್ರಮಗಳಿಗೆ ಕರೆಯೋದನ್ನು ನಿಲ್ಲಿಸತೊಡಗಿದರು. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತು ಸೋಷಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದೆ’ ಎಂದು ಹೇಳಿದ್ದಾರೆ.
‘ನಾಲ್ಕು ವರ್ಷಗಳ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ 20 ವರ್ಷಗಳ ಕೆಳಗೆ ನನಗೆ ಗಂಟಲಿನ ಸಮಸ್ಯೆಯಿಂದಾಗಿ ಹಾಡಲಾಗದ್ದರ ಬಗ್ಗೆ ಮಾತನಾಡಿದ್ದೆ. ಆ ಕ್ಲಿಪ್ ಸೋಷಲ್ ಮೀಡಿಯಾದಲ್ಲಿ ಮತ್ತೆ ಮೇಲೆದ್ದು ಬಂದು ಈ ಎಲ್ಲ ರಾದ್ಧಾಂತ ಆಗಿದೆ. ಇದಕ್ಕೆ ಸಂಬಂಧಪಟ್ಟವರಿಗೆ ತಿಳಿಸಿದಾಗ ಅವರು ತಕ್ಷಣವೇ ವೀಡಿಯೋ ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಇದು ಹಲವೆಡೆ ಶೇರ್ ಆಗಿಬಿಟ್ಟಿತ್ತು. ಎಲ್ಲರ ಬಳಿ ನನ್ನ ಕೋರಿಕೆ ಇಷ್ಟೇ- ಸೋಷಿಯಲ್ ಮೀಡಿಯಾಗಳ ಸಣ್ಣ ಸಣ್ಣ ವೀಡಿಯೋ ಕ್ಲಿಪ್ ನೋಡಿ ದಯವಿಟ್ಟು ಏನೇನೋ ಊಹೆ ಮಾಡಬೇಡಿ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ. ದೇವರ ದಯದಿಂದ ನಾನು ಗಟ್ಟಿಮುಟ್ಟಾಗಿ ಆರೋಗ್ಯವಾಗಿದ್ದೀನಿ’ ಎಂದೂ ಗಾಯಕಿ ಹೇಳಿದ್ದಾರೆ.