ಕನ್ನಡಪ್ರಭ ವಾರ್ತೆ ಬೆಂಗಳೂರು
ನನಗೆ ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಜಿಲ್ಲಾಧ್ಯಕ್ಷರು ಬೇಕಾಗಿಲ್ಲ. ಸಕ್ರಿಯವಾಗಿ ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡುವವರು ಬೇಕು. ಮುಂದಿನ ದಿನಗಳಲ್ಲಿ ಅಂಥವರಿಗೆ ಮಾತ್ರ ಅವಕಾಶ ನೀಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಮಂಗಳವಾರ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ನಡೆದ ಜಿಲ್ಲಾಧ್ಯಕ್ಷರ ಸಭೆ ಉದ್ದೇಶಿಸಿ ಮಾತನಾಡಿ, ಕೋರ್ ಕಮಿಟಿ ಸಭೆಗೆ ಕಡ್ಡಾಯವಾಗಿ ಎಲ್ಲಾ ಸದಸ್ಯರು ಹಾಜರಾಗಬೇಕು. ಯಾರೇ ಆಗಲಿ ಎರಡು ಅಥವಾ ಮೂರು ಸಭೆಗಳಿಗೆ ಗೈರು ಹಾಜರಾದರೆ ಕಡ್ಡಾಯವಾಗಿ ಅವರನ್ನು ಬದಲಿಸಿ ಬೇರೊಬ್ಬರನ್ನು ನೇಮಿಸುವುದಾಗಿ ತಿಳಿಸಿದರು.
ಪಕ್ಷ ಸಂಘಟನೆಯನ್ನು ನಿಷ್ಠೆಯಿಂದ ಮಾಡಬೇಕು. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಕೇವಲ ವಿಸಿಟಿಂಗ್ ಕಾರ್ಡ್ ಮತ್ತು ಲೆಟರ್ ಹೆಡ್ ಶೋಕಿ ಇರುವ ಜನ ನನಗೆ ಬೇಕಿಲ್ಲ. ಅಂಥವರಿಂದ ಪಕ್ಷಕ್ಕೆ ಯಾವುದೇ ಉಪಯೋಗವೂ ಇಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.ಸಕ್ರಿಯವಾಗಿ ಪಕ್ಷದ ಕೆಲಸ ಮಾಡಬೇಕು. ಜಿಲ್ಲಾಧ್ಯಕ್ಷ ಅಥವಾ ಕೋರ್ ಕಮಿಟಿ ಜವಾಬ್ದಾರಿ ಎನ್ನುವುದು ಕೇವಲ ಅಲಂಕಾರಕ್ಕೆ ಅಲ್ಲ. ಈಗ ಇರುವವರು ಉತ್ತಮವಾಗಿ ಕೆಲಸ ಮಾಡಿ. ನಿಮ್ಮಿಂದ ಆಗಲಿಲ್ಲ ಎಂದರೆ ಕೆಲಸ ಮಾಡುವವರಿಗೆ ಅವಕಾಶ ಬಿಟ್ಟುಕೊಡಿ. ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಕೆಲ ಭಾಗದಲ್ಲಿ ಮುಖಂಡರ ವರ್ತನೆಯಿಂದ ಪಕ್ಷಕ್ಕೆ ಸಮಸ್ಯೆ ಆಗುತ್ತಿದೆ ಎಂದು ಎಂದು ಕುಮಾರಸ್ವಾಮಿ ನೇರವಾಗಿ ತಿಳಿಸಿದರು.
ಪ್ರತಿಷ್ಠೆಗಿಂತ ಪಕ್ಷನಿಷ್ಠೆ ಮುಖ್ಯ:
ಪ್ರತಿಷ್ಠೆಗಿಂತ ಪಕ್ಷನಿಷ್ಠೆ ಬಹಳ ಮುಖ್ಯ. ಯಾವುದೋ ಹುದ್ದೆ ಸಿಕ್ಕಿದೆ ಎಂದರೆ ಅದು ಅಜೀವ ಹುದ್ದೆ ಅಲ್ಲ. ಯಾವುದೇ ಜವಾಬ್ದಾರಿ ಸಿಕ್ಕಿದರೂ ಪಕ್ಷದ ಕೆಲಸ ಮಾಡುವುದಕ್ಕೆ ಸಿಕ್ಕಿದ ಅವಕಾಶ ಅಷ್ಟೇ. ಹೀಗಾಗಿ ಪ್ರತಿಯೊಬ್ಬರೂ ಪಕ್ಷದ ಕೆಲಸ ಮಾಡಬೇಕು. ಕನಿಷ್ಠ ದಿನಕ್ಕೆ ಒಂದು ಗಂಟೆಯಾದರೂ ಪಕ್ಷದ ಕೆಲಸ ಮಾಡಬೇಕು ಎಂದು ಖಡಕ್ ಆಗಿ ಹೇಳಿದರು.
ರಾಜ್ಯದಲ್ಲಿ ರೈತರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಸೇರಿ ಎಲ್ಲ ವರ್ಗದ ಜನರೂ ತೊಂದರೆಗೆ ಸಿಕ್ಕಿದ್ದಾರೆ. ಈ ಸರ್ಕಾರ ಯಾವುದೇ ಒಳ್ಳೆಯ ಕೆಲಸ ಮಾಡುತ್ತಿಲ್ಲ. ಕೇವಲ ಗ್ಯಾರಂಟಿಗಳನ್ನು ಇಟ್ಟುಕೊಂಡು ಸರ್ಕಾರ ಪ್ರಚಾರ ಪಡೆಯುತ್ತಿದೆ. ಗ್ರಾಪಂ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಜನಪರ ವಿಷಯಗಳನ್ನು ಇಟ್ಟುಕೊಂಡು ಹೋರಾಟ ನಡೆಸಿ. ಸರ್ಕಾರದ ವೈಫಲ್ಯಗಳನ್ನು ಜನತೆಗೆ ಮನಮುಟ್ಟುವಂತೆ ತಿಳಿಸಿ ಎಂದು ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಸೂಚಿಸಿದರು.ಈ ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಮಲ್ಲೇಶ್ ಬಾಬು, ಶಾಸಕರಾದ ವೆಂಕಟಶಿವಾರೆಡ್ಡಿ, ಎ.ಮಂಜು, ಮಂಜುನಾಥ್, ಶರಣುಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ ಸೇರಿ ಹಲವು ಮುಖಂಡರು ಹಾಗೂ ಜಿಲ್ಲಾಧ್ಯಕ್ಷರು ಪಾಲ್ಗೊಂಡಿದ್ದರು.