ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಚಿವ ಕೆ.ಎಚ್. ಮುನಿಯಪ್ಪಗೆ ವಿಧಾನಸೌಧ ಹಾಗೂ ದೆಹಲಿಯಲ್ಲಿ ನಾನೇ ಭೇಟಿ ಮಾಡಿ ಸಚಿವ ಸ್ಥಾನ ಕೊಡಿಸುವಂತೆ ಮನವಿ ಮಾಡಿದ್ದೆ. ಜಿಲ್ಲೆಯಲ್ಲಿ ೭ ಬಾರಿ ಮತ ಹಾಕಿ ಗೆಲ್ಲಿಸಿದ ಬಲಗೈ ಸಮುದಾಯವನ್ನು ಉಳಿಸಲು ಅವರೇ ಮುಂದೆ ಬರಬೇಕಿತ್ತು. ಆದರೆ ಅವರು ಬಂದಿಲ್ಲ ಎಂದರೆ ಹಿಂದೆ ನಿಂತು ತೊಂದರೆ ಮಾಡಿದ್ದಾರೆ ಅಂತಾನೆ ಅರ್ಥ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಜಿಲ್ಲೆ ಶಾಸಕರು ಹಾಗೂ ಮುಖಂಡರನ್ನು ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಕನಸು ಕಂಡಿದ್ದೆ. ಜಿಲ್ಲೆಯ ಜನಪ್ರತಿನಿಧಿಗಳು, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮಂತ್ರಿ ಸ್ಥಾನ ನೀಡಲು ಮನವಿ ಮಾಡಿದ ಹಿನ್ನೆಲೆಯಲ್ಲಿ ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿ ಜಿಲ್ಲೆಗೆ ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಕಾಣದ ಕೈಗಳು ನಾನು ತೂಕದಲ್ಲಿ ಕಡಿಮೆ ಇರುವುದರಿಂದ ತೂಕ ಹೆಚ್ಚಿರುವವರಿಗೆ ಮೀಸಲು ಸ್ಥಾನವನ್ನು ನೀಡಿದ್ದಾರೆ ಎಂದರು.

ಅವಳಿ ಜಿಲ್ಲೆಗಳಿಗೆ ಮಂತ್ರಿ ಸ್ಥಾನ ನೀಡದಿರುವುದಕ್ಕೆ ಆಕ್ರೋಶಗೊಂಡ ಜನರು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಬಂದ್ ಮಾಡುತ್ತಿದ್ದಾರೆ. ಅದೇ ರೀತಿ ಬಂಗಾರಪೇಟೆಯಲ್ಲೂ ವರ್ತಕರು, ರೈತ ಸಂಘ, ದಲಿತ ಸಂಘ, ಆಟೋ ಚಾಲಕರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬಂದ್ ಮಾಡಿದ್ದಾರೆ. ಬಂದ್ ಆರಂಭವಾಗುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಎಂದಿನಂತೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದೆ. ಈ ನಿಟ್ಟಿನಲ್ಲಿ ಬಸ್ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಲಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಅಧಿಕಾರ ಸಿಗಲಿಲ್ಲ ಎಂಬ ನೋವಿದ್ದರೂ ಜನರ ಹುರುಪನ್ನು ನೋಡಿ ಎಲ್ಲಾ ಶಾಸಕರು ಒಟ್ಟಾಗಿ ಉಸ್ತುವಾರಿ ಸಚಿವರ ಕೈಯನ್ನು ಬಲಪಡಿಸಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಮುಂದಾಗುತ್ತೇನೆ ಎಂದರು.

ಸಚಿವ ಕೆ.ಎಚ್. ಮುನಿಯಪ್ಪನವರ ಅಳಿಯನಿಗೆ ನಾನು ಟಿಕೆಟ್ ತಪ್ಪಿಸಿಲ್ಲ, ಬಲಗೈ ಸಮುದಾಯದ ವಿರೋಧ ಇತ್ತು. ಅವರು ಹೇಗೆ ಎಡಗೈ ಸಮುದಾಯದ ಪರವಾಗಿ ನಿಲ್ಲುತ್ತಾರೋ ಹಾಗೆ ನಾನು ಸಹ ಎರಡು ಜಿಲ್ಲೆಗಳಲ್ಲಿ ಬಲಗೈ ಸಮುದಾಯದ ಪರವಾಗಿ ನಿಲ್ಲುತ್ತೇನೆ. ನನಗೆ ಈಗ ಪಾಠ ಕಲಿಸಿದ್ದಾರೆ, ಮುಂದೆ ನಮ್ಮ ಸಮುದಾಯ ಒಗ್ಗೂಡಿಸುವ ಕೆಲಸ ಮಾಡುತ್ತೇನೆ ಎಂದರು.