ಸಾರಾಂಶ
ಬೆಳಗಾವಿ-ಬೆಂಗಳೂರು ವಂದೇ ಭಾರತ ರೈಲು ತರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದರಂತೆ ರೈಲು ತೆಗೆದುಕೊಂಡು ಬಂದಿದ್ದೇನೆ. ಬೆಳಗಾವಿ ಜನರ ಧ್ವನಿಗೆ ಸ್ಪಂದಿಸಿದ್ದೇವೆ. ಇದರ ಸದುಪಯೋಗವನ್ನು ಜಿಲ್ಲೆಯ ಜನರು ಪಡೆದುಕೊಳ್ಳುವಂತೆ ಸಂಸದ ಜಗದೀಶ ಶೆಟ್ಟರ್ ಕರೆ ನೀಡಿದರು.
ಬೆಳಗಾವಿ : ಬೆಳಗಾವಿ-ಬೆಂಗಳೂರು ವಂದೇ ಭಾರತ ರೈಲು ತರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದರಂತೆ ರೈಲು ತೆಗೆದುಕೊಂಡು ಬಂದಿದ್ದೇನೆ. ಬೆಳಗಾವಿ ಜನರ ಧ್ವನಿಗೆ ಸ್ಪಂದಿಸಿದ್ದೇವೆ. ಇದರ ಸದುಪಯೋಗವನ್ನು ಜಿಲ್ಲೆಯ ಜನರು ಪಡೆದುಕೊಳ್ಳುವಂತೆ ಸಂಸದ ಜಗದೀಶ ಶೆಟ್ಟರ್ ಕರೆ ನೀಡಿದರು.
ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು ಬರಮಾಡಿಕೊಂಡ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಬೆಳಗಾವಿಗೆ ಹೊಸ ರೈಲು ಕೊಟ್ಟಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಬಹಳಷ್ಟು ಅಭಿವೃದ್ಧಿ ಆಗುತ್ತಿದೆ. ದೇಶದಲ್ಲಿ ವಂದೇ ಭಾರತ ರೈಲು ಒಳ್ಳೆಯ ಹೆಸರು ಪಡೆದಿದೆ ಎಂದರು.
ಬೆಳಗಾವಿ- ಕಿತ್ತೂರು- ಧಾರವಾಡ ರೈಲ್ವೆ ಹೊಸ ಮಾರ್ಗಕ್ಕೆ ಈಗಾಗಲೇ 1200 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗನೇ ರೈತರಿಗೆ ಪರಿಹಾರ ಕೊಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಚಿತ್ರಣ ಬದಲಾಗುತ್ತದೆ. ರಿಂಗ್ ರೋಡ್ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ನಡೆದಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಯಾವುದೇ ನಗರದ ಬೆಳವಣಿಗೆಗೆ ರೈಲ್ವೆ, ರಸ್ತೆ, ವಿಮಾನ ಸಂಪರ್ಕದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಬೆಳಗಾವಿ ಅತೀ ವೇಗದಲ್ಲಿ ಅಭಿವೃದ್ಧಿ ಹೊಂದಲಿದೆ. ಬೆಳಗಾವಿಯಿಂದ ಪೂನಾ ವರೆಗೆ ಹೊಸ ವಿಮಾನ ಸೇವೆ ಆರಂಭಿಸಲು ವಿಮಾನ ಸಚಿವರಿಗೆ ಮನವಿ ಮಾಡಿದ್ದೇನೆ. ಅಲ್ಲದೇ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರಿಟ್ಟು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಗುರಿ ಇದೆ ಎಂದು ಜಗದೀಶ ಶೆಟ್ಟರ್ ಹೇಳಿದರು.
ನಾಡಿಗೆ ಅನ್ನ ನೀಡುವ ರೈತರ ಪರ ಅಭಿವೃದ್ಧಿ ಕೆಲಸ ಮಾಡುವುದಾಗಿ ಪ್ರಧಾನಿ ಮೋದಿಯವರು ಹೇಳಿದ್ದಾರೆ. ಭಾರತ ಎಲ್ಲ ದೇಶಗಳಿಗೂ ಮಾದರಿಯಾಗಿದೆ. ಇವತ್ತಲ್ಲಾ ನಾಳೆ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ದೇಶಕ್ಕೆ ಮತ್ತು ಪ್ರಧಾನಮಂತ್ರಿ ಮೋದಿಗೆ ಜೈ ಎನ್ನುತ್ತಾರೆ. ಒಂದಾಗೋಣ ಅಂತಾ ಕೈ ಜೋಡಿಸುತ್ತಾರೆ ಎಂದು ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಭರವಸೆ ಕೊಟ್ಟಂತೆ ವಂದೇ ಭಾರತ ರೈಲು ನಮಗೆ ಸಿಕ್ಕಿದೆ. ಇನ್ನು ಬೆಳಗ್ಗೆ 5.30ಕ್ಕೆ ಇರುವ ಸಮಯವನ್ನು ಬದಲಾವಣೆ ಮಾಡಬೇಕಿದೆ. ಅದೇ ರೀತಿ ಇನ್ನೊಂದು ರೈಲು ಬೇಕು ಎಂಬ ಬಗ್ಗೆಯೂ ಬೇಡಿಕೆ ಇದೆ. ಆ ಕುರಿತು ಸಂಸದ ಜಗದೀಶ ಶೆಟ್ಟರ್ ಅವರ ಜೊತೆಗೆ ಮಾತನಾಡಿ ಸರಿಪಡಿಸೋಣ. ಮತ್ತೊಂದು ರೈಲು ತರುವ ವಿಚಾರದಲ್ಲಿ ಕೆಲಸ ಪ್ರಾರಂಭಿಕ ಹಂತದಲ್ಲಿದೆ. ಬೆಳಗಾವಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ಬೆಳಗಾವಿ ಜಿಲ್ಲೆ ಎಜ್ಯುಕೇಷನ್ ಮತ್ತು ಸಾರಿಗೆ ಕ್ಷೇತ್ರ ಹಬ್ ಆಗಿದೆ. ಮೋದಿ ದೇಶದ ಪ್ರಧಾನಿ ಆದ ಮೇಲೆ ಸಾರಿಗೆ, ರೈಲ್ವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಳಗಾವಿಗೆ ಮಹತ್ವದ ಯೋಜನೆ ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಚರ್ಚೆ ಆಗುತ್ತಿದೆ. ರೈಲ್ವೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಆಗಿದೆ. ಆ ಬಗ್ಗೆಯೂ ಚರ್ಚೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಮೇಯರ್ ಮಂಗೇಶ ಪವಾರ, ಶಾಸಕ ವಿಠ್ಠಲ ಹಲಗೇಕರ, ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಬಿಜೆಪಿ ಮುಖಂಡರಾದ ಗೀತಾ ಸುತಾರ, ಎಫ್.ಎಸ್.ಸಿದ್ದನಗೌಡರ ಇತರರಿದ್ದರು.
ಮುಗಿಲು ಮುಟ್ಟಿದ ಸಂಭ್ರಮ:
ಎರಡು ಗಂಟೆ ಮೊದಲೇ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ಜನ ವಂದೇ ಭಾರತ್ ರೈಲನ್ನು ಕಣ್ತುಂಬಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದರು. ರೈಲು ಬರುತ್ತಿದ್ದಂತೆ ನೆರೆದಿದ್ದ ಜನರಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಸಿಳ್ಳೆ, ಕೇಕೆ, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್, ಮೋದಿ ಮೋದಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ರೈಲಿನ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.