ಕಳಂಕವಿಲ್ಲದೇ ರಾಜಕೀಯ ಮಾಡಿರುವೆ

| Published : Nov 19 2025, 01:00 AM IST

ಸಾರಾಂಶ

ರಾಜಕೀಯದಲ್ಲಿ ಯಾವುದೇ ಕಳಂಕವಿಲ್ಲದೆ ಅಧಿಕಾರ ಮಾಡಿದ್ದೇನೆ. ಮುಂದೆಯೂ ಇದೇ ರೀತಿ ಮುಂದುವರೆಯುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ರಾಜಕೀಯದಲ್ಲಿ ಯಾವುದೇ ಕಳಂಕವಿಲ್ಲದೆ ಅಧಿಕಾರ ಮಾಡಿದ್ದೇನೆ. ಮುಂದೆಯೂ ಇದೇ ರೀತಿ ಮುಂದುವರೆಯುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಸೋಮವಾರ ತಾಲೂಕಿನ ಐತಿಹಾಸಿಕ ಮದಲೂರು ಕೆರೆಗೆ ಬಾಗಿನ ಅರ್ಪಿಸಿ ಗಂಗಾಪೂಜೆ ನೆರವೇರಿಸಿ ಮಾತನಾಡಿದರು. ಶಿರಾ ತಾಲೂಕಿನ ಜನತೆ ನನಗೆ ಮುಂದಿನ ದಿನಗಳಲ್ಲಿ ಆರ್ಶೀವದಿಸಿದರೆ ತಾಲೂಕಿನ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳ ಕೆರೆಗಳಿಗೆ ನೀರನ್ನು ಹರಿಸಲು ಶ್ರಮಿಸುತ್ತೇನೆ. ನಾನು ರಾಜಕೀಯ ಹಿನ್ನೆಲೆಯಿಂದ ಬಂದಿರುವವನಲ್ಲ. ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಮಹದಾಸೆಯಿಂದ ರಾಜಕೀಯಕ್ಕೆ ಬಂದಿದ್ದೇನೆ. ವಿಧಾನಪರಿಷತ್ ಸದಸ್ಯನಾಗಿ ೫ ವರ್ಷದಲ್ಲಿಯೇ ತಾಲೂಕಿನ ೬ ಸರಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದೇನೆ ಎಂದರು.

ಶಿರಾ ತಾಲೂಕಿಗೆ ಹೇಮಾವತಿ ನೀರು ಹರಿಯಲು ಹಲವರ ಕೊಡುಗೆ ಇದೆ ಎಂದು ಹಲವರನ್ನು ಸ್ಮರಿಸಿದ ಅವರು, ಹಾಗೂ ಪಟ್ಟನಾಯಕನಹಳ್ಳಿ ಶ್ರೀಮಠದ ಶ್ರೀ ನಂಜಾವಧೂತ ಸ್ವಾಮೀಜಿಗಳು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಬೇಕೆಂದು ಹಕ್ಕೊತ್ತಾಯ ಮಾಡಿ ಹೋರಾಟ ಮಾಡಿದ ಫಲವಾಗಿ ನೀರು ಹರಿಯಲು ಸಾಧ್ಯವಾಗಿದೆ. ಹೇಮಾವತಿ ನೀರನ್ನು ಮೊದಲು ಹರಿಸಿದ್ದು ಬಿ.ಎಸ್.ಯಡಿಯೂರಪ್ಪ ಅವರು. ಮದಲೂರು ಕೆರೆಗೆ ಶಿರಾ ತಾಲೂಕಿನ ಪ್ರತಿಯೊಬ್ಬ ಪ್ರಜೆಯೂ ಬಾಗಿನ ಅರ್ಪಿಸುವ ಹಕ್ಕು ಇದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ವಿರೋಧಿಗಳಿಗೆ ಟಾಂಗ್‌ ನೀಡಿದರು.