ಸಿದ್ದರಾಮಯ್ಯ ಇಷ್ಟು ಅಸಹಾಯಕರಾಗಿದ್ದನ್ನು ನೋಡೇ ಇರಲಿಲ್ಲ: ಬೊಮ್ಮಾಯಿ

| Published : Jun 29 2025, 01:33 AM IST

ಸಿದ್ದರಾಮಯ್ಯ ಇಷ್ಟು ಅಸಹಾಯಕರಾಗಿದ್ದನ್ನು ನೋಡೇ ಇರಲಿಲ್ಲ: ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಅವರನ್ನು ಮೊದಲಿನಿಂದ ನೋಡಿದ್ದೇನೆ, ಆದರೆ ಅವರು ಇಷ್ಟು ಅಸಹಾಯಕರಾಗಿ ಇರೋದನ್ನು ನೋಡೇ ಇರಲಿಲ್ಲ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 2026ರಲ್ಲಿ ಕರ್ನಾಟಕಕ್ಕೆ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ರಾಣಿಬೆನ್ನೂರು: ಸಿದ್ದರಾಮಯ್ಯ ಅವರನ್ನು ಮೊದಲಿನಿಂದ ನೋಡಿದ್ದೇನೆ, ಆದರೆ ಅವರು ಇಷ್ಟು ಅಸಹಾಯಕರಾಗಿ ಇರೋದನ್ನು ನೋಡೇ ಇರಲಿಲ್ಲ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾರಿಗೋಸ್ಕರ ರಾಜೀ ಆಗ್ತಿದಾರೋ ಗೊತ್ತಿಲ್ಲ. ಇದೇ ತರ ಮುಂದುವರಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ. ಹೊಸ ಸಿದ್ದರಾಮಯ್ಯನೇ ವೀಕ್ ಆಗಿದ್ದಾರೆ ಎಂದರು.

ಬೊಮ್ಮಾಯಿ ಇದ್ದಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು ಎಂಬ ಕಾಂಗ್ರೆಸ್ ನಾಯಕರ ಆರೋಪ ಕುರಿತು ಮಾತನಾಡಿ, ಅವರದೇ ಸರ್ಕಾರ ಇದೆಯಲ್ಲ, ಡಿಪಾರ್ಟಮೆಂಟ್‌ಗಳಿವೆ, ಕಂಪೇರ್ ಮಾಡಲಿ ಎಂದರು.

ಯಾವುದೇ ಪಕ್ಷದ ಸರ್ಕಾರ ಇರಲಿ, ಆಡಳಿತಾವಧಿಯ ಕೊನೆ ವರ್ಷ ರಾಜಕೀಯವಾಗಿ ತೀವ್ರ ಚಟುವಟಿಕೆ ನಡೆಯುತ್ತವೆ. ಆದರೆ ಸರ್ಕಾರದ ದುರಾಡಳಿತ ಹಾಗೂ ಜನವಿರೋಧಿಯಾಗಿರುವ ಕಾರಣ ಈಗಲೇ ಅಸ್ಥಿರತೆ ಕಾಣುತ್ತಿದೆ. ಎರಡೇ ವರ್ಷಗಳಲ್ಲಿ ಅಸ್ಥಿರತೆ ಬಂದಿದೆ. ಈ ಗೊಂದಲದ ಫಲಶ್ರುತಿ 2026ರಲ್ಲಿ ಕರ್ನಾಟಕಕ್ಕೆ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದೆ. ಯಾವಾಗ ಚುನಾವಣೆ ಬಂದರೂ ಅದನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಲ್ಲಿ ನಮಗೆ ಯಾವುದೇ ಅಧಿಕಾರ ಇಲ್ಲ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.

ಹಾವೇರಿ ಜಿಲ್ಲೆಯಾದ್ಯಂತ ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರಾಟ ವಿಚಾರವಾಗಿ ಮಾತನಾಡಿ, ಹಾವೇರಿ ಜಿಲ್ಲೆ ಪೂರ್ತಿ ಕೃಷಿ ಇಲಾಖೆ ಸತ್ತಿದೆ. ಸರ್ಕಾರ ರೈತರನ್ನು ಕೈ ಬಿಟ್ಟಿದೆ. ಉಸ್ತುವಾರಿನೂ ಇಲ್ಲ, ಉಸಾಬರಿನೂ ಇಲ್ಲ. ರಾಣಿಬೆನ್ನೂರಿನಲ್ಲಿ ಕಳಪೆ ಬಿತ್ತನೆ ಬೀಜ ದೊಡ್ಡ ಪ್ರಮಾಣದಲ್ಲಿದೆ. ಹಾನಗಲ್‌ನಲ್ಲಿ ಡುಪ್ಲಿಕೇಟ್ ಡಿಎಪಿ ಸಿಗುತ್ತಿದೆ. ಗೊಬ್ಬರ ರೈತರಿಗೆ ಮುಟ್ಟುತ್ತಿಲ್ಲ. ಯೂರಿಯಾ ರೈತರಿಗೆ ಯಾಕೆ ಕೊಡ್ತಾ ಇಲ್ಲ ಎಂದು ಪ್ರಶ್ನಿಸಿದರು.