ಸಾರಾಂಶ
ಬೆಳಗಾವಿಯಲ್ಲಿ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿಲ್ಲ. ಯಾವುದೇ ಬಗೆಯ ಅಸಮಾಧಾನ ಯಾರಲ್ಲೂ ಇಲ್ಲ.
ಹುಬ್ಬಳ್ಳಿ:
ಬೆಳಗಾವಿಯಲ್ಲಿ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿಲ್ಲ. ಯಾವುದೇ ಬಗೆಯ ಅಸಮಾಧಾನ ಯಾರಲ್ಲೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವತಃ ಪ್ರಭಾಕರ ಕೋರೆ ಅವರೊಂದಿಗೆ ಮಾತನಾಡಿದ್ದೇನೆ. ಅವರು ನಿಮ್ಮ ವಿಷಯ ಚರ್ಚೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಮನೆಗೆ ಬಂದರೆ ಬೇಡ ಎನ್ನಲು ಬರುತ್ತದೆಯೇ ಎಂದು ಹೇಳಿದರು. ಪ್ರಭಾಕರ ಕೋರೆ ಆಗಲಿ, ಬಂದಂತಹ ಮುಖಂಡರಾಗಲಿ ಯಾರಾದರೂ ನೇರವಾಗಿ ಹೇಳಿದ್ದಾರೆಯೇ ಎಂದು ಶೆಟ್ಟರ್ ಪ್ರಶ್ನಿಸಿದರು.
ಯಾರೊಬ್ಬರೂ ನನ್ನ ಬಗ್ಗೆ ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡಿಲ್ಲ. ಹೀಗಾಗಿ ಆ ಬಗ್ಗೆ ನಾನು ಹೇಗೆ ರಿಯಾಕ್ಟ್ ಮಾಡಲಿ? ಕಳೆದ ಮೂರ್ನಾಲ್ಕು ದಿನಗಳಿಂದ ಬೆಳಗಾವಿಯ ಪ್ರತಿಯೊಬ್ಬ ನಾಯಕರೊಂದಿಗೂ ಸಂಪರ್ಕದಲ್ಲಿದ್ದೇನೆ. ಹಿರಿ-ಕಿರಿ ಮುಖಂಡರ ಜತೆಗೆ ಫೋನ್ ಮೂಲಕ ಮಾತನಾಡಿದ್ದೇನೆ. ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿಲ್ಲ. ಎಲ್ಲರೂ ಸ್ವಾಗತವನ್ನೇ ಕೋರಿದ್ದಾರೆ. ರಾಜಕಾರಣದಲ್ಲಿ ಇಲ್ಲದಿರುವವರು ಸಹ ನನಗೆ ಫೋನ್ ಮಾಡಿ ಬೆಳಗಾವಿಗೆ ಬನ್ನಿ. ನೀವು ಬಂದರೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.ಹೀಗಾಗಿ ನಾನು ಬೆಳಗಾವಿ ಹೋಗುವ ವಿಷಯದಲ್ಲಿ ಯಾವುದೇ ಭಿನ್ನಮತವೂ ಇಲ್ಲ, ಮತ್ತೊಂದೂ ಇಲ್ಲ ಎಂದ ಅವರು, ಬೆಳಗಾವಿಗೆ ಸ್ಪರ್ಧಿಸುವಂತೆ ವರಿಷ್ಠರು ಹೇಳಿದರು. ಅದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೇನೆ. 3ನೆಯ ಪಟ್ಟಿಯಲ್ಲಿ ನನ್ನ ಹೆಸರು ಬಿಡುಗಡೆಯಾಗಲಿದೆ. ಬಹುಶಃ ಭಾನುವಾರ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ನಮಗೆ ಮೊದಲಿನಿಂದಲೂ ಟಚ್ ಇದೆ. ವಿರೋಧ ಪಕ್ಷದ ನಾಯಕನಾಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ಓಡಾಡಿದ್ದೇನೆ. ಅಲ್ಲೂ ಪಕ್ಷ ಸಂಘಟನೆ ಕೆಲಸ ಮಾಡಿದ್ದೇವೆ. ಅಲ್ಲಿ ತಮಗೆ ಸಂಪೂರ್ಣ ಬೆಂಬಲ ದೊರೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.